ಉಡುಪಿ – ಕಾಸರಗೋಡು 400 ಕೆವಿ ವಿದ್ಯುತ್ ಪ್ರಸರಣ ಮಾರ್ಗ ಖಂಡಿಸಿ ಪ್ರತಿಭಟನೆ
ಬಂಟ್ವಾಳ: ರೈತರ ವಿರೋಧದ ನಡುವೆಯೂ ಕೃಷಿ ಭೂಮಿಯನ್ನು ನಾಶಪಡಿಸಿ, ರೈತರ ಹಿತಾಸಕ್ತಿ ಕಾಪಾಡದೆ ಉಡುಪಿ – ಕಾಸರಗೋಡು 400 ಕೆವಿ ವಿದ್ಯುತ್ ಪ್ರಸರಣ ಮಾರ್ಗ ಹಾದುಹೋಗಲು ಪ್ರಯತ್ನ ಪಡುತ್ತಿರುವ ಕಂಪೆನಿ ಹಾಗೂ ಜಿಲ್ಲಾಡಳಿತದ ವಿರುದ್ಧ ಬಂಟ್ವಾಳ ತಾಲೂಕು ಆಡಳಿತ ಸೌಧದ ಮುಂಭಾಗ ಬುಧವಾರ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಯವರು ಸ್ಥಳಕ್ಕಾಗಮಿಸಬೇಕೆಂದು ಪಟ್ಟು ಹಿಡಿದು ರೈತರು ರಸ್ತೆ ತಡೆಯನ್ನು ನಡೆಸಿದರು. ತಹಶೀಲ್ದಾರ್ ಹಾಗೂ ಮಂಗಳೂರು ಸಹಾಯಕ ಕಮಿಷನರ್ ಅವರು ಸ್ಥಳಕ್ಕಾಗಮಿಸಿ ಪ್ರತಿಭಟನಾಕಾರರ ಮನವೊಲಿಸಲು ಯತ್ನಿಸಿದರೂ ಫಲಕಾರಿಯಾಗಲಿಲ್ಲ ,ಕೊನೆಗೂ ಸಹಾಯಕ ಕಮಿಷನರ್ ಅವರು ಈ ಬಗ್ಗೆ ಪರ್ಯಾಯ ವ್ಯವಸ್ಥೆಯನ್ನು ಮಾಡುವ ಸರಕಾರಕ್ಕೆ ವಾರದೊಳಗೆ ಲಿಖಿತ ವರದಿ ಸಲ್ಲಿಸಿ ಯಥಾ ಪ್ರತಿಯನ್ನು ರೈತರಿಗೆ ನೀಡುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಹಿಂತೆಗೆದುಕೊಂಡರು.
ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್,ಮಾಜಿ ಸಚಿವ ಬಿ ರಮನಾಥ ರೈ, ರಾಜ್ಯ ರೈತ ಸಂಘ ಕಾರ್ಯದರ್ಶಿ ಮನೋಹರ ಶೆಟ್ಟಿ, ಶ್ರೀಧರ ಶೆಟ್ಟಿ ಬೈಲುಗುತ್ತು,ಜಿಲ್ಲಾ ಗೌರವಾಧ್ಯಕ್ಷ ಧನಕೀರ್ತಿ ಬಲಿಪ,ಜಿಲ್ಲಾ ಕಾನೂನು ಸಲಹೆಗಾರ ನ್ಯಾಯವಾದಿ ಎಸ್ .ಪಿ. ಚಂಗಪ್ಪ, ಬಂಟ್ವಾಳ ತಾಲೂಕು ರೈತ ಸಂಘ ಅಧ್ಯಕ್ಷ ಎಂ. ಸುಬ್ರಹ್ಮಣ್ಯ ಭಟ್,ರೈತ ಹೋರಾಟ ಸಮಿತಿ ಅಧ್ಯಕ್ಷ ರಾಜೀವ ಗೌಡ ಮಂಗಳೂರು ತಾಲೂಕು ಅಧ್ಯಕ್ಷ ದಯಾನಂದ ಶೆಟ್ಟಿ, ಬಂಟ್ವಾಳ ತಾಲೂಕು ಗೌರವಾಧ್ಯಕ್ಷ ಮುರುವ ಮಹಾಬಲ ಭಟ್, ತುಳುನಾಡು ಪಂಚಾಯತ್ ವೇದಿಕೆ ಅಧ್ಯಕ್ಷ ರೋಷನ್ ಲೋಬೋ ಮೊದಲಾದವರು ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದರು.
ಇದಕ್ಕು ಮೊದಲು ಬಿ.ಸಿ.ರೋಡು ಬ್ರಹ್ಮಶ್ರೀ ನಾರಾಯಣಗುರು ವೃತ್ತದಿಂದ ತಾಲೂಕುಕಚೇರಿ ವರೆಗೆ ರೈತ ಪ್ರತಿಭಟನಾಕಾರರು ಮೆರವಣಿಗೆ ನಡೆಸಿದರು.