ವಿವೇಕ ಜಾಗ್ರತ ಬಳಗಗಳಿಂದ ಯೋಗ ಪರ್ಯಟನ ಕಾರ್ಯಕ್ರಮ
ಬಂಟ್ವಾಳ : ತಾಯಂದಿರು ಗರ್ಭಾವಸ್ಥೆಯಲ್ಲಿಯೇ ಸೂಕ್ತ ಆಧ್ಯಾತ್ಮಿಕ ಸಾಧನೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಮುಂದೆ ಜನಿಸಲಿರುವ ತಮ್ಮ ಮಕ್ಕಳಿಗೆ ಶ್ರೇಷ್ಠ ಸಂಸ್ಕಾರಗಳ ಬೀಜವನ್ನು ಬಿತ್ತಲು ಸಾಧ್ಯ ಹಾಗೂ ಸುಖ ಪ್ರಸವವೂ ಕೂಡ ಸುಲಭ ಸಾಧ್ಯ ತನ್ಮೂಲಕ ಹುಟ್ಟುವ ಮಕ್ಕಳು ಆರೋಗ್ಯವಂತರೂ, ದೃಢ ಮನಸ್ಕರೂ ಆಗಿ ಕುಟುಂಬ, ಸಮಾಜ, ದೇಶಕ್ಕೇ ಕೊಡುಗೆಯಾಗಬಲ್ಲರು ಎಂದು ಸರ್ವ ಕ್ಷೇಮ ಆಸ್ಪತ್ರೆ ಮತ್ತು ಸಂಶೋಧನಾ ಪ್ರತಿಷ್ಠಾನ ಇದರ ಮುಖ್ಯಸ್ಥ ಡಾ.ಎ.ವಿವೇಕ ಉಡುಪ ತಿಳಿಸಿದ್ದಾರೆ.

ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ನಡೆದ ಡಿವೈನ್ ಪಾರ್ಕ್ ಸಾಲಿಗ್ರಾಮದ ಅಂಗ ಸಂಸ್ಥೆಗಳಾದ ಬಂಟ್ವಾಳ, ಮೂಡಬಿದ್ರೆ, ಬೆಳ್ತಂಗಡಿ ವಿವೇಕ ಜಾಗ್ರತ ಬಳಗಗಳ ವತಿಯಿಂದ ನಡೆದ ಯೋಗ ಪರ್ಯಟನಾ ಕಾರ್ಯಕ್ರಮವನ್ನು ಶ್ರೀ ರಾಮರಕ್ಷಾ ಸ್ತೋತ್ರ ಪಠಿಸುವ ಮೂಲಕ ಚಾಲನೆ ನೀಡಿ ಜಗತ್ತಿಗೆ ಹಿಂದೂ ಧರ್ಮದ ಕೊಡುಗೆ ಅಪಾರ, ಆಧುನಿಕ ಒತ್ತಡದ ಜೀವನದಿಂದ ಉಂಟಾಗುತ್ತಿರುವ ಸಮಸ್ಯೆಗಳಿಗೆ ಯೋಗ ಬಹುದೊಡ್ಡ ಪರಿಹಾರವಾಗಿದೆ ಎಂದರು.
ವೇದಿಕೆಯಲ್ಲಿ ಡಿವೈನ್ ಪಾರ್ಕ್‌ನ ಅಧಿಕಾರಿ ಪ್ರೇಮ ಪ್ರಭಾಕರ್, ಬಂಟ್ವಾಳ ವಿವೇಕ ಜಾಗ್ರತ ಬಳಗದ ಅಧ್ಯಕ್ಷೆ ವಸಂತಿ ಕೆ., ಮೂಡಬಿದ್ರೆ ವಿವೇಕ ಜಾಗ್ರತ ಬಳಗದ ಅಧ್ಯಕ್ಷ ರತ್ನಾಕರ ಅಂಚನ್, ಹಿರಿಯ ಕಾರ್ಯಕರ್ತೆ ಉಷಾಕಿರಣ್ ಶೆಟ್ಟಿ, ಬೆಳ್ತಂಗಡಿ ವಿವೇಕ ಜಾಗ್ರತ ಬಳಗದ ಅಧ್ಯಕ್ಷ ರಘು ನಾಯ್ಕ, ಹಿರಿಯ ಕಾರ್ಯಕರ್ತೆ ಸೀತಾರಾಮ ಶೆಟ್ಟಿ ಕುಕ್ಕಿಲ ಉಪಸ್ಥಿತರಿದ್ದರು.
ಪ್ರದೀಪ ಮೂಡಬಿದ್ರೆಯವರು ಸ್ವಾಗತಿಸಿದರು. ಮಧುಸೂದನ್ ಶಂಭೂರು ಪ್ರಸ್ತಾವನೆಗೈದರು. ಶಿವರಾಜ್ ಅಂತರ ವಂದಿಸಿದರು. ಗಿರೀಶ ಹೆಗಡೆ ಬಂಟ್ವಾಳ ಕಾರ್ಯಕ್ರಮ ನಿರೂಪಣೆಗೈದರು.