ಮುಂದಿನ ಪೀಳಿಗೆಗೆ ಧಾರ್ಮಿಕ ಚಿಂತನೆಗಳ ಅಭಿರುಚಿ ಬೆಳೆಸುವ ಕಾರ್ಯಕ್ರಮ ಮೂಡಿಬರಲಿ: ಡಾ.ಪ್ರಭಾಕರ ಭಟ್
ಬಂಟ್ವಾಳ: ಮುಂಬರುವ ಕೃಷ್ಣಜನ್ಮಾಷ್ಟಮಿ, ಗಣೇಶ್ ಚತುರ್ಥಿ ಹಾಗೂ ಶಾರದಾ ಉತ್ಸವದಂತ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಮುಂದಿನ ಪೀಳಿಗೆಗೆ ಧಾರ್ಮಿಕ ಚಿಂತನೆಗಳ ಅಭಿರುಚಿ ಬೆಳೆಸುವ ಕಾರ್ಯಕ್ರಮ ಮೂಡಿಬರಬೇಕು ಆಮೂಲಕ ಹಿಂದೂ ಸಮಾಜವನ್ನು ಒಟ್ಟುಗೂಡಿಸುವ ಕೆಲಸವಾಗಬೇಕು ಎಂದುಆರ್.ಎಸ್.ಎಸ್.ಪ್ರಮುಖ ಡಾ.ಪ್ರಭಾಕರ್ ಭಟ್ ಸಲಹೆ ನೀಡಿದ್ದಾರೆ.
ಬಿ.ಸಿ.ರೋಡಿನ ಬ್ರಹ್ಮ ಶ್ರೀ ನಾರಾಯಣ ಗುರು ನಾರಾಯಣ ಮಂದಿರದಲ್ಲಿ ವಿಶ್ವಹಿಂದೂ ಪರಿಷದ್ ,ಬಜರಂಗದಳ ಬಂಟ್ವಾಳ ಪ್ರಖಂಡದ ವತಿಯಿಂದ ನಡೆದ ತಾಲೂಕಿನ ವಿವಿಧ ಧಾರ್ಮಿಕ ಸಮಿತಿಗಳ ಪ್ರಮುಖರ ಸಭೆಯಲ್ಲಿ ಅವರು ಮಾತನಾಡಿದರು.
ಸಾರ್ವಜನಿಕ ಉತ್ಸವಗಳಲ್ಲಿ ಹಿಂದೂ ಧರ್ಮದ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಉತ್ಸವವನ್ನು ಯಾವರೀತಿ ನಡೆಸಬೇಕು ಎಂಬುದರ ಕುರಿತು ಸಲಹೆ ನೀಡಿದ ಡಾ.ಭಟ್ ಅವರು ಧಾರ್ಮಿಕ ಆಚರಣೆಗಳ ಮೂಲ ಉದ್ದೇಶವನ್ನು ಅರಿತುಕೊಂಡು ದಾರ್ಮಿಕತೆ, ಸಂಸ್ಕೃತಿಯನ್ನು ಬಿಂಬಿಸುವ ನಿಟ್ಟಿನಲ್ಲಿ ಧಾರ್ಮಿಕ ಕಾರ್ಯಗಳು ನಡೆಯಬೇಕು ಆಮೂಲಕ ಹಿಂದೂ ಧರ್ಮದ ಒಗ್ಗಟ್ಟು ಆಗಬೇಕು ಎಂದು ಹೇಳಿದರು.
ಪಾಶ್ಚಾತ್ಯ ನೃತ್ಯಗಳು ನಮ್ಮ ಸಂಸ್ಕೃತಿಗಳ ಮೇಲೆ ಪರಿಣಾಮ ಬೀಳುತ್ತದೆ.ಈ ದೆಸೆಯಲ್ಲಿ ಭಜನೆ,ಯಕ್ಷಗಾನ, ಭರತನಾಟ್ಯ ಅಥವಾ ನಮ್ಮ ಸಂಸ್ಕೃತಿ, ಆಚಾರ,ವಿಚಾರಗಳು, ಮುಂದಿನ ಜನಾಂಗದ ಮೇಲೆ ಪ್ರಭಾವ ಬೀರುವಂತ ನಮ್ಮ ಸಂಸ್ಕೃತಿಯನ್ನು ಉಳಿಸಿ,ಬೆಳೆಸುವ ಕಾರ್ಯಕ್ರಮಗಳನ್ನು ಆಯೋಜಿಸಿ ಮಾದರಿಯಾಗಬೇಕು ಎಂದರು.
ಸಾರ್ವಜನಿಕವಾಗಿ ನಡೆಯುವ ಗಣೇಶ್ ಚತುರ್ಥಿ, ಕೃಷ್ಣ ಜನ್ಮಾಷ್ಟಮಿ ಮತ್ತು ಶಾರದ ಉತ್ಸವಕ್ಕಾಗಮಿಸುವ ಭಕ್ತರು ಕೂಡ ಪಾಶ್ಚಾತ್ಯ ಸಂಸ್ಕೃತಿಯನ್ನು ಬಿಂಬಿಸುವ ಬಟ್ಟೆಬರೆಯನ್ನು ಧರಿಸದೆ ಡ್ರೆಸ್ ಕೋಡ್ ನಲ್ಲಿ ಕೂಡ ಭಾರತೀಯತೆ ಕಾಣುವಂತಾಗಬೇಕು ಈ ಬಗ್ಗೆ ಸಂಘಟಕರು ಮುಂಚಿತವಾಗಿಯೇ ಸೂಚನೆ ನೀಡಬೇಕು ಎಂದು ತಿಳಿಸಿದರು.
ವಿಶ್ವ ಹಿಂದೂ ಪರಿಷದ್ ಬಂಟ್ವಾಳ ಪ್ರಖಂಡದ ಅಧ್ಯಕ್ಷ ,ನ್ಯಾಯವಾದಿ ಪ್ರಸಾದ್ ಕುಮಾರ್ ರೈ ಪ್ರಸ್ತಾವಿಕವಾಗಿ ಮಾತನಾಡಿದರು.ಬಜರಂಗದಳದ ಪ್ರಮುಖರು ಹಾಜರಿದ್ದರು.