ಬಂಟ್ವಾಳ: ಪ್ರತಿಯೊಂದು ವಿದ್ಯಾರ್ಥಿಗೂ ಧರ್ಮದ ತಳಹದಿಯಲ್ಲಿ ಸುಸಂಸ್ಕೃತ ಶಿಕ್ಷಣ ನೀಡಿದಾಗ ಮಾತ್ರ ಆತನಿಂದ ದೇಶೀಯ ಸಂಸ್ಕಾರ ಮತ್ತು ದೇಶಭಕ್ತಿ ನಿರೀಕ್ಷಿಸಲು ಸಾಧ್ಯವಿದೆ ಎಂದು ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರ ಸಂಚಾಲಕ ಡಾ.ಕೆ.ಪ್ರಭಾಕರ ಭಟ್ ಹೇಳಿದ್ದಾರೆ.
ಬಂಟ್ವಾಳ ವಕೀಲರ ಸಂಘ ಮತ್ತು ರೋಟರಿ ಕ್ಲಬ್ಬಿನ ವತಿಯಿಂದ ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರದಲ್ಲಿ ಶಿಕ್ಷಕರಿಗಾಗಿ ಸೋಮವಾರ ಏರ್ಪಡಿಸಿದ್ದ ‘ಮಕ್ಕಳ ಸಂರಕ್ಷಣೆ ಮತ್ತು ಪೋಕ್ಸೊ ಕಾಯ್ದೆ’ ಮಾಹಿತಿ ಶಿಬಿರದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಕ್ಕಳ ಶ್ರೇಯೋಭಿವೃದ್ಧಿಗೆ ಶಿಕ್ಷಕರು ಮತ್ತು ಹೆತ್ತವರ ಕೊಡುಗೆಯೂ ಗಣನೀಯವಾಗಿ ಸಿಗಬೇಕು. ಆ ಮೂಲಕ ಸುಸಂಸ್ಕೃತ ಸಮಾಜ ನಿರ್ಮಾಣವಾಗುತ್ತದೆ ಎಂದು ಅವರು ತಿಳಿಸಿದರು.
ಶಿಕ್ಷಣದಲ್ಲಿ ಧಾರ್ಮಿಕತೆ ಅಗತ್ಯ: ಡಾ.ಪ್ರಭಾಕರ ಭಟ್

ಹಿರಿಯ ಸಿವಿಲ್ ನ್ಯಾಯಾಧೀಶ ಚಂದ್ರಶೇಖರ ಯು. ಕಾರ್ಯಕ್ರಮ ಉದ್ಘಾಟಿಸಿದರು. ಪುಟ್ಟ ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ದೊರೆತು ದೌರ್ಜನ್ಯ ವಿರುದ್ಧ ಕಾನೂನು ಪ್ರಕ್ರಿಯೆ ಬಗ್ಗೆ ಅವರಿಗೆ ಸೂಕ್ತ ಮಾಹಿತಿ ನೀಡುವ ಅವಶ್ಯಕತೆ ಇದೆ ಎಂದರು.
ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ಪ್ರಕಾಶ ಕಾರಂತ, ರೋಟರಿ ಜಿಲ್ಲಾ ಸಹಾಯಕ ಗವರ್ನರ್ ವಕೀಲ ಅಶ್ವನಿ ಕುಮಾರ್ ರೈ, ಕಾರ್ಯದರ್ಶಿ ಸಂಜೀವ ಪೂಜಾರಿ, ವಕೀಲರ ಸಂಘದ ಅಧ್ಯಕ್ಷ ಚಂದ್ರಶೇಖರ ಪೂಜಾರಿ, ಉಪತಹಶೀಲ್ದಾರ್ ರೋಹಿದಾಸ್, ಸರ್ಕಾರಿ ವಕೀಲ ಎಂ.ಎಸ್.ಆಲಿ, ಮುಖ್ಯಶಿಕ್ಷಕ ವಸಂತ ಮಾಧವ ಮತ್ತಿತರರು ಶುಭ ಹಾರೈಸಿದರು.
ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಶೇಷಶಯನ ಕಾರಿಂಜ ಸ್ವಾಗತಿಸಿ, ಹಿರಿಯ ವಕೀಲ ಕಜೆ ರಾಮಚಂದ್ರ ಭಟ್ ಉಪನ್ಯಾಸ ನೀಡಿದರು. ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ರಾಜೇಶ್ ಬಿ. ವಂದಿಸಿದರು. ಶಿಕ್ಷಕ ಜಿನ್ನಪ್ಪ ಏಳ್ತಿಮಾರ್ ಕಾರ್ಯಕ್ರಮ ನಿರೂಪಿಸಿದರು.
