ಸುಂಕದಕಟ್ಟೆ ಶಾಲಾ ಶಿಕ್ಷಕಿಯಿಂದ ಲಂಚ ಸ್ವೀಕರಿಸಿದ
ಶಾಲಾ ಸಂಚಾಲಕಿ ಲೋಕಾಯುಕ್ತ ಪೊಲೀಸ್ ಬಲೆಗೆ
ಕೈಕಂಬ : ಮಂಗಳೂರು ತಾಲೂಕಿನ ಬಜ್ಪೆ ಸಮೀಪದ ಸುಂಕದಕಟ್ಟೆಯಲ್ಲಿರುವ ಶ್ರೀ ನಿರಂಜನ ಸ್ವಾಮಿ ಶಿಕ್ಷಣ ಪ್ರತಿಷ್ಠಾನಕ್ಕೆ ಸೇರಿದ ಶ್ರೀ ನಿರಂಜನ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತಿ ಹೊಂದಲಿರುವ ಮುಖ್ಯ ಶಿಕ್ಷಕಿಯಿಂದ ೫ ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಅದೇ ಶಾಲೆಯ ಸಂಚಾಲಕಿಯನ್ನು ಮಂಗಳೂರು ಲೋಕಾಯುಕ್ತ ಪೊಲೀಸರು ಶುಕ್ರವಾರ ರೆಡ್ ಹ್ಯಾಂಡಾಗಿ ಸೆರೆ ಹಿಡಿದರು.
ಬಂಧಿತ ಆರೋಪಿ ಜ್ಯೋತಿ ಎನ್. ಪೂಜಾರಿಯಾಗಿದ್ದರೆ, ದೂರು ನೀಡಿದ ಶಾಲಾ ಶಿಕ್ಷಕಿ ಶೋಭಾರಾಣಿಯಾಗಿದ್ದಾರೆ.ಶಾಲೆಯಲ್ಲಿ ೪೨ ವರ್ಷ ಶಿಕ್ಷಕಿ ಹಾಗೂ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಶೋಭಾರಾಣಿ ಜು. ೩೧ರಂದು ಸೇವಾ ನಿವೃತ್ತಿ ಹೊಂದಲಿದ್ದಾರೆ. ಶಿಕ್ಷಕಿಯು ತನ್ನ ನಿವೃತ್ತಿ ಪಿಂಚಣಿ ಉಪದಾನ ಪತ್ರಕ್ಕೆ ಶಾಲೆಯ ಸಂಚಾಲಕಿಯ ಸಹಿಯುಳ್ಳ ದಾಖಲೆ ಪತ್ರ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕಳುಹಿಸಿ ಕೊಡಬೇಕಿತ್ತು. ಮೇ. ೨೫ರಂದು ಈ ಬಗ್ಗೆ ಜ್ಯೋತಿ ಪೂಜಾರಿ ಅವರಿಗೆ ಮನವಿ ಪತ್ರದೊಂದಿಗೆ ದಾಖಲೆಗೆ ಸಹಿ ಹಾಕಿ ಸ್ವೀಕೃತಿ ನೀಡುವಂತೆ ವಿನಂತಿಕೊಂಡಿದ್ದರು.
ಪಿಂಚಣಿ ದಾಖಲೆ ಪತ್ರಕ್ಕೆ ಸಹಿ ಹಾಕಿ ಸ್ವೀಕೃತಿ ಪತ್ರ ನಂತರ ನೀಡುವುದಾಗಿ ಹೇಳಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಪಿಂಚಣಿ ಉಪದಾನ ಪತ್ರ ಕಳುಹಿಸಿ ಕೊಡದ ಸಂಚಾಲಕಿ ಪದೇ ಪದೇ ಹಣ ಕೇಳಿ ಶೋಭಾರಾಣಿಯನ್ನು ಸತಾಯಿಸುತ್ತಿದ್ದರು. ಪತ್ರಕ್ಕೆ ಸಹಿ ಹಾಕಿ ಕಳುಹಿಸಿಕೊಡಬೇಕಾದರೆ ೨೦ ಲಕ್ಷ ರೂ ನೀಡಬೇಕೆಂದು ಜ್ಯೋತಿಯವರು ಒತ್ತಾಯಿಸಿದ್ದರು.
ಜು. ೫ರಂದು ಶಾಲಾ ಆಡಳಿತ ಕಚೇರಿಯಾದ ಸಂಚಾಲಕಿಯ ವಾಸದ ಮನೆಗೆ ಹೋಗಿದ್ದ ಜ್ಯೋತಿ ಅವರೊಂದಿಗೆ ಮಾತುಕತೆ ನಡೆಸಿದಾಗ ೫ ಲಕ್ಷ ರೂ ನೀಡುವಂತೆ ಒತ್ತಾಯಿಸಿದ್ದರು. ಈ ಬಗ್ಗೆ ಮನನೊಂದ ಶಿಕ್ಷಕಿ ಮಂಗಳೂರು ಲೋಕಾಯುಕ್ತ ಪೊಲೀಸ್‌ಗೆ ದೂರು ನೀಡಿದ್ದರು. ಜು. ೭ರಂದು ಶೋಭಾರಾಣಿಯವರು ಜ್ಯೋತಿ ಪೂಜಾರಿಗೆ ೫ ಲಕ್ಷ ರೂ ಲಂಚದ ಹಣ ನೀಡುತ್ತಿದ್ದಾಗ, ಮೊದಲೇ ವ್ಯೂಹ ರಚಿಸಿದ್ದ ಲೋಕಾಯುಕ್ತ ಪೊಲೀಸರು ಸಂಚಾಲಕಿಯನ್ನು ದಸ್ತಗಿರಿ ಮಾಡಿ, ಲಂಚದ ಹಣ ವಶಪಡಿಸಿಕೊಂಡಿದ್ದಾರೆ.
ಕರ್ನಾಟಕ ಲೋಕಾಯುಕ್ತ ಮಂಗಳೂರು ವಿಭಾಗದ ಪೊಲೀಸ್ ಅಧೀಕ್ಷಕ ಸಿ. ಎ. ಸೈಮನ್ ಮಾರ್ಗದರ್ಶನದಲ್ಲಿ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕರುಗಳಾದ ಕಮಲಾದೇವಿ ಕೆ., ಚಲುವರಾಜು ಬಿ., ಪೊಲೀಸ್ ನಿರೀಕ್ಷಕ ವಿನಾಯಕ ಬಿಲ್ಲವ ಕಾರ್ಯಾಚರಣೆ ನಡೆಸಿದ್ದಾರೆ.