Published On: Mon, Nov 21st, 2022

ಉಳಾಯಿಬೆಟ್ಟುವಿನಲ್ಲಿ ಡಾ. ಭರತ್ ನೇತೃತ್ವದ ೫ನೇ ‘ಜನಸ್ಪಂದನಾ’ ಕಾರ್ಯಕ್ರಮ

ಕೈಕಂಬ : ಮಂಗಳೂರು ನಗರ ಉತ್ತರ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ನೇತೃತ್ವದಲ್ಲಿ ಸರ್ಕಾರದ ವಿವಿಧ ಇಲಾಖೆಗಳ ಸಹಯೋಗದಲ್ಲಿ ನ. ೨೦ರಂದು ಉಳಾಯಿಬೆಟ್ಟಿನ ಖಾಸಗಿ ಸಭಾಗೃಹದಲ್ಲಿ ಉಳಾಯಿಬೆಟ್ಟು, ನೀರುಮಾರ್ಗ, ಮಲ್ಲೂರು ಮತ್ತು ಅಡ್ಯಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಗರಿಕರಿಗಾಗಿ `ಜನಸ್ಪಂದನಾ’ ಕಾರ್ಯಕ್ರಮ ನಡೆಯಿತು.

ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದ ಡಾ. ಭರತ್ ಶೆಟ್ಟಿ ಮಾತನಾಡಿ, ಮಂಗಳೂರು ನಗರ ಉತ್ತರ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ೫ನೇ ಜನಸ್ಪಂದನಾ ಕಾರ್ಯಕ್ರಮ ಇದಾಗಿದ್ದು, ಎಲ್ಲ ಜನಸ್ಪಂದನಾ ಕಾರ್ಯಕ್ರಮಗಳಿಗೆ ಜನರಿಂದ ಉತ್ತಮ ಪ್ರತಿಕ್ರಿಯೆ, ಸ್ಪಂದನೆ ದೊರೆತಿದೆ. ಜೊತೆಗೆ ನೂರಾರು ಮಂದಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಿದ್ದಾರೆ. ನೀರುಮಾರ್ಗ ಮತ್ತು ಅಡ್ಯಾರ್‌ನಲ್ಲಿ ಪ್ರತ್ಯೇಕ ಜನಸ್ಪಂದನಾ ಕಾರ್ಯಕ್ರಮ ಏರ್ಪಡಿಸಲು ಯೋಚಿಸಿದ್ದೇನೆ. ಹೆಚ್ಚೆಚ್ಚು ಜನರು ಇದರ ಪ್ರಯೋಜನ ಪಡೆದಾಗ ಮಾತ್ರ ಇಂತಹ ಕಾರ್ಯಕ್ರಮದ ಉದ್ದೇಶ ಪೂರ್ಣಗೊಳ್ಳುವುದು ಎಂದರು.

ಉಳಾಯಿಬೆಟ್ಟು ಪಂಚಾಯತ್ ಅಧ್ಯಕ್ಷ ಹರಿಕೇಶ್ ಶೆಟ್ಟಿ ನಡಿಗುತ್ತು ಮಾತನಾಡಿ, ಜನಸ್ಪಂದನಾ ಕಾರ್ಯಕ್ರಮ ಆಯೋಜಿಸುವ ಸಂದರ್ಭದಲ್ಲಿ ಮನೆಮನೆಗಳಿಗೆ ತೆರಳಿ ಸರ್ಕಾರದ ಯೋಜನೆಗಳ ಪ್ರಯೋಜನ ಪಡೆಯುವಂತೆ ಗ್ರಾಮಸ್ಥರಲ್ಲಿ ಕೇಳಿಕೊಳ್ಳಲು ಪಂಚಾಯತ್ ಸದಸ್ಯರಿಗೆ ಇದೊಂದು ಉತ್ತಮ ಅವಕಾಶ. ಇಂದಿನ ಜನಸ್ಪಂದನಾ ಕಾರ್ಯಕ್ರಮದಲ್ಲಿ ೪೦ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದು, ಒಂದೇ ಸೂರಿನಡಿ ಗ್ರಾಮಸ್ಥರ ಬಹುತೇಕ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಸಿಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಅರ್ಹ ಫಲಾನುಭವಿಗಳಿಗೆ ವಸತಿ ಯೋಜನೆ ಕಾಮಗಾರಿ ಆದೇಶ ಪತ್ರ, ಶೇ. ೨೫ರ ಯೋಜನೆಯಡಿ ವೈದ್ಯಕೀಯ ನೆರವಿನ ಚೆಕ್, ಅಂಗವಿಕರಿಗೆ ಚೆಕ್, ಹಕ್ಕುಪತ್ರ, ವಿವಿಧ ಪಿಂಚಣಿ ಆದೇಶ ಪ್ರತಿ, ಸುಕನ್ಯಾ ಸಂವೃದ್ಧಿ ಯೋಜನೆಯ ಅಂಚೆ ಖಾತೆ ಪುಸ್ತಕ, ಲೀಡ್ ಬ್ಯಾಂಕ್ ಸಾಲ ಪತ್ರ, ಕಾರ್ಮಿಕ ಇಲಾಖೆಯ ಕಿಟ್, `ಬೆಳಕು’ ಯೋಜನೆಯಡಿ ವಿದ್ಯುತ್ ಸಂಪರ್ಕದ ಆದೇಶ ಪ್ರತಿ ವಿತರಿಸಲಾಯಿತು.

ಮೆಸ್ಕಾ, ಕೃಷಿ, ತೋಟಗಾರಿಕೆ, ಆರೋಗ್ಯ, ಕಂದಾಯ, ಕಾರ್ಮಿಕ, ಸಾರಿಗೆ-ಕೆಎಸ್ಸಾರ್ಟಿಸಿ, ಶಿಕ್ಷಣ, ಲೀಡ್ ಬ್ಯಾಂಕ್, ಅಂಚೆ, ಭೂಮಾಪನ (ಸರ್ವೇ), ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಮೀನುಗಾರಿಕೆ, ಪೊಲೀಸ್, ಜಿಲ್ಲಾ ಕೈಗಾರಿಕಾ ಕೇಂದ್ರ, ಹೆದ್ದಾರಿ ಪ್ರಾಧಿಕಾರ, ಸಣ್ಣ ನೀರಾವರಿ, ಆಯುಷ್ಮಾನ್, ಆಹಾರ ಮತ್ತು ಪಡಿತರ ಮತ್ತಿತರ ೪೦ ಇಲಾಖೆಗಳ ಸಿಬ್ಬಂದಿಯು ಸಾರ್ವಜನಿಕರ ಕುಂದುಕೊರತೆಗಳಿಗೆ ಸ್ಪಂದಿಸಿದ್ದಾರೆ.

ಮಲ್ಲೂರು ಪಂಚಾಯತ್ ಅಧ್ಯಕ್ಷ ಇಸ್ಮಾಯಿಲ್ ಎಂ. ಇ, ಪಿಡಿಒ ರಾಜೇಂದ್ರ, ಉಳಾಯಿಬೆಟ್ಟು ಪಿಡಿಒ ಅನಿತಾ ವಿ. ಕ್ಯಾಥರಿನ್, ನೀರುಮಾರ್ಗ ಪಂಚಾಯತ್ ಅಧ್ಯಕ್ಷೆ ಧನವಂತಿ ವಿ, ಪಿಡಿಒ ಸುಧೀರ್, ಅಡ್ಯಾರು ಪಂಚಾಯತ್ ಅಧ್ಯಕ್ಷೆ ಝೀನತ್, ಪಿಡಿಒ ಕೃಷ್ಣ ಕುಮಾರ್, ತಾಪಂ ಕಾರ್ಯನಿರ್ವಹಣಾಧಿಕಾರಿ ಲೋಕೇಶ್, ಕಾರ್ಪೊರೇಟರ್ ಹೇಮಲತಾ ಆರ್. ಸಾಲ್ಯಾನ್, ಗುರುಪುರ-ಕೈಕಂಬ ನಾಡಕಚೇರಿ ಉಪ-ತಹಶೀಲ್ದಾರ್ ಶಿವಪ್ರಸಾದ್, ಭೂನ್ಯಾಯ ಮಂಡಳಿ ಸದಸ್ಯ ಸಂದೀಪ್ ಪಚ್ಚನಾಡಿ, ಬಗೇರ್ ಹುಕುಂ ಸಮಿತಿ ಸದಸ್ಯೆ ಪವಿತ್ರಾ ನೀರುಮಾರ್ಗ ಉಪಸ್ಥಿತರಿದ್ದರು. ಬಿಜೆಪಿ ಪ್ರಮುಖ ಗೋಕುಲ್‌ದಾಸ್ ಸ್ವಾಗತಿಸಿ ನಿರೂಪಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter