ಕೂಟ ಮಹಾಜಗತ್ತು ಸಾಲಿಗ್ರಾಮ ಮುಂಬಯಿ ಸಂಸ್ಥೆ ಆಯೋಜಿಸಿದ ಕರ್ನಾಟಕ ವೈಭವ ಯುವಪೀಳಿಗೆ ಕಲಾ ಪೋಷಣೆಗೆ ಆಸಕ್ತಿ ತೋರಬೇಕು : ಡಾ| ಎ.ಎಸ್ ರಾವ್
ಮುಂಬಯಿ: ಪರಂಪರೆಗಳ ಉಳಿವಿಗೆ ಸಾಂಸ್ಕೃತಿಕ ಪ್ರದರ್ಶನಗಳು ಪೂರಕವಾಗಿವೆ. ಕನ್ನಡದ ಹಿರಿಮೆ ಪ್ರಜ್ವಲಿಸಲು ಇಂತಹ ಕಲಾ ಪ್ರದರ್ಶನಗಳು ಸಹಕಾರಿಯಾಗಿದ್ದು, ಯುವಪೀಳಿಗೆಯು ಕಲಾ ಉಳುವಿಗೆ ಆಸಕ್ತಿ ತೋರಬೇಕು. ಜೊತೆಗೆ ಪರಂಪರಗತವುಳ್ಳ ಕಲೆಗಳ ಉಳಿವಿಗೆ ಕಲಾಭಿಮಾನಿಗಳ ಸಹಯೋಗ ಅಗತ್ಯವಾಗಿದೆ. ನಮ್ಮಲ್ಲಿನ ಪರಂಪರೆಗಳು ಶ್ರೀಮಂತ ಗತವೈಭವ ಹೊಂದಿದ್ದು ಇದನ್ನು ಕಲಾಪ್ರೋತ್ಸಾಹಿಸಲು ಸಂಸ್ಥೆಗಳು ಒತ್ತುನೀಡಬೇಕು. ಆವಾಗಲೇ ನಮ್ಮ ಇತಿಹಾಸಗಳು ಮರುಕಳಿಸಲು ಸಾಧ್ಯ ಎಂದು ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನದ ಅಧ್ಯಕ್ಷ ಡಾ| ಎ.ಎಸ್ ರಾವ್ ತಿಳಿಸಿದರು.

ಕೂಟ ಮಹಾಜಗತ್ತು ಸಾಲಿಗ್ರಾಮ (ರಿ.) ಮುಂಬಯಿ ಅಂಗ ಸಂಸ್ಥೆಯು ಇಂದಿಲ್ಲಿ ಭಾನುವಾರ ಸಂಜೆ ಸಾಂತಾಕ್ರೂಜ್ ಪೂರ್ವದ ಮಧ್ವ ಭವನದ (ಪೇಜಾವರ ಮಠ) ಶ್ರೀ ವಿಶ್ವೇಶ ತೀರ್ಥ ಸಭಾಗೃಹದಲ್ಲಿ ಕರ್ನಾಟಕ ಬ್ಯಾಂಕ್ ಮತ್ತು ಪೇಜಾವರ ಮಠ ಮುಂಬಯಿ ಶಾಖೆ ಇವುಗಳ ಸಹಯೋಗಲ್ಲಿ ಕರ್ನಾಟಕ ವೈಭವದ ನವರಸ ಕರ್ನಾಟಕ ನೃತ್ಯ ಕಾರ್ಯಕ್ರಮ ಆಯೋಜಿಸಿದ್ದು ಡಾ| ಎ.ಎಸ್ ರಾವ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನದ ಗೌರವ ಕೋಶಾಧಿಕಾರಿ ಅವಿನಾಶ್ ಶಾಸ್ತ್ರಿ, ಕೂಟ ಮಹಾಜಗತ್ತು ಸಾಲಿಗ್ರಾಮ ಮುಂಬಯಿ ಅಂಗ ಸಂಸ್ಥೆಯ ಅಧ್ಯಕ್ಷ ಪಿ.ನಾಗೇಶ್ ರಾವ್, ಉಪಾಧ್ಯಕ್ಷ ಹೆಚ್.ಹರ್ಷ ರಾವ್, ಕಾರ್ಯದರ್ಶಿ ರಮೇಶ್ ಎಂ.ರಾವ್, ಕಾರ್ಯಕಾರಿ ಸಮಿತಿ ಸದಸ್ಯೆ ರೋಹಿಣಿ ಬೈರಿ ವೇದಿಕೆಯಲ್ಲಿ ಉಪಸ್ಥಿತರಿದ್ದು ಗುರು ಮಮತಾ ಕಾರಂತ ಮತ್ತು ಕಲಾವಿದರನ್ನು ಸನ್ಮಾನಿಸಿ ಸನ್ಮಾನಿಸಿ ಅಭಿನಂದಿಸಿದರು.

ಪಿ.ನಾಗೇಶ್ ರಾವ್ ಮಾತನಾಡಿ ಕಲೆ, ಪಂಪರೆಗಳ ಬಗ್ಗೆ ಯುವಪೀಳಿಗೆ ತಿಳಿದು ಅದರ ರಕ್ಷಣೆಯಲ್ಲಿ ಆಸಕ್ತಿ ತೋರಬೇಕು. ಕಲಾ ತಂಡಗಳು ನಮ್ಮಲ್ಲಿನ ಪರಂಪರೆಗಳ ಉಳಿವಿಗೆ ಕಲಾ ಪ್ರದರ್ಶನಗಳ ಮೂಲಕ ಜಾಗೃತಿ ಮೂಡಿಸುತ್ತಿರುವುದು ಪ್ರಶಂಸನೀಯ. ಶ್ರೀಮಂತ ಪರಂಪರೆಯನ್ನು ಪ್ರೋತ್ಸಾಹಿಸಲು ಅವುಗಳ ಪ್ರಾಮುಖ್ಯತೆಯ ನ್ನು ನಾವು ತಿಳಿದು ಭಾವೀ ಜನಾಂಗಕ್ಕೆ ಕಲಿಸುವ ಅಗತ್ಯವಿದೆ ಎಂದರು.

ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನದ ಭಾರ್ಗವ ಆಚಾರ್ಯ, ಶ್ರೀ ಪೇಜಾವರ ಮಠದ ವಿದ್ವಾನ್ ಹರಿ ಭಟ್ (ಪುತ್ತಿಗೆ), ಪುರೋಹಿತ ಪವನ್ ಆಚಾರ್ಯ, ಮುಖ್ಯ ವ್ಯವಸ್ಥಾಪಕ ನಿರಂಜನ್ ಗೋಗ್ಟೆ ಹಾಗೂ ಸೇರಿದಂತೆ ಕೂಟ ಮಹಾಜಗತ್ತು ಸಾಲಿಗ್ರಾಮ ಮುಂಬಯಿ ಅಂಗ ಸಂಸ್ಥೆಯ ಜೊತೆ ಕಾರ್ಯದರ್ಶಿಗಳಾದ ಅಶೋಕ್ ಕಾರಂತ್, ಗೀತಾ ರಘುರಾಮ್ ಹೆರಳೆ, ಕಾರ್ಯಕಾರಿ ಸಮಿತಿ ಸದಸ್ಯರಾದ ರವಿ ರಾವ್, ಪ್ರವೀಣ್ ಮಯ್ಯ, ರವಿ ಕಾರಂತ್, ಗುರು ನರಸಿಂಹ ವಾಣಿ ಸಂಪಾದಕೀಯ ಮಂಡಳಿಯ ಪಿ.ಎಸ್ ಕಾರಂತ್, ಅನುರಾಧ ಮಯ್ಯ ಮತ್ತಿತರ ಗಣ್ಯರು ಹಾಗೂ ಮಹಾನಗರದಲ್ಲಿನ ಅಪಾರ ಸಂಖ್ಯೆಯ ಕಲಾಪ್ರಿಯರು, ಕಲಾಭಿಮಾನಿಗಳು ಉಪಸ್ಥಿತರಿದ್ದು ನಾಟ್ಯ ಲಹರಿ ಬೆಂಗಳೂರು ಕಲಾ ತಂಡವು ಗುರು ಮಮತಾ ಕಾರಂತ ಅವರ ನಿರ್ದೇಶನದಲ್ಲಿ ನವರಸ ಕರ್ನಾಟಕಕ್ಕೆ ಕಾರ್ಯಕ್ರಮ ಪ್ರಸ್ತುತ ಪಡಿಸಿತು.

ಪರೇಲ್ ಶ್ರೀನಿವಾಸ್ ಭಟ್ ಪ್ರಾರ್ಥನೆಯನ್ನಾಡಿದರು. ಪಿ.ನಾಗೇಶ್ ರಾವ್ ಸ್ವಾಗತಿಸಿದರು. ರೋಹಿಣಿ ಬೈರಿ ಕಲಾವಿದೆ ಮತ್ತು ತಂಡವನ್ನು ಪರಿಚಯಿಸಿದರು. ರಮೇಶ್ ಎಂ.ರಾವ್ ಪ್ರಸ್ತಾವನೆಗೈದು ಕಾರ್ಯಕ್ರಮ ನಿರೂಪಿಸಿದರು. ಹರ್ಷ ರಾವ್ ವಂದನಾರ್ಪಣೆಗೈದರು.









