ದ್ವೇಷದ ರಾಜಕಾರಣ ಎಂದೂ ಮಾಡಿಲ್ಲ: ರೈ
ಬಂಟ್ವಾಳ: ನಾನು ಕ್ಷೇತ್ರದ ಸಂಪೂರ್ಣ ಅಭಿವೃದ್ಧಿಯನ್ನು ಮಾಡಿದ್ದೇನೆ ಹೊರತು ದ್ವೇಷದ ರಾಜಕಾರಣ ಎಂದೂ ಮಾಡಿಲ್ಲ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.ಬಂಟ್ವಾಳ ಪ್ರಜಾಧ್ವನಿ ಯಾತ್ರೆಯ ಎರಡನೇ ದಿನ ವಾಮದಪದವು ಬಸ್ತಿಕೋಡಿಯಲ್ಲಿ ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕ್ಷೇತ್ರದಲ್ಲಿ ಅನೇಕ ರಸ್ತೆಗಳು ನನ್ನ ಶಾಸಕತ್ವದ ಅವಧಿಯಲ್ಲಿ ನಡೆದಿದೆ ಎಂಬ ಸಂತಸ ನನಗಿದೆ. ನಾನು ಯಾವುದೇ ತಪ್ಪು ಕೆಲಸ ನಾನು ಮಾಡಿಲ್ಲ. ಇದು ನನ್ನ ಕೊನೆಯ ಚುನಾವಣೆಯಾಗಿದ್ದು, ಜನ ಆಶೀರ್ವಾದ ಮಾಡಬೇಕು. ಎಂದೆಂದಿಗೂ ನಾನು ನಿಮ್ಮೊಂದಿಗೆ ಇರುತ್ತೇನೆ ಎಂದರು.ಚುನಾವಣೆ ಸಂದರ್ಭದಲ್ಲಿ ಕಾರ್ಯಕರ್ತರು ಅತ್ಯಂತ ಜಾಗರೂಕತೆಯಿಂದ ಇರಬೇಕು,ಯಾವುದೇ ಆಸೆ,ಅಮಿಷಗಳಿಗೆ ಒಳಗಾಗದೆ ಪಕ್ಷದ ಗೆಲುವಿಗೆ ಶ್ರಮಿಸಬೇಕು ಎಂದು ಅವರು ಕರೆ ನೀಡಿದರು.

ಕೆ.ಪಿ.ಸಿ.ಸಿ.ವಕ್ತಾರ ಅಮೃತ್ ಶೆಣೈ ಮಾತನಾಡಿ, ರಾಜ್ಯದ ಅಭಿವೃದ್ಧಿಯಾಗಬೇಕಾದರೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು, ಈ ನಿಟ್ಟಿನಲ್ಲಿ ಕಾರ್ಯಕರ್ತರು ಮನೆ,ಮನೆಗೆ ತೆರಳಿ ಕಾಂಗ್ರೆಸ್ ಪರವಾಗಿ ಮತ ಯಾಚನೆ ಮಾಡಬೇಕು ಎಂದರು.
ಕೆ.ಪಿ.ಸಿ.ಸಿ.ಸಂಚಾಲಕ ಹೇಮನಾಥ ಶೆಟ್ಟಿ ಮಾತನಾಡಿ, ರಮಾನಾಥ ರೈ ಅವರು ನಿರಂತರವಾಗಿ ಸಮಾಜ ಸೇವೆ ಮಾಡುವ ಮೂಲಕ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಇವರ ಕೊಡುಗೆ ಅಪಾರ. ಸಚ್ಚಾರಿತ್ರ್ಯದ ದಣಿವರಿಯದ ದುಡಿಮೆಯ ಅಪರೂಪದ ರಾಜಕಾರಣಿ ಎಂದು ಬಣ್ಣಿಸಿದರು.
ಬೆಳಿಗ್ಗೆ ಅಣ್ಣಳಿಕೆಯಿಂದ ಹೊರಟ ಬಂಟ್ವಾಳ ಪ್ರಜಾಧ್ವನಿ ಯಾತ್ರೆ, ಕರ್ಪೆ, ಸಂಗಬೆಟ್ಟು, ಕುಕ್ಕಿಪಾಡಿ,ಎಲಿಯನಡುಗೋಡು, ಕೊಡಂಬೆಟ್ಟು, ಅಜ್ಜಿಬೆಟ್ಟು, ಚೆನ್ನೈ ತ್ತೋಡಿ ಗ್ರಾಮಗಳಲ್ಲಿ ಸಂಚರಿಸಿ ಸಂಜೆ ವಾಮದಪದವು ಬಸ್ತಿಕೋಡಿಯಲ್ಲಿ ಸಂಪನ್ನಗೊಂಡಿತು.
ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಯಾತ್ರೆಯ ಸಂಚಾಲಕ ಪಿಯೂಸ್ ಎಲ್. ರೋಡ್ರಿಗಸ್, ಜಿ.ಪಂ.ಮಾಜಿ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಪದ್ಮಶೇಖರ್ ಜೈನ್, ಎಂ.ಎಸ್ .ಮಹಮ್ಮದ್, ತಾ.ಪಂ.ಮಾಜಿ ಸದಸ್ಯರಾದ ಅಬ್ಬಾಸ್ ಆಲಿ, ಸಂಜೀವ ಪೂಜಾರಿ, ಗ್ರಾ.ಪಂ.ಅಧ್ಯಕ್ಷೆ ಭಾರತಿ ರಾಜೇಂದ್ರ, ಪುರಸಭಾ ಸದಸ್ಯರಾದ ವಾಸುಪೂಜಾರಿ, ಲೋಲಾಕ್ಷ ಶೆಟ್ಟಿ, ಪ್ರಮುಖರಾದ ಅಮ್ಮು ರೈ ಅರ್ಕಾಡಿ, ಸುದರ್ಶನ ಜೈನ್, ಮಾಯಿಲಪ್ಪ ಸಾಲಿಯಾನ್, ದೇವಪ್ಪ ಕರ್ಕೇರ, ವೆಂಕಪ್ಪ ಪೂಜಾರಿ, ಶ್ರೀದರ್ ಪೈ,ನವೀನ್ ಚಂದ್ರ ಶೆಟ್ಟಿ, ಗಣೇಶ್ ನಾಯಕ್ ಕರ್ಪೆ,ಸದಾಶಿವ ಬಂಗೇರ, ದೇವಪ್ಪ ಕುಲಾಲ್, ಸುರೇಶ್ ಜೋರಾ, ಜಗದೀಶ್ ಕೊಯಿಲ, ಶಬೀರ್ ಸಿದ್ದಕಟ್ಟೆ, ರಮೇಶ್ ನಾಯಕ್ ರಾಯಿ, ತಿಮ್ಮಪ್ಪ ಪೂಜಾರಿ , ಮತ್ತಿತರರು ಉಪಸ್ಥಿತರಿದ್ದರು.
ಮಾಣಿ ಗ್ರಾಮಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಆಳ್ವ ಕಾರ್ಯಕ್ರಮ ನಿರೂಪಿಸಿದರು.