ಕಲ್ಲಡ್ಕ ರೈತರ ಸೇವಾ ಸಹಕಾರಿ ಸಂಘ ಕ್ಕೆ1.28,68,779.97 ಕೋ.ರೂ. ಲಾಭ : ಕೊಟ್ಟಾರಿ
ಬಂಟ್ವಾಳ: ಕಲ್ಲಡ್ಕ ರೈತರ ಸೇವಾ ಸಹಕಾರಿ ಸಂಘ ನಿ.ವು 2022-23 ನೇ ಸಾಲಿನ ಆರ್ಥಿಕ ವರ್ಷದಲ್ಲಿ 375.58 ಕೋ.ರೂ. ವ್ಯವಹಾರ ನಡೆಸಿ 1.28,68,779.97 ಕೋ.ರೂ. ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಪದ್ಮನಾಭ ಕೊಟ್ಟಾರಿ ತಿಳಿಸಿದ್ದಾರೆ.ಕಲ್ಲಡ್ಕ ಶ್ರೀರಾಮ ಮಂದಿರದ ಮಾದವ ಸಭಾ ಭವನದಲ್ಲಿ ಭಾನುವಾರ ನಡೆದ ಸಂಘದ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂಘವು ಪ್ರಸಕ್ತ ವರ್ಷದಲ್ಲಿ 1427 ಸದಸ್ಯರಿಗೆ ಶೂನ್ಯ ಬಡ್ಡಿ ದರದಲ್ಲಿ 17.54 ಕೋ. ರೂ.ಸಾಲ 133 ಸದಸ್ಯರಿಗೆ ಶೇ.3 ಬಡ್ಡಿದರದಲ್ಲಿ ಕೃಷಿ ಅಭಿವೃದ್ಧಿಗಾಗಿ 4.21 ಕೋಟಿ ಮಧ್ಯಮಾವಧಿ ಸಾಲ, ಇಬ್ಬರು ಸದಸ್ಯರಿಗೆ 1.45 ಲಕ್ಷ ರೂ. ವಾಹನ ಖರೀದಿ ಸಾಲ,36 ಸದಸ್ಯರಿಗೆ ಹಸುಘಟಕ ನಿರ್ವಹಣೆಗಾಗಿ ಶೂನ್ಯ ಬಡ್ಡಿ ದರದಲ್ಲಿ 17.42 ಲಕ್ಷ ರೂ. ಪಶುಭಾಗ್ಯ ಸಾಲ, 8 ಮಂದಿ ಸದಸ್ಯರಿಗೆ 74 ಲಕ್ಷ ರೂ. ಗೃಹನಿರ್ಮಾಣ ಸಾಲ ವಿತರಿಸಲಾಗಿದೆ ಎಂದು ತಿಳಿಸಿದರು.
ಸಂಘದ ವ್ಯವಹಾರ ಕಾರ್ಯಯೋಜನೆಯ ಅನುಷ್ಠಾನದಲ್ಲಿ ಉತ್ತಮ ಪ್ರಗತಿಯನ್ನು ಸಾಧಿಸಿದ್ದಕ್ಕಾಗಿ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಕಳೆದ 2015 ರಿಂದ ಸತತವಾಗಿ 8 ವರ್ಷಗಳಲ್ಲಿ ಉತ್ತಮ ಸಹಕಾರ ಸಂಘವೆಂದು ಗುರುತಿಸಿ ಸನ್ಮಾನ ,ಪ್ರಶಸ್ತಿ ಪತ್ರ ಮತ್ತು ಫಲಕ ನೀಡಿ ಗೌರವಿಸಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.
ನಿರ್ದೇಶಕರುಗಳಾದ ಗಿರಿಯಪ್ಪ ಗೌಡ, ಲೋಕಾನಂದ, ಪೂವಪ್ಪ ಗೌಡ,ವೆಂಕಟರಾಯ ಪ್ರಭು, ಕೊರಗಪ್ಪ ನಾಯ್ಕ,ಚಂದ್ರಶೇಖರ ಟೈಲರ್, ಸುರೇಶ್ ಶೆಟ್ಟಿ, ಮಹಾಬಲ ಸಾಲ್ಯಾನ್, ನೋಣಯ್ಯ ಎಂಆರ್, ಅರುಣಾ ವಿ.ಭಟ್, ವಿಜಯಪ್ರಕಾಶ ವೇದಿಕೆಯಲ್ಲಿದ್ದರು. ಇದೇವೇಳೆ ಎಸ್.ಎಸ್.ಎಲ್.ಸಿ.ಹಾಗೂ ಪಿಯುಸಿ ವಿಭಾಗದಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದ ಸಂಘದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.
ಮುಖ್ಯಕಾರ್ಯನಿರ್ವಾಹಣಾಧಿಕಾರಿ ಪ್ರಕಾಶ್ ಕೆ ವಾರ್ಷಿಕ ವರದಿ ವಾಚಿಸಿದರು.
ಶಾಖಾ ವ್ಯವಸ್ಥಾಪಕ ಗೋಪಾಲ ಕೆ.ಲೆಕ್ಕಪತ್ರ ಮಂಡಿಸಿದರು.38 ವರ್ಷಗಳ ಕಾಲ ಸಂಘದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಕೇಶವ ಅವರನ್ನು ಸನ್ಮಾನಿಸಲಾಯಿತು.
ಉಪಾಧ್ಯಕ್ಷ ಸುಧಾಕರ ರೈ ಸ್ವಾಗತಿಸಿದರು. ನಿರ್ದೇಶಕಿ ಅರುಣ್ ವಿ.ಭಟ್ ವಂದಿಸಿದರು. ರಾಜೇಶ್ ಕೊಟ್ಟಾರಿ ಕಾರ್ಯಕ್ರಮ ನಿರೂಪಿಸಿದರು.