ಸುದ್ದಿ9 ಕೈಕಂಬ: ಕೆಲವೊಮ್ಮೆ ಪರಿಸ್ಥಿತಿ ಹೇಗೆ ಉಲ್ಟಾ ಹೊಡೆಯುತ್ತದೆ ಎಂಬುವುದಕ್ಕೆ ಈ ಘಟನೆ ಸಾಕ್ಷಿ ಹೇಳುತ್ತಿದೆ. ನಾಗರಹಾವೊಂದು ಮೊಟ್ಟೆ ತಿನ್ನುವ ಆಸೆಯಿಂದ ನವಿಲಿದ್ದ ಗೂಡಿಗೆ ಬಂದಿದ್ದು, ಇದನ್ನು ಕಂಡ ನವಿಲು ತನ್ನ ಬಳಿಗೆ ಆಹಾರವೇ ಹುಡುಕಿ ಬರುತ್ತಿದೆ ಎಂದು ನಾಗರಹಾವನ್ನೇ ತಿಂದು ಹಾಕಿದೆ. ಇಂಥಾ ವಿಲಕ್ಷಣ ಘಟನೆ ಮಳಲಿ ಸಮೀಪದ ನಾರಳಮಠ ಎಂಬಲ್ಲಿನ ಗುಡ್ಡೆಯಲ್ಲಿ ನಡೆದಿದೆ.
ಘಟನೆಯ ವಿವರ: ನಾರಳಮಠದ ಗುಡ್ಡದಲ್ಲಿ ನವಿಲೊಂದು ಮೊಟ್ಟೆ ಇಟ್ಟು ಕಾವು ಕೊಡುತ್ತಿತ್ತು. ಈ ದೃಶ್ಯವನ್ನು ಮೊದಲೇ ಗಮನಿಸಿದ್ದ ನಾಗರ ಹಾವು ನವಿಲಿನ ಮೊಟ್ಟೆ ಕಬಳಿಸಲು ಬಹಳ ಸಮಯದಿಂದ ಹೊಂಚುಹಾಕಿ ಕುಳಿತಿತ್ತು. ಒಂದರ್ಥದಲ್ಲಿ ನೋಡುವುದಾದರೆ ನವಿಲಿನ ಮೊಟ್ಟೆ ನಾಗನ ಆಹಾರವಾದರೆ, ನಾಗರ ಹಾವು ನವಿಲಿನ ಆಹಾರ. ಹೀಗೆ ಜೀವಿಶಾಸ್ತ್ರ ತತ್ವಕ್ಕೆ ಕಟ್ಟುಬಿದ್ದಿದ್ದ ನವಿಲು ಹಾಗೂ ನಾಗ ಕೊನೆಗೂ ಪ್ರಕೃತಿಯ ಸಹಜ ಕ್ರಿಯೆಗೆ ಸಾಕ್ಷಿಯಾಗಿಯೇ ಬಿಟ್ಟಿದೆ.


ಅಷ್ಟಕ್ಕೂ ಅಲ್ಲಿ ನಡೆದಿದ್ದೇನು ಎಂಬುವುದನ್ನು ನೋಡಿದರೆ ನಾವು ಖಂಡಿತಾ ಬೆಚ್ಚಿಬೀಳಬೇಕು. ನವಿಲು ಆಹಾರ ತಿನ್ನಲೆಂದು ತನ್ನ ಮೊಟ್ಟೆಗಳನ್ನು ಅಲ್ಲೇ ಬಿಟ್ಟು ತೆರಳಿತ್ತು. ಇದನ್ನೇ ಹೊಂಚು ಹಾಕಿ ಕುಳಿತಿದ್ದ ನಾಗರಹಾವು ಮೊಟ್ಟೆಯನ್ನು ಕಬಳಿಸಲೆಂದು ಮೊಟ್ಟೆಯತ್ತ ಬಂದಿತ್ತು.
ಇನ್ನೇನು ಮೊಟ್ಟೆಯನ್ನು ನುಂಗಬೇಕೆನ್ನುವಷ್ಟರಲ್ಲಿ ಅಷ್ಟಕ್ಕೇ ನವಿಲು ಎಂಟ್ರಿ ಕೊಟ್ಟೇ ಬಿಟ್ಟಿತು. ಮೊಟ್ಟೆಯ ಬಳಿ ನಾಗರ ಹಾವು ಇರುವುದನ್ನು ಗಮನಿಸಿದ ನವಿಲು ಕ್ಯಾರೇ ಅನ್ನದೆ ನಾಗನ ಮುಖಕ್ಕೆ ಕೊಕ್ಕಿನಲ್ಲಿ ಕುಕ್ಕಿ ದೂರ ಸರಿಸಿತು. ಆಮೇಲೇ ಏನೂ ಆಗೇ ಇಲ್ಲದಂತೆ ಮೊಟ್ಟೆಯ ಮೇಲೆ ಕಾವುಕೊಟ್ಟು ಬಿಟ್ಟಿತು.
ಇದೇ ವೇಳೆ ನವಿಲು ನಾಗರ ಹಾವಿಗೆ ದಡೆ(ದಿಗ್ಬಂಧನ) ಹಾಕಿದ್ದರಿಂದ ನಾಗ ಅಲ್ಲಿಂದ ಸರಿಯುವ ಮಾತೇ ಇರಲಿಲ್ಲ. ಇದೇ ವೇಳೆ ನಾಗರಹವಿಗೂ ತಾನಿರುವ ಪರಿಸ್ಥಿತಿಯ ಬಗ್ಗೆ ಅರಿವಾಗಿಯೇ ಬಿಟ್ಟಿತ್ತು. ನವಿಲು ದಿಗ್ಬಂಧನ ವಿಧಿಸಿದ್ದರಿಂದ ಅಲ್ಲಿಂದ ಸರಿಯುವ ಮಾತೇ ಇರಲಿಲ್ಲ.
ತನ್ನ ಬಳಿ ಇರುವ ಶತ್ರು ನವಿಲನ್ನು ಕಂಡ ಬೆಚ್ಚಿದ ಘಟಸರ್ಪ ತನ್ನ ಹೆಡೆಯನ್ನು ಬಿಚ್ಚಿ ಬುಸುಗುಡಲಾರಂಭಿಸಿತು. ಆದರೆ ನವಿಲು ಮಾತ್ರ ಜಪ್ಪಯ್ಯ ಅನ್ನಲೇ ಇಲ್ಲ. ಒಂದಷ್ಟು ಬಾರಿ ಬುಸುಗುಡುವುದನ್ನು ಗಮನಿಸಿದ ನವಿಲು ಇನ್ನು ನಾಗನ ಆಟವನ್ನು ಮುಗಿಸಬೇಕೆಂದು ನಿರ್ಧರಿತ್ತೋ ಏನೋ? ನಾಗನ ಮುಖಕ್ಕೆ ಬಲವಾಗಿ ಕುಕ್ಕಿ ಸರ್ಪ ಸಂಹಾರ ನಡೆಸಿಯೇ ಬಿಟ್ಟಿತ್ತು. ನವಿಲಿನ ಮೊಟ್ಟೆಯನ್ನು ತಿನ್ನಬೇಕೆಂಬ ಹಂಬಲದಿಂದ ಬಂದಿದ್ದ ಹಾವು ಕೊನೆಗೆ ತನೇ ನವಿಲಿನ ಆಹಾರವಾಗಿ ಬಿಟ್ಟಿತ್ತು.
-ವಾಮನ್ ಪೂಜಾರಿ


