ಈಶ್ವರ ಮಂಗಳ ಹಾಗೂ ಅನ್ನಪ್ಪಾಡಿ ದೇವಸ್ಥಾನದ ವಠಾರದಲ್ಲಿ ವನ ದಿಗ್ವಿಜಯ ಕಾರ್ಯಕ್ರಮ
ಬಂಟ್ವಾಳ: ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಬಂಟ್ವಾಳ ತಾಲೂಕು ಸಮಿತಿಯ ಆಶ್ರಯದಲ್ಲಿ ಮಾಧವ ಉಳ್ಳಾಲ್ ಸಾರಥ್ಯದ ಗ್ಲೋಬಲ್ ಗ್ರೀನ್ ಫೌಂಢೇಶನ್ ಸಹಕಾರದೊಂದಿಗೆ ಸಜೀಪಮೂಡ ಗ್ರಾಮದ ಈಶ್ವರ ಮಂಗಳ ಶ್ರೀ ಸದಾಶಿವ ದೇವಸ್ಥಾನ ಹಾಗೂ ಅನ್ನಪ್ಪಾಡಿ ಮಹಾಗಣಪತಿ ದೇವಸ್ಥಾನದ ವಠಾರದಲ್ಲಿ ವನ ದಿಗ್ವಿಜಯ ಕಾರ್ಯಕ್ರಮದ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮ ಜರುಗಿತು.
ಸಜೀಪಮಾಗಣೆಯ ತಂತ್ರಿ, ರೈತ ಸಂಘ ಹಸಿರು ಸೇನೆಯ ಬಂಟ್ವಾಳ ತಾಲೂಕು ಸಮಿತಿ ಅಧ್ಯಕ್ಷ ಎಂ. ಸುಬ್ರಹ್ಮಣ್ಯ ಭಟ್ ಅವರು ವನ ದಿಗ್ವಿಜಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಅವರು ಮಾತನಾಡಿ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿರುವ ಈ ಸದಾಶಿವ ದೇವಸ್ಥಾನದಲ್ಲಿ ಭಕ್ತಾಭಿಮಾನಿಗಳ ಮನೋಲ್ಲಾಸ ಹೆಚ್ಚಿಸಲು ಹಾಗೂ ದೇವಸ್ಥಾನ ಶೋಭೆ ಹೆಚ್ಚಿಸುವ ನಿಟ್ಟಿನಲ್ಲಿ ರೈತ ಸಂಘ ಹಸಿರು ಸೇನೆಯ ವತಿಯಿಂದ ಔಷಧಿಯ ಸಸ್ಯಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪ್ರಸ್ತುತ ದಿನಗಳಲ್ಲಿ ದ.ಕ. ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ ದಾಖಲಾಗುತ್ತಿದ್ದು ಸಸ್ಯಸಂಕುಲಗಳು ಹೆಚ್ಚಾದರೆ ತಾಪಮಾನ ಕಡಿಮೆಯಾಗುತ್ತದೆ. ಆ ನಿಟ್ಟಿನಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಹಸಿರು ಉಳಿಸುವ ಕಾರ್ಯವನ್ನು ಮಾಡಲಾಗಿದೆ ಎಂದರು.
ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿ ಮನೋಹರ ಶೆಟ್ಟಿ ನಡಿಕಂಬಳಗುತ್ತು ಮಾತನಾಡಿ ವೃಕ್ಷ ಸಂತ ಮಾಧವ ಉಳ್ಳಾಲ್ ಅವರು ವಿಶೇಷ ಪ್ರಯತ್ನದ ಮೂಲಕ ದೇವಸ್ಥಾನಗಳ ಆವರಣ, ಸ್ಮಶಾನ ಪರಿಸರದಲ್ಲಿ ಗಿಡಗಳನ್ನು ನೆಡುವ ಕಾರ್ಯವನ್ನು ಮಾಡುತ್ತಿದ್ದಾರೆ. ವನ ದಿಗ್ವಿಜಯ ಕಾರ್ಯಕ್ರಮವನ್ನು ಪ್ರಥಮವಾಗಿ ಕುಪ್ಪೆಪದವಿನ ಸಾಂಬ ಸದಾಶಿವ ದೇವಸ್ಥಾನದಲ್ಲಿ ಆರಂಭಿಸಲಾಯಿತು ಎರಡನೇ ಹಂತದಲ್ಲಿ ಈಶ್ವರ ಮಂಗಳ ಸದಾಶಿವ ದೇವಸ್ಥಾನದಲ್ಲಿ ನಡೆಸಲಾಗುತ್ತಿದೆೆಂದರು.
ಈ ಸಂದರ್ಭ ಗ್ಲೋಬಲ್ ಗ್ರೀನ್ ಫೌಂಢೇಶನ್‌ನ ಮಾಧವ ಉಳ್ಳಾಲ್, ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಪೂಂಜ, ಸದಸ್ಯರಾದ ಕೆ.ಸದಾಶಿವ ಶೆಟ್ಟಿ, ಪದ್ಮನಾಭ ಕೊಟ್ಟಾರಿ, ರವಿಚಂದ್ರ, ರೈತ ಸಂಘದ ತಾಲೂಕು ಕಾರ್ಯದರ್ಶಿ ಸುದೇಶ್ ಮಯ್ಯ, ಪ್ರಮುಖರಾದ ವಿಶ್ವನಾಥ ಕೊಟ್ಟಾರಿ, ವಾಸುಗಟ್ಟಿ, ಚಂದ್ರಹಾಸ, ಗಣೇಶ್ ಮತ್ತಿತರರು ಉಪಸ್ಥಿತರಿದ್ದರು.