ನೇತ್ರಾವತಿಯಲ್ಲಿ ನೀರು ಇಳಿಮುಖ, ಮುಂದುವರಿದ ಅನಾಹುತ
ಬಂಟ್ವಾಳ: ತುಂಬಿ ಹರಿಯುತ್ತಿದ್ದ ನೇತ್ರಾವತಿ ನದಿ ನೀರು ಬಂಟ್ವಾಳದಲ್ಲಿ ಇಳಿಮುಖವಾಗಿದೆ. ಆದರೆ ಮಳೆ ಧಾರಾಕಾರವಾಗಿ ಸುರಿಯುತ್ತಿದೆ. ಮಳೆಗೆ ಬಿಡುವಿಲ್ಲ. ಹಾಗೆಯೇ ತಾಲೂಕಿನ ವಿವಿಧ ಭಾಗದಲ್ಲಿ ಅನಾಹುತಗಳಿಗೂ ಬಿಡುವು ದೊರೆತಿಲ್ಲ.
ಬುಧವಾರ ಬೆಳಗ್ಗೆ ಗುಡ್ಡ ಜರಿದು ಕಲ್ಲು ಬಂಡೆ ಸಹಿತ ಮಣ್ಣು ರಸ್ತೆಗೆ ಬಿದ್ದ ಪರಿಣಾಮ ಸಾರ್ವಜನಿಕ ರಸ್ತೆ ಸಂಪೂರ್ಣ ಬಂದ್ ಆಗಿರುವ ಘಟನೆ ಲೊರೆಟ್ಟೋ ಮಹಲ್ ತೋಟ ಎಂಬಲ್ಲಿ ರಸ್ತೆ ಸಂಪರ್ಕ ಕಡಿತಗೊಂಡಿದೆ.ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ನೀರ್ಕಜೆ ಸಂತೋಷ್ ಆಚಾರ್ಯರವರ ಮನೆಯು ತೀವ್ರ ಹಾನಿಯಾಗಿದ್ದು,ಮುಂಜಾಗ್ರತಾ ಕ್ರಮವಾಗಿ ಮನೆಮಂದಿಯನ್ನು ಸಂಬಂಧಿಕರ ಮನೆಗೆ ಸ್ಥಳಾಂತರಗೊಳಿಸಲಾಗಿದೆ.
ಬಾಳ್ತಿಲ ಗ್ರಾಮದ ಕುರ್ಪೆದಕೋಡಿ ಎಂಬಲ್ಲಿ ಮರ್ಸಿನ್ ಮೋರಸ್ ಅವರ ಮನೆಗೆ ತೀವ್ರ ಹಾನಿಯಾಗಿರುತ್ತದೆ. ಯಾವುದೇ ಜೀವ ಹಾನಿಯಾಗಿರುವುದಿಲ್ಲ, ಬಂಟ್ವಾಳ ತಾಲೂಕು ಬರಿಮಾರು ಗ್ರಾಮದ ವಸಂತ ಎಂಬವರ ಮನೆ ಗೋಡೆ ಬಿದ್ದಿದೆ.
ಇಡ್ಕಿದು ಗ್ರಾಮದ ಮಿತ್ತೂರು ಎಂಬಲ್ಲಿ ಸುಧೀರ್ ಕುಮಾರ್ ಶೆಟ್ಟಿ ರವರಿಗೆ ಸೇರಿದ ಅಡಿಕೆ ತೋಟಕ್ಕೆ ಹಾನಿಯಾಗಿದೆ.
ಅರಳ ಗ್ರಾಮದ ದೇಂಬುಡೆ ಎಂಬಲ್ಲಿ ಗುಡ್ಡ ಕುಸಿದು ಅಪಾಯಕಾರಿ ಸ್ಥಿತಿ ನಿರ್ಮಾಣವಾಗಿದೆ. ಇಲ್ಲಿನ ನಿವಾಸಿ ರುಡಾಲ್ಫ್ ಮರ್ಕ್ ಲೋಬೋ ಅವರ ಮನೆ ಬಳಿ ಈ ಘಟನೆ ನಡೆದಿದೆ. ಕಳೆದ ವರ್ಷ ಇದೇ ಸ್ಥಳದಲ್ಲಿ ಗುಡ್ಡ ಕುಸಿದು ಮನೆಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿತ್ತು. ಬಳಿಕ ಮಣ್ಣು ಕುಸಿಯದಂತೆ ಕಾಂಕ್ರೀಟ್ ತಡೆಗೋಡೆಯನ್ನು ನಿರ್ಮಿಸಲಾಗಿತ್ತು.
ಆದರೆ ಈ ಭಾರಿ ಮತ್ತೆ ಮೇಲ್ಬಾದ ಗುಡ್ಡ ಕುಸಿದು ಆತಂಕದ ಸ್ಥಿತಿ ನಿರ್ಮಾಣಗೊಂಡಿದೆ. ಗುಡ್ಡದಲ್ಲಿದ್ದ ಬಂಡೆಕಲ್ಲುಗಳು ಮಣ್ಣಿನೊಂದಿಗೆ ಉದುರಿ ಬೀಳುತ್ತಿದೆ.