ಬ್ರಹ್ಮರಕೂಟ್ಲು: ಕಾರಣಿಕ ಪ್ರಸಿದ್ಧ ಬ್ರಹ್ಮ ಸನ್ನಿಧಿ ಸ್ಥಳಾಂತರ ಪ್ರಶ್ನಾ ಚಿಂತನೆಯಲ್ಲಿ ಸಿಕ್ಕಿದ ಒಪ್ಪಿಗೆ
ಬಂಟ್ವಾಳ: ಕಳೆದ 2009ನೇ ನ.9 ರಂದು ಆರಂಭಗೊಂಡಿದ್ದ ‘ಬ್ರಹ್ಮಸನ್ನಿಧಿ ಉಳಿಸಿ’ ಹೋರಾಟದ ನಡುವೆಯೇ ಇಲ್ಲಿನ ಬ್ರಹ್ಮರಕೂಟ್ಲು ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಕಾರಣಿಕ ಪ್ರಸಿದ್ಧ ಬ್ರಹ್ಮಸನ್ನಿಧಿ ಗುಡಿ ಎದುರಿನ ಜಮೀನಿಗೆ ಸ್ಥಳಾಂತರಗೊಳಿಸಲು ಪ್ರಶ್ನಾ ಚಿಂತನೆಯಲ್ಲಿ ಶನಿವಾರ ಕೊನೆಗೂ ಒಪ್ಪಿಗೆ ಸಿಕ್ಕಿದೆ.

ಕೇರಳದ ಮಾಧವ ಪೊದುವಾಳ್ ಮಾರ್ಗದರ್ಶನದಲ್ಲಿ ಕಳೆದ ಎರಡು ದಿನಗಳಿಂದ ಪ್ರಶ್ನಾಚಿಂತನೆ ನಡೆಯುತ್ತಿದ್ದು, ಶನಿವಾರ ದೇವರ ಒಪ್ಪಿಗೆ ಸಿಕ್ಕಿದೆ. ಪುರಾತನ ಕಾಲದಲ್ಲಿ ಋಷಿಮುನಿಗಳು ಬ್ರಹ್ಮ ದೇವರನ್ನು ಒಲಿಸಲು ತಪಸ್ಸು ಮಾಡಿದ ಪವಿತ್ರ ಜಾಗ ಎಂಬ ನಂಬಿಕೆ ಇಲ್ಲಿನ ಭಕ್ತರಲ್ಲಿದ್ದು, ಈ ಗುಡಿ ಮೇಲ್ಭಾಗದಲ್ಲಿ ಹಾದು ಹೋಗಿರುವ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಹಲವು ಬಾರಿ ವಾಹನ ಅಪಘಾತ ನಡೆದು ಅಪ ಮೃತ್ಯು ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಈ ಕ್ಷೇತ್ರದಲ್ಲಿ ಬ್ರಹ್ಮದೇವರ ಜೊತೆಗೆ ಮಹಿಷಂದಾಯ, ರಕ್ತೇಶ್ವರಿ, ಗುಳಿಗ ಸಾನಿಧ್ಯವೂ ಇದೆ ಎಂದು ತಿಳಿದು ಬಂದಿದ್ದು, ಇದೇ 10ರಂದು ‘ಮೃತ್ಯುಂಜಯ ಹೋಮ’ ನಡೆಸಲು ನಿರ್ಧರಿಸಲಾಗಿದೆ ಎಂದು ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿ ತಿಳಿಸಿದರು.
ಪ್ರಮುಖರಾದ ರಮಾನಾಥ ರೈ ಕುಪ್ಪಿಲಗುತ್ತು, ದಿವಾಕರ ಶೆಟ್ಟಿ ಪರಾರಿಗುತ್ತು, ಜಗದೀಶ್ ರೈ ಕುಪ್ಪಿಲಗುತ್ತು, ಹರಿನಾಥ್ ಭಂಡಾರಿ ವಳವೂರುಗುತ್ತು, ನಾರಾಯಣ ಹೊಳ್ಳ, ಜ್ಯೋತೀಂದ್ರ ಶೆಟ್ಟಿ ಮುಂಡಾಜೆಗುತ್ತು, ಸತೀಶ್ ಶೆಟ್ಟಿ ಮೊಡಂಕಾಪುಗುತ್ತು, ಜನಾರ್ಧನ ಶೆಟ್ಟಿ ಮೊಡಂಕಾಪುಗುತ್ತು, ನವೀನ್ ಚಂದ್ರ ಶೆಟ್ಟಿ ಮುಂಡಾಜೆಗುತ್ತು, ವೇದನಾಥ ಶೆಟ್ಟಿ ಮೊಡಂಕಾಪುಗುತ್ತು, ಅರ್ಚಕ ಮಹಾಬಲೇಶ್ವರ ಮಯ್ಯ, ಮಾಜಿ ಸಚಿವ ಬಿ. ನಾಗರಾಜ ಶೆಟ್ಟಿ, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ರಾಮಕೃಷ್ಣ ಆಳ್ವ ಪೊನ್ನೋಡಿ, ಸೋಮಪ್ಪ ಕೋಟ್ಯಾನ್ ಮತ್ತಿತರರು ಇದ್ದರು.