ರಂಗಭೂಮಿಗೆ ಹಲವು ಸವಾಲು: ವಿಚಾರಗೋಷ್ಠಿಯಲ್ಲಿ ತಜ್ಞರ ಅಭಿಮತ
ಬಂಟ್ವಾಳ: ಹವ್ಯಾಸಿ ಇರಲಿ, ವೃತ್ತಿರಂಗಭೂಮಿ ಇರಲಿ ಅದೊಂದು ಚಳವಳಿಯಾಗಿದ್ದು, ಹಲವು ಸವಾಲುಗಳನ್ನು ಎದುರಿಸುತ್ತಿದೆ ಎಂದು ಹಿರಿಯ ರಂಗಕರ್ಮಿ ಮಹಾಬಲೇಶ್ವರ ಹೆಬ್ಬಾರ ಹೇಳಿದರು.
ಅಮ್ಮುಂಜೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಅಮ್ಮುಂಜೆಗುತ್ತು ಪಠೇಲ್ ಶಂಕರ ಶೆಟ್ಟಿ ವೇದಿಕೆಯಲ್ಲಿ ಭಾನುವಾರ ತಾಲೂಕು 22ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ರಂಗಭೂಮಿ ಪ್ರಾದೇಶಿಕ ದೃಷ್ಟಿಕೋನ ಅಂದು ಇಂದು ವಿಚಾರಗೋಷ್ಠಿಯಲ್ಲಿ ಸಮನ್ವಯಕಾರರಾಗಿ ಮಾತನಾಡಿದರು.
ರಂಗಭೂಮಿ ಬೆಳೆದು ಬಂದ ಹಾದಿಯನ್ನು ವಿವರಿಸಿದ ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹವ್ಯಾಸಿ ಮತ್ತು ವೃತ್ತಿರಂಗಭೂಮಿಯ ಕೊಡುಗೆ ಸ್ಮರಿಸಿದರು.
ಈ ಸಂದರ್ಭ ವಿಚಾರ ಮಂಡಿಸಿದ ಹಿರಿಯ ರಂಗಕರ್ಮಿ ಮಂಜು ವಿಟ್ಲ, ನಾನೆಲ್ಲ ಮಾಡಬಲ್ಲೆ ಎಂಬ ದುರಹಂಕಾರ ಕಲಾವಿದರಿಗೂ ಬೇಡ ಎಂಬ ಸಲಹೆ ನೀಡಿದರು.
ದಕ್ಷಿಣ ಕನ್ನಡದಲ್ಲಿ ರಂಗಭೂಮಿಯ ಹಿನ್ನೆಲೆ ಚೆನ್ನಾಗಿದೆ. ಯಾವುದೇ ವೈಜ್ಞಾನಿಕ ವಿಚಾರವಿಲ್ಲದೆ ದೃಶ್ಯ ಸಂಯೋಜನೆ ಮಾಡಿದವರಿದ್ದರು ಎಂದವರು ಹೇಳಿದರು.
ಪ್ರಾದೇಶಿಕ ರಂಗಭೂಮಿ ಕುರಿತು ಮಾತನಾಡಿದ ಪತ್ರಕರ್ತ, ರಂಗಕರ್ಮಿ ಗೋಪಾಲ ಅಂಚನ್, ಹಿಂದೆ ತುಳು ರಂಗಭೂಮಿ ಹಾಸ್ಯಪ್ರಧಾನವಾಗಿರದೆ, ಸಂದೇಶ ನೀಡುವ ಕೆಲಸವಾಗಿತ್ತು. ಈಗ ಮತ್ತೆ ಅದೇ ಪರಂಪರೆಗೆ ಬರಬೇಕು ಎಂದು ಅಭಿಪ್ರಾಯಪಟ್ಟರು. ನಗರದ ಅನುಕರಣೆ ಮಾಡಲು ಹೊರಟು ಕಮರ್ಷಿಯಲ್ ಆಗುತ್ತಿರುವ ಗ್ರಾಮೀಣ ರಂಗಭೂಮಿಗಳು ನಶಿಸಿ ಹೋಗುತ್ತಿವೆ ಎಂದರು.
ರಂಗಕರ್ಮಿ, ಪತ್ರಕರ್ತ ಮೌನೇಶ ವಿಶ್ವಕರ್ಮ ವಿಚಾರ ಮಂಡಿಸಿ, ಬೀದಿನಾಟಕಗಳು ಎಂ.ಎಸ್.ಡಬ್ಲ್ಯೂ ವಿಭಾಗಕ್ಕೆ ಮಾತ್ರ ಸೀಮಿತ ಆಗಿದೆಯೇ ಹೊರತು, ಚಳವಳಿ ರೂಪದಲ್ಲಿ ಇಲ್ಲ. ಯಕ್ಷಗಾನದಲ್ಲಿ ಕಾಲಮಿತಿ ಇದ್ದಂತೆ, ಇನ್ಸ್ ಟೆಂಟ್ ನಾಟಕಗಳ ಬೇಡಿಕೆ ಇದೆ. ಬಂಟ್ವಾಳ ತಾಲೂಕಿನಲ್ಲಿ ರಂಗಭೂಮಿಗೆ ರಂಗಮಂದಿರವೇ ಇಲ್ಲ. ಈ ವರ್ಷ ಪ್ರತಿಭಾ ಕಾರಂಜಿಯಲ್ಲಿ ನಾಟಕಕ್ಕೆ ಕಲ್ಲು ಹಾಕಿದ್ದಾರೆ, ಸ್ಟ್ಯಾಂಡಪ್ ಕಾಮಿಡಿಗೆ ಪ್ರಾಶಸ್ತ್ಯ ನೀಡಲಾಗುತ್ತಿದೆ ಎಂದರು.
ಸಮ್ಮೇಳನಾಧ್ಯಕ್ಷ ಪ್ರೊ.ಬಾಲಕೃಷ್ಣ ಗಟ್ಟಿ ಉಪಸ್ಥಿತರಿದ್ದರು. ಸುದೇಶ್ ರೈ, ಚರಣ್ ಮಂಗಾಜೆ ಉಪಸ್ಥಿತರಿದ್ದರು. ದಿನೇಶ್ ವರಕೋಡಿ ಸ್ವಾಗತಿಸಿದರು. ಸೊನಿತಾ ನೇರಳಕಟ್ಟೆ ವಂದಿಸಿದರು. ಜನಾರ್ದನ ಕಾರ್ಯಕ್ರಮ ನಿರ್ವಹಿಸಿದರು.