ನಿವೃತ್ತ ಸೈನಿಕರಿಗೆ ಜಮೀನು ಮಂಜೂರಾತಿಗೆ ಆಗ್ರಹ: ತಪ್ಪಿದಲ್ಲಿ ಅ.18 ರಂದು ಉಪವಾಸ ಸತ್ಯಾಗ್ರಹ
ಬಂಟ್ವಾಳ: ತಾಲೂಕಿನಲ್ಲಿ ನಿವೃತ್ತ ಸೈನಿಕರು ಜಮೀನು ಕೋರಿ ಸಲ್ಲಿಸಿರುವ ಅರ್ಜಿಗಳಿಗೆ ಅಧಿಕಾರಿಗಳು ಸ್ಪಂದಿಸದಿರುವ ಹಿನ್ನಲೆಯಲ್ಲಿ ಹಲವಾರ ವರ್ಷದಿಂದ ನಿವೃತ್ತ ಸೈನಿಕರಿಗಾಗಿರುವ ಅನ್ಯಾಯವನ್ನು ಜಿಲ್ಲಾಧಿಕಾರಿಯವರು ಪರಿಶೀಲಿಸಿ ಅವರಿಗೆ ಜಮೀನು ಮಂಜೂರು ಮಾಡಬೇಕು ಇಲ್ಲದಿದ್ದಲ್ಲಿ ಅಕ್ಟೋಬರ್ 18 ರಂದು ನಿವೃತ್ತಸೈನಿಕರ ಜತೆ ದ.ಕ.ಜಿಲ್ಲಾ ದಲಿತ್ ಸೇವಾ ಸಮಿತಿ (ರಿ.) ಬಂಟ್ವಾಳ ತಾಲೂಕುಆಡಳಿತ ಸೌಧದಲ್ಲಿ ಉಪವಾಸಸತ್ಯಾಗ್ರಹ ನಡೆಸಲಿದೆ ಎಂದು ಸಮಿತಿಯ ಸ್ಥಾಪಕಾಧ್ಯಕ್ಷ ಸೇಸಪ್ಪ ಬೆದ್ರಕಾಡು ಎಚ್ಚರಿಸಿದ್ದಾರೆ.
ಶುಕ್ರವಾರ ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಕರ್ನಾಟಕ ಭೂ ಮಂಜೂರಾತಿ ನಿಯಮದ ಪ್ರಕಾರ 1969 ರ ನಿಯಮ 5 ರ ಅನ್ವಯ ಪ್ರತಿ ಗ್ರಾಮದಲ್ಲಿ ನಿಯಮ 3 ರ ಅನ್ವಯ ವಿಲೇವಾರಿ ಗೆ ಲಭ್ಯವಿರುವ ಜಮೀನಿನ ಪೈಕಿ ಶೇ. 10 ರಷ್ಟು ಜಮೀನನ್ನು ಸೈನಿಕರು, ಮಾಜಿ ಸೈನಿಕರಿಗಾಗಿ ಕಾಯ್ದಿರಿಸಬೇಕಾಗುತ್ತದೆ ಆದರೆ ಅಧಿಕಾರಿಗಳು ಜಮೀನಿಗಾಗಿ ಅರ್ಜಿ ಹಾಕಿರುವ ನಿವೃತ್ತ ಸೈನಿಕರಿಗೆ ಜಮೀನು ನೀಡದೆ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿದರು.
ದೇಶ ಕಾಯುವ ಸೈನಿಕರ ಪಾಡೇ ಈ ರೀತಿಯಾದರೆ ಅವರ ಪರ ಧ್ವನಿ ಎತ್ತುವವರು ಯಾರು? ದೇಶ ಸೇವೆಗೈದ ಸೈನಿಕರಿಗೆ ನೀಡುವ ಗೌರವ ಇದೇನಾ ಎಂದು ಪ್ರಶ್ನಿಸಿದ ಅವರು ವೇದಿಕೆಯಲ್ಲಿ ಸೈನಿಕರ ಬಗ್ಗೆ ಪುಂಖಾನು ಪುಂಖವಾಗಿ ಮಾತನಾಡುವ ಎಲ್ಲಾ ರಾಜಕೀಯ ಪಕ್ಷಗಳ ಪ್ರಮುಖರು ನಿವೃತ್ತ ಸೈನಿಕರಿಗೆ ಸಿಗುವ ಸವಲತ್ತಿನ ಪೈಕಿ ಜಮೀನು ಮಂಜೂರಾತಿಯ ವೇಳೆ ಅಡ್ಡಗಾಲಿಡುತ್ತಿರುವುದನ್ನು ಖಂಡನೀಯವಾಗಿದೆ ಎಂದರು.
ಬಂಟ್ವಾಳ ತಾಲೂಕಿನಲ್ಲಿ ಸುಮಾರು70 ಕ್ಕೂ ಅಧಿಕ ಮಂದಿ ನಿವೃತ್ತ ಸೈನಿಕರು ಜಮೀನಿಗಾಗಿ ಅರ್ಜಿ ಸಲ್ಲಿಸಿದ್ದು,ಕಂದಾಯ ಇಲಾಖೆ ಒಂದೇ ಒಂದು ಅರ್ಜಿಗೆ ಜಮೀನು ಮಂಜೂರಾತಿ ನೀಡಿ ವಿಲೇವಾರಿ ಮಾಡಿಲ್ಲ, ನಿವೃತ್ತ ಸೈನಿಕರು ವಯಕ್ತಿಕವಾಗಿ,ತಮ್ಮ ಸಂಘಟನೆಯ ಮೂಲಕ ಹಲವಾರು ಬಾರಿ ಮನವಿ ಸಲ್ಲಿಸಿದರೂ ಸ್ಪಂದನೆ ನೀಡಿಲ್ಲ, ನಿವೃತ್ತ ಸೈನಿಕರಿಗೆ ಇಲಾಖೆ ನೀಡುವ ಗೌರವ ಇದೇನಾ ಎಂದುಅಸಮಾಧಾನ ವ್ಯಕ್ತಪಡಿಸಿದ ಸೇಸಪ್ಪಬೆದ್ರಕಾಡು ಅವರು ನಿವೃತ್ತ ಸೈನಿಕರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ದ.ಕ.ಜಿಲ್ಲಾ ದಲಿತ್ ಸೇವಾ ಸಮಿತಿ ಹೋರಾಟವನ್ನು ಕೈಗೆತ್ತಿಕೊಂಡಿದೆ ಎಂದರು.
ವಿಟ್ಲಪಡ್ನೂರು ಗ್ರಾಮದಲ್ಲಿ ಸರ್ವೇ ನಂ 127 ರಲ್ಲಿ 3.50. ಎಕರೆ ಜಮೀನು ಇದ್ದು 9 ಮಂದಿ ನಿವೃತ್ತ ಸೈನಿಕರ ಅರ್ಜಿಗಳಿವೆ. ಸಜೀಪ ನಡು ಗ್ರಾಮದ ಸರ್ವೇ ನಂ.246-1 ಎ1 ರಲ್ಲಿ 4.06 ಎಕ್ರೆ ಜಮೀನಿದ್ದು, 4 ಮಂದಿ ನಿವೃತ್ತ ಸೈನಿಕರ ಅರ್ಜಿಗಳಿವೆ.ಕೇಪು ಗ್ರಾಮದ ಸರ್ವೇ ನಂ.143 ರಲ್ಲಿ 8.75 ಎಕರೆ ಜಮೀನು ಇದ್ದು 25 ಮಂದಿ ನಿವೃತ್ತ ಸೈನಿಕರ ಅರ್ಜಿಗಳಿವೆ.ಸದ್ಯ ಇವರ ಅರ್ಜಿಗಳು ಕಂದಾಯ ಇಲಾಖೆಯಲ್ಲಿ ಗೆದ್ದಲು ಹಿಡಿದಿವೆ, ನಿವೃತ್ತ ಸೈನಿಕರು ಕಚೇರಿಗೆ ಅಲೆದು ಸುಸ್ತಾಗಿದ್ದಾರೆ.ಈ ಮೂಲಕ ಇಲಾಖಾಧಿಕಾರಿಗಳು ನಿವೃತ್ತ ಸೈನಿಕರಿಗೆ ಅಗೌರವ ತೋರಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಕಾರ್ಯಾಧ್ಯಕ್ಷ ಚಂದ್ರಶೇಖರ್,ನಿವೃತ್ತ ಸೈನಿಕರಾದ ಮೋಹನ್ ಕೆ, ಉಮೇಶ್ ಕೆ ಉಪಸ್ಥಿತರಿದ್ದರು.