ಸರಪಾಡಿ: ಸರ್ಕಾರಿ ಪ್ರೌಢಶಾಲೆ ದತ್ತು ಸ್ವೀಕಾರ, ಉನ್ನತೀಕರಿಸಲು ಚಿಂತನೆ
ಬಂಟ್ವಾಳ: ತಾಲ್ಲೂಕಿನ ಸರಪಾಡಿ ಸರ್ಕಾರಿ ಪ್ರೌಢಶಾಲೆಯನ್ನು ಮನ್ ದೇವ್ ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸೋಮವಾರ ದತ್ತು ಸ್ವೀಕರಿಸಲಾಯಿತು.
ಇಲ್ಲಿನ ಗ್ರಾಮೀಣ ಪ್ರದೇಶದಲ್ಲಿರುವ ಸರಪಾಡಿ ಸರ್ಕಾರಿ ಪ್ರೌಢಶಾಲೆಯನ್ನು ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ ಅವರ ಕನಸಿನಂತೆ ಮಂಗಳೂರು ಮನ್ ದೇವ್ ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ದತ್ತು ಸ್ವೀಕರಿಸಿ ಉನ್ನತೀಕರಣಗೊಳಿಸಲು ಚಿಂತನೆ ನಡೆಸಲಾಗಿದೆ ಎಂದು ಟ್ರಸ್ಟಿನ ಕಾರ್ಯದರ್ಶಿ ಸಬಿತಾ ಲವಿನಾ ಪಿಂಟೋ ಹೇಳಿದ್ದಾರೆ.
ಇಲ್ಲಿನ ಸರಪಾಡಿ ಸರ್ಕಾರಿ ಪ್ರೌಢಶಾಲೆಯನ್ನು ಸೋಮವಾರ ದತ್ತು ಸ್ವೀಕರಿಸಿ ಅವರು ಮಾತನಾಡಿದರು. ಈಗಾಗಲೇ ಸಿದ್ಧಕಟ್ಟೆ ಮತ್ತು ಕೊಯಿಲ ಸರ್ಕಾರಿ ಪ್ರೌಢಶಾಲೆ ದತ್ತು ಸ್ವೀಕರಿಸಲಾಗಿದೆ ಎಂದು ಅವರು ತಿಳಿಸಿದರು.
ಸಂಚಾಲಕ ವಿಜಯ ಕುಮಾರ್ ಚೌಟ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪುರುಷೋತ್ತಮ ಬಿ., ಮಾಜಿ ಕಾರ್ಯಾಧ್ಯಕ್ಷ ಗಿರಿಧರ ನಾಯ್ಕ್, ಪ್ರಮುಖರಾದ ಕುಸುಮಾಧರ ಶೆಟ್ಟಿ, ಉಮೇಶ ಆಳ್ವ, ಗೋಪಾಲ ಪೂಜಾರಿ, ಸಂಜೀವ ಪೂಜಾರಿ ಮತ್ತಿತರರು ಇದ್ದರು.
ಮುಖ್ಯಶಿಕ್ಷಕ ಆದಂ ಸ್ವಾಗತಿಸಿ, ಶಿಕ್ಷಕಿ ಅಶ್ವಿತಾ ವಂದಿಸಿದರು.