ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿಗಳ ದೀಪ ಪ್ರಧಾನ ಕಾರ‍್ಯಕ್ರಮ
ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿಗಳ ದೀಪ ಪ್ರಧಾನ ಕಾರ‍್ಯಕ್ರಮ ಶಾಲೆಯ ಮಧುಕರ ಸಭಾಂಗಣದಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿದ್ದಮಂಗಳೂರು ಪವರ್ ಪ್ಯಾಕ್ ಇಂಡಸ್ಟ್ರೀಸ್ ಇದರ ಆಡಳಿತ ನಿರ್ದೇಶಕರಾದ ಪ್ರಜ್ವಲ್ ಪಿ.ಶೆಟ್ಟಿ ಅವರು ಮಾತನಾಡಿ,ಜೀವನದಲ್ಲಿ ಪ್ರತಿಯೊಂದು ಪ್ರಯತ್ನವು ಫಲ ಕೊಡಬೇಕಾಗಿಲ್ಲ ಆದರೆ ಸೋತಾಗ ಕುಗ್ಗದೆ, ಗೆದ್ದಾಗ ಹಿಗ್ಗದೆ ಸತತವಾದ ಪ್ರಯತ್ನದಿಂದ ಯಶಸ್ಸು ಖಚಿತವಾಗಿ ಸಿಗುತ್ತದೆ ಎಂದು ಹೇಳಿದರು.
ಇನ್ನೊರ್ವ ಅತಿಥಿ ಮಂಗಳೂರು ಅಂತರ್ಜಲ್ ಪ್ರೈವೇಟ್ ಲಿ.ನ ಆಡಳಿತ ನಿರ್ದೇಶಕರಾದ ಆದಿತ್ಯ ಸ್ವರೂಪ್ ಮಾತನಾಡಿ, ವಿದ್ಯಾರ್ಥಿಗಳಿಗೆ ಜೀವನದಪ್ರತಿಯೊಂದು ಹಂತದಲ್ಲಿ ಆತ್ಮಬಲ ಮುಖ್ಯ ಎಂದರು.
ಪ್ರಯೋಗಾಲಯ ಉದ್ಘಾಟನೆ:
ಇದೇವೇಳೆ ನೂತನ ಗಣಿತ ಪ್ರಯೋಗಾಲಯವನ್ನು ಸಾಮಾಜಿಕ ಕಾರ್ಯಕರ್ತೆ ಪ್ರತಿಭಾ ಅರುಣ್ ಇವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಇವರು ಜೀವನದಲ್ಲಿ ವಿದ್ಯಾರ್ಥಿಗಳು ಕನಸನ್ನು ಕಾಣಬೇಕು. ಆ ಕನಸನ್ನು ಸಾಧಿಸಲು ಕಠಿಣ ಪರಿಶ್ರಮ ಪಡಬೇಕು ಎಂದರು.
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ.ಪ್ರಭಾಕರ್ ಭಟ್ ಪ್ರಾಸ್ತವಿಕ ಮಾತನಾಡಿ ಶ್ರೀರಾಮ ವಿದ್ಯಾಕೇಂದ್ರವು ಶಿಶು ಮಂದಿರದಿಂದ ಉನ್ನತ ಶಿಕ್ಷಣದವರೆಗೆ ಸಂಸ್ಕಾರದ ಜೊತೆಗೆ ಆಧುನಿಕತೆಯ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡುತ್ತಿದೆ ಎಂದರು.
ಹತ್ತನೇ ತರಗತಿ ವಿದ್ಯಾರ್ಥಿಗಳು ಭಾರತಮಾತೆಗೆ ಪುಷ್ಪಾರ್ಚನೆ ಮಾಡಿ ಹಿರಿಯರಿಂದ ತಿಲಕಧಾರಣೆ ಮಾಡಿಸಿಕೊಂಡರು. 10ನೇ ತರಗತಿ ವಿದ್ಯಾರ್ಥಿಗಳು 9ನೇ ತರಗತಿ ವಿದ್ಯಾರ್ಥಿಗಳಿಗೆ ದೀಪ ಪ್ರಧಾನ ಹಾಗೂ ತಮ್ಮ ಕೊಡುಗೆಯನ್ನು ಸಂಸ್ಥೆಯ ಹಿರಿಯರಿಗೆ ಹಸ್ತಾಂತರಿಸಿದರು. ಕ್ರೀಡೋತ್ಸವದಲ್ಲಿ ಕೂಪಿಕಾ ಪ್ರದರ್ಶನ ಮಾಡಿದ ಹರ್ಷಿತಾಳಿಗೆ ಗೋವಾ ರಾಜ್ಯದ ಮುಖ್ಯಮಂತ್ರಿ ಕಳುಹಿಸಿದ ಬಹುಮಾನವನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು.
ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಉಡುಪಿ ಇದರ ಉಪಾಧ್ಯಕ್ಷರಾದ ಎ.ಕಿರಣ್ ಕೊಡ್ಗಿ, ಸಾವಿತ್ರಿ ದೇವಿ ಮೆಮೋರಿಯಲ್ ಟ್ರಸ್ಟ್ ನ ಆಡಳಿತ ನಿರ್ದೇಶಕರಾದ ವಿಶ್ವಾಸ್ ಯು.ಎಸ್. ರಾವ್, ವಿದ್ಯಾಕೇಂದ್ರದ ಅಧ್ಯಕ್ಷರಾದ ಬಿ. ನಾರಾಯಣ ಸೋಮಯಾಜಿ, ಸಂಚಾಲಕರಾದ ವಸಂತ ಮಾಧವ, ಸಹಸಂಚಾಲಕರಾದ ರಮೇಶ್.ಎನ್, ಕಮಲ ಪ್ರಭಾಕರ್ ಭಟ್,
ಆಡಳಿತ ಮಂಡಳಿ ಸದಸ್ಯೆ ಲಕ್ಷ್ಮೀ ರಘರಾಜ್, ಪ್ರೌಢಶಾಲೆಯ ಆಡಳಿತ ಅಧಿಕಾರಿ ಶಾಂಭವಿ, ಮುಖ್ಯೋಪಾಧ್ಯಾಯರಾದ ಗೋಪಾಲ.ಎಂ ಹಾಗೂ ವಿದ್ಯಾಕೇಂದ್ರದ ಎಲ್ಲಾ ವಿಭಾಗಗಳ ಮುಖ್ಯಸ್ಥರು, ವಿದ್ಯಾರ್ಥಿಗಳು, ಶಿಕ್ಷಕರು-ಶಿಕ್ಷಕೇತರ ವೃಂದ, ಉಪಸ್ಥಿತರಿದ್ದರು. ನಿಖಿತಾ ಕಾರ್ಯಕ್ರಮ ನಿರೂಪಿಸಿದರು.