ತಾಪಮಾನ ಅದುಮಿಡುವ ಉದ್ಯಮಕ್ಕೆ ಕಾಯಕಲ್ಪ ಅವಶ್ಯ
ಅಳಿನಂಚಿನಲ್ಲಿರುವ ಗ್ರಾಮೀಣ ಗುಡಿ ಕೈಗಾರಿಕೆ ಇಟ್ಟಿಗೆ
ಧನಂಜಯ ಗುರುಪುರ
ಕೈಕಂಬ : ಕ್ರಿ.ಪೂ. ಸುಮಾರು ೭,೦೦೦ ವರ್ಷಗಳ ಹಿಂದಿನ ಇತಿಹಾಸವುಳ್ಳ ಇಟ್ಟಿಗೆಗೆ ಈಗ ಬೇಡಿಕೆ ಕಡಿಮೆಯಾಗಿದೆ ಅಥವಾ ಬಳಿಕೆ ವಿರಳವಾಗಿದೆ. ಎಲ್ಲ ಕ್ಷೇತ್ರದಲ್ಲೂ ಸಿಮೆಂಟ್ ಬಳಕೆಯೇ ಇದಕ್ಕೆ ಪ್ರಮುಖ ಕಾರಣ. ಸುಮಾರು ೩೦-೪೦ ವರ್ಷಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಮಂಗಳೂರು ತಾಲೂಕಿನ ಗುರುಪುರ ಹಾಗೂ ಕರಾವಳಿ ಪ್ರದೇಶದ ಕೆಲವೆಡೆ ಹೇರಳವಾಗಿ ಇಟ್ಟಿಗೆ ಉತ್ಪಾದಿಸಲಾಗುತ್ತಿತ್ತು.
ಅದರಲ್ಲೂ ಗುರುಪುರದ ಹೆಂಚಿನಂತೆ ಇಲ್ಲಿನ ಇಟ್ಟಿಗೆಗೂ ಅವಿಭಜಿತ ದ.ಕ ಜಿಲ್ಲೆ ಮತ್ತು ಹೊರ ಜಿಲ್ಲೆಗಳಲ್ಲಿ ಭಾರೀ ಬೇಡಿಕೆ ಇದ್ದ ಕಾಲವೊಂದಿತ್ತು. ಬೇಡಿಕೆ ಕಡಿಮೆಯಾದಂತೆ ಇಟ್ಟಿಗೆ ಉತ್ಪಾದಕರು ಅನ್ಯ ಉದ್ಯಮದತ್ತ ದೃಷ್ಟಿ ಹರಿಸಿದ್ದುಂಟು. ಅದೇನೇ ಇದ್ದಾಗಲೂ ಇಟ್ಟಿಗೆಗೆ ಕಲ್ಲು ಮತ್ತು ಸಿಮೆಂಟ್ ಸಾಟಿಯಲ್ಲ ಎಂಬ ಮಾತೊಂದಿದ್ದು, ಪ್ರಸಕ್ತ ಸುಡು ಬೇಸಿಗೆಯಲ್ಲಿ ಸಿಮೆಂಟ್ ಮನೆಯವರಿಗೆ ಅದರ ಅನುಭವಾಗದೆ ಇರದು.
ಕೆಲವು ವರ್ಷಗಳ ಹಿಂದೆ ಗುರುಪುರ ಆಸುಪಾಸಿನ ಪರಾರಿ, ಬಂಡಸಾಲೆ, ಉಳಾಯಿಬೆಟ್ಟು, ಪೆರ್ಮಂಕಿಯಲ್ಲಿ ಸುಮಾರು ೨೦ಕ್ಕೂ ಹೆಚ್ಚು ಕಡೆಗಳಲ್ಲಿ ಇಟ್ಟಿಗೆ ಉತ್ಪಾದನೆಯಾಗುತ್ತಿತ್ತು. ಇಲ್ಲಿನ ಇಟ್ಟಿಗೆ ಮನೆ, ದೇವಸ್ಥಾನ, ಬಿಎಸ್ಸೆನ್ನೆಲ್, ಹೆಂಚಿನ ಫ್ಯಾಕ್ಟರಿಗಳ ಚಿಮಿಣಿ ನಿರ್ಮಾಣ ಹಾಗೂ ಆವರಣ ಗೋಡೆ ನಿರ್ಮಿಸಲು ಬಳಕೆಯಾಗುತ್ತಿತ್ತು. ಇಟ್ಟಿಗೆಗೆ ಬೇಡಿಕೆ ಕಡಿಮೆಯಾದಂತೆ ಇಟ್ಟಿಗೆ ಉತ್ಪಾದಿಸುವ ಗೂಡುಗಳ ಸಂಖ್ಯೆಯೂ ಕಡಿಮೆಯಾಯಿತು. ಆ ಹೊತ್ತಿಗೆ, ಗ್ರಾಮೀಣ ಗುಡಿ ಕೈಗಾರಿಕೆಯಾಗಿ ಹೆಚ್ಚು ಪ್ರಚಲಿತದಲ್ಲಿದ್ದ ಇಟ್ಟಿಗೆ ಉತ್ಪಾದನೆ ನಂಬಿಕೊAಡಿದ್ದ ಕೆಲಸಗಾರರು ಅನ್ಯ ಕಸುಬುಗಳತ್ತ ದೃಷ್ಟಿ ಹರಿಸಿದರು. ಈಗ ಇಟ್ಟಿಗೆ ಉತ್ಪಾದನೆಯ ಗೂಡುಗಳು ಕಾಣ ಸಿಗುವುದೇ ಅಪೂರ್ವ.
ಸುಮಾರು ೨೦ರಿಂದ ೨೫ ಮಂದಿ ಇಟ್ಟಿಗೆ ಉತ್ಪಾದಕರಿದ್ದ ಕಾಲದಿಂದಲೂ ಗುರುಪುರದ ಹಲವೆಡೆ ಇಟ್ಟಿಗೆ ಉತ್ಪಾದಿಸಿ ಜೀವನ ಸಾಗಿಸುತ್ತಿದ್ದ ಮತ್ತು ಈಗಲೂ ನಾಲ್ಕೈದು ಕುಟುಂಬಗಳಿಗೆ ಆಶ್ರಯವಾಗಿರುವ ಯಾಕೂಬ್ ಅಹ್ಮದ್ ಸಲಾಂ ಗುರುಪುರ ಎಂಬವರು ಇಟ್ಟಿಗೆ ಸ್ಥಿತಿ-ಗತಿ, ಅವನತಿ ಬಗ್ಗೆ ಕುತೂಹಲಕಾರಿ ಮಾಹಿತಿ ನೀಡಿದ್ದಾರೆ.
ಹಿಂದೆ ಅವಿಭಜಿತ ದ.ಕ ಜಿಲ್ಲೆ ಮತ್ತು ಹೊರ ಜಿಲ್ಲೆಗಳಿಗೆ ಗುರುಪುರದ ಇಟ್ಟಿಗೆ ರಫ್ತಾಗುತ್ತಿದ್ದರೆ, ಈಗ ಜಿಲ್ಲೆಯಲ್ಲೇ ಬೇಡಿಕೆ ಕ್ಷೀಣಿಸಿದೆ. ಉಡುಪಿ, ವೇಣೂರು, ಕಾರ್ಕಳ, ಉಚ್ಚಿಲ, ಮಂಚಕಲ್, ಅಳದಂಗಡಿ, ಮೂಡಬಿದ್ರೆ, ಕಾರ್ಕಳ ಮತ್ತಿತರ ಪ್ರದೇಶಗಳಲ್ಲಿ ಗುರುಪುರದ ಇಟ್ಟಿಗೆಗೆ ಒಂದಷ್ಟು ಬೇಡಿಕೆ ಇದೆ. ಇಲ್ಲಿನ ಇಟ್ಟಿಗೆಯ ಫಿನಿಶಿಂಗ್ ಉತ್ತಮವಾಗಿರುವುದೇ ಬೇಡಿಕೆಗೆ ಮೂಲ ಕಾರಣ. ಈಗ ಸಿಮೆಂಟ್ ಬ್ಲಾಕ್‌ಗಳು ಬಂದಿದ್ದು, ಮಣ್ಣಿನ ಇಟ್ಟಿಗೆ ಬೇಡವಾಗಿದೆ. ಕರಾವಳಿ ಪ್ರದೇಶದಲ್ಲಿ ಹಿಂದೆ ಇಟ್ಟಿಗೆ ಮನೆಗಳು ಸಾಕಷ್ಟಿತ್ತು. ಇಟ್ಟಿಗೆಗೆ ತಾಪಮಾನ ಹಿಡಿದಿಟ್ಟುಕೊಳ್ಳುವ ಶಕ್ತಿ ಇದೆ. ನೀರು ಹೀರುವ ಮತ್ತು ಬಿಟ್ಟುಕೊಡುವ ಗುಣವುಳ್ಳ ಇಟ್ಟಿಗೆಗೆ ಸುಮಾರು ೫೦೦ ವರ್ಷಗಳ ಬಾಳಿಕೆ ಇದೆ. ಇಟ್ಟಿಗೆ ಮನೆಗಳು ಬೇಸಿಗೆಯಲ್ಲೂ ತಂಪಾಗಿರುತ್ತದೆ. ಕಲ್ಲಿಗೆ ಈ ಗುಣವಿಲ್ಲ.
ಇಟ್ಟಿಗೆ ತಯಾರಿಸುವ ವಿಧಾನ :
ಸಾಮಾನ್ಯವಾಗಿ ಹೆಂಚು ಉತ್ಪಾದಿಸಲು ಹುಡಿ ಮಣ್ಣಿನ ಸಹಿತ ಆವೆ ಮಣ್ಣಿನ ಅಗತ್ಯವಿದೆ. ಇಟ್ಟಿಗೆ ತಯಾರಿಸಲು ಸಾಮಾನ್ಯವಾಗಿ ಗದ್ದೆ ಪ್ರದೇಶದ ಸುಮಾರು ೨ರಿಂದ ಎರಡೂವರೆ ಅಡಿ ಆಳದ ಹುಡಿ ಮಣ್ಣು ಸಾಕಾಗುತ್ತದೆ. ಈ ಮಣ್ಣು ಹದಗೊಳಿಸಿ, ಸಣ್ಣಸಣ್ಣ ಆಯತಾಕಾರದಲ್ಲಿ ಇಟ್ಟಿಗೆ ತಯಾರಿಸಿ, ಸರಿಯಾದ ಬಿಸಿಲಿಗೆ ಒಣಗಿಸಬೇಕು. ಒಣಗಿದ ಇಟ್ಟಿಗೆಯನ್ನು ಸರಿಯಾದ ವಿನ್ಯಾಸಗೊಳಿಸಿ ಅಥವಾ ಬ್ಯಾಟ್ ಮಾಡಿ(ಸೈಜ್) ಸುಮಾರು ೫ರಿಂದ ೩೧ ಒಲೆಗಳು ಅಥವಾ ೭-೨೧ ಒಲೆಗಳಿರುವ ಗೂಡಿನಲ್ಲಿ ಚೌಕ ಅಥವಾ ಆಯತಾಕಾರದಲ್ಲಿ ಇಡಬೇಕು. ಸುಮಾರು ೭೦,೦೦೦ ಇಟ್ಟಿಗೆ ತಯಾರಿಸಲು ೧೫ ಒಲೆಗಳಿರುವ ಗೂಡು ಸಿದ್ಧಪಡಿಸಿ, ಅದರಲ್ಲಿ ೭ಕ್ಕೆ ಕಟ್ಟಿಗೆ ತುಂಬಿಸಿ ಬಂದ್ ಮಾಡಬೇಕು.
ಉಳಿದ ೮ಕ್ಕೆ ಕಟ್ಟಿಗೆ ಹಾಕಿ ಬೆಂಕಿ ಕೊಡಲಾಗುತ್ತದೆ. ಹೀಗೆ ಸುಮಾರು ೧೮ ಗಂಟೆಗಳವರೆಗೆ ಗೂಡಿನಲ್ಲಿದ್ದ ಹಸಿ ಇಟ್ಟಿಗೆ ಸುಡಬೇಕಾಗುತ್ತದೆ. ಹೀಗೆ ಮೂರೂವರೆ ದಿನದೊಳಗೆ ಸಾಗಾಟಕ್ಕೆ ಯೋಗ್ಯವಾದ ಇಟ್ಟಿಗೆ ಸಿದ್ಧವಾಗುತ್ತದೆ. ಈಗ ಬಹುತೇಕ ದೂರದ ಊರುಗಳಿಗೆ ಸಾಗಿಸಲಾಗುವ ಒಂದೊಂದು ಇಟ್ಟಿಗೆಗೆ ೫ ರೂಪಾಯಿ ಬೆಲೆ ಇದ್ದರೆ, ಹಿಂದೆ ಈ ಬೆಲೆ ೫೦ ಪೈಸೆ ಅಥವಾ ಒಂದು ರೂಪಾಯಿಗಳಲ್ಲಿತ್ತು. ೧೫ ವರ್ಷದ ಹಿಂದೆ ಒಂದು ಸೀಸನ್‌ನಲ್ಲಿ ೧೦ರಿಂದ ೧೨ ಲಕ್ಷ ಇಟ್ಟಿಗೆಗೆ ಬೇಡಿಕೆ ಇದ್ದರೆ, ಈಗ ಒಂದು ಸೀಸನ್‌ನಲ್ಲಿ ಸಿದ್ಧಪಡಿಸಲಾಗುವ ೩-೪ ಲಕ್ಷ ಇಟ್ಟಿಗೆ ಮಾರಾಟವಾಗುವುದೇ ಕಷ್ಟ.
ಇಟ್ಟಿಗೆ ಮಾಲಕರ
ಮನದಾಳದ ಮಾತು :
“ಸುಮಾರು ೭೦,೦೦೦ ಇಟ್ಟಿಗೆ ತಯಾರಿಸುವ ಮತ್ತು ಅವುಗಳನ್ನು ವಾಹನಗಳಲ್ಲಿ ಸಾಗಿಸುವ ಒಟ್ಟು ಪ್ರಕ್ರಿಯೆಗೆ ಆರೇಳು ಮಂದಿ ಕೆಲಸಗಾರರ ಅಗತ್ಯವಿದೆ. ಹಿಂದೆ ಇಟ್ಟಿಗೆ ಗೂಡಿಗೆ ಸ್ಥಳೀಯ ಕೂಲಿ ಕಾರ್ಮಿಕರು ಲಭ್ಯವಿರುತ್ತಿದ್ದರೆ, ಈಗ ದೂರದ ಊರುಗಳಿಂದ ಕೂಲಿಯಾಳುಗಳನ್ನು ಕರೆ ತರಬೇಕಾಗುತ್ತದೆ. ಅವರು ಇಲ್ಲಿ ಬಿಡಾರ ಹೂಡಿ, ಒಂದು ಮಳೆಗಾಲದವರೆಗೆ ವಾಸ್ತವ್ಯ ಹೂಡುತ್ತಾರೆ. ನಮ್ಮಲ್ಲಿಗೆ ಕಳೆದ ೨೦ ವರ್ಷಗಳಿಂದ ಬಿಜಾಪುರದಿಂದ ಆಗಮಿಸುತ್ತಿರುವ ಕುಟುಂಬವೊಂದರ ಕೆಲವು ಸದಸ್ಯರು ಇಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾರೆ.
ಕೆಲವು ವರ್ಷಗಳ ಹಿಂದೆ ಇಲ್ಲಿಂದ ಮಂಗಳೂರು ರೈಲ್ವೇ ಸ್ಟೇಶನ್‌ಗೆ ೨ ಲಕ್ಷ ಇಟ್ಟಿಗೆ ಹೋಗಿದ್ದರೆ, ೧೯೯೯ರಲ್ಲಿ ಕುದುರೆಮುಖ ಟಾಟಾ ಪ್ರಾಜೆಕ್ಟ್ಗೆ ೨ ಲಕ್ಷ ಇಟ್ಟಿಗೆ ಹೋಗಿತ್ತು. ಮಂಗಳೂರು ವಿಮಾನ ನಿಲ್ದಾಣ, ಎಂಆರ್‌ಪಿಎಲ್‌ನಂತಹ ಹಲವು ಸಂಸ್ಥೆಗಳಿಗೂ ನಮ್ಮಿಂದ ಇಟ್ಟಿಗೆ ಹೋಗಿದೆ. ಬೇಸರದ ಸಂಗತಿಯೆಂದರೆ, ಗ್ರಾಮೀಣ ಗುಡಿ ಕೈಗಾರಿಕೆಯಾಗಿ ಪರಿಗಣಿಸಲ್ಪಟ್ಟಿರುವ ಇಟ್ಟಿಗೆ ಉದ್ಯಮಕ್ಕೆ ಸರ್ಕಾರದಿಂದಲೂ ಹೇಳಿಕೊಳ್ಳುವ ಉತ್ತೇಜನ ಸಿಕ್ಕಿಲ್ಲ. ಅಳಿವಿನಂಚಿನಲ್ಲಿರುವ ಈ ಉದ್ಯಮಕ್ಕೆ ಕಾಯಕಲ್ಪ ಸಿಕ್ಕರೆ ಮನುಕುಲಕ್ಕೆ ಒಳ್ಳೆಯದಿದೆ ಎಂದು ಯಾಕೂಬ್ ಹೇಳುತ್ತಾರೆ.