ಸಾಹಿತ್ಯ ಸಮೇಳನದಿಂದ ಕನ್ನಡ ಭಾಷೆಗೆ ಹೊಸ ಚೈತನ್ಯ :ಶಾಸಕ ನಾಯ್ಕ್
ಕೈಕಂಬ: ಸಾಹಿತ್ಯ ಸಮೇಳನದಿಂದ ಕನ್ನಡ ಭಾಷೆಗೆ ಹೊಸ ಚೈತನ್ಯ ಸಿಕ್ಕಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿದರು. ಅಮ್ಮುಂಜೆಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ಎರಡು ದಿನಗಳ ನಡೆಯುವ ಸಾಹಿತ್ಯದಲ್ಲಿ ನಾವೀನ್ಯ ಎಂಬ ಆಶಯದೊಂದಿಗೆ ಬಂಟ್ವಾಳ ತಾಲೂಕು 22ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಶನಿವಾರ ಸಂಜೆ ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರಾಜ್ಯೋತ್ಸವದ ಅಂಗವಾಗಿ ಕೋಟಿ ಕಂಠ ಗಾಯನ ಆಯೋಜಿಸುವ ಮೂಲಕ ಕನ್ನಡ ನಾಡು ನುಡಿಗೆ ಹೊಸ ಚೈತನ್ಯವನ್ನು ನೀಡಿದೆ ಎಂದ ಅವರು ಗ್ರಾಮೀಣ ಭಾಗದಲ್ಲಿ ಸಾಹಿತ್ಯ ಸಮ್ಮೇಳನದಂತ ಕಾರ್ಯಕ್ರಮವನ್ನು ಅಚ್ಚುಕಟ್ಟತನದಿಂದ ಸಂಘಟಿಸಿರುವುದು ಅಭಿನಂದನೀಯವಾಗಿದೆ ಎಂದರು.

ಹಿರಿಯ ಪತ್ರಕರ್ತ ಪ್ರೊ.ಕೆ. ಬಾಲಕೃಷ್ಣ ಗಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಸಂಧ್ಯಾ ಶೆಣೈ ದಿಕ್ಸೂಚಿ ಭಾಷಣಗೈದು ಶ್ರೇಷ್ಠ ಸಾಹಿತಿಯಾಗುವ ಮೊದಲ ಶ್ರೇಷ್ಠ ಮಾನವರಾಗಬೇಕು, ಭಾಷೆಯನ್ನು ಬಳಸಿದಷ್ಟು ಅದರ ಪ್ರಾಬಲ್ಯ ಹೆಚ್ಚಾಗುವುದು ಎಂದು ಹೇಳಿದರು.
ಬಂಟ್ವಾಳ ತಾಪಂ ಇಒ ರಾಜಣ್ಣ,ಬಂಟ್ವಾಳ ಶಿಕ್ಷಣ ಸಂಯೋಜಕಿ ಸುಜಾತ, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ. ಎಂ.ಸುರೇಶ ನೆಗಳಗುಳಿ, ಪೊಳಲಿ ಶ್ರೀ ರಾಜರಾಜೇಶ್ವರಿ ದೇವಳ ಆಡಳಿತ ಮೊಕ್ತೇಸರ ಡಾ. ಎ.ಮಂಜಯ್ಯ ಶೆಟ್ಟಿ, ವಿಶ್ರಾಂತ ಪ್ರಾಂಶುಪಾಲ ಗುಂಡಿಲಗುತ್ತು ಶಂಕರ ಶೆಟ್ಟಿ, ತಾಲೂಕು ಬಿಲ್ಲವ ಸಮಾಜ ಸೇವಾ ಸಮಿತಿ ಅಧ್ಯಕ್ಷ ಕೆ.ಸೇಸಪ್ಪ ಕೋಟ್ಯಾನ್ ಪಚ್ಚಿನಡ್ಕ, ಅಮ್ಮುಂಜೆಗುತ್ತು ಜೀವರಾಜ ಶೆಟ್ಟಿ, ದೇವದಾಸ ಹೆಗ್ಡೆ ಅಮ್ಮುಂಜೆಗುತ್ತು ಅವರು ಅತಿಥಿಗಳಾಗಿ ಭಾಗವಹಿಸಿದ್ದರು. ಅಮ್ಮುಂಜೆ ಗ್ರಾಪಂ ಅಧ್ಯಕ್ಷರಾದ ವಾಮನ ಆಚಾರ್ಯ, ಕರಿಯಂಗಳ ಗ್ರಾಪಂ ಅಧ್ಯಕ್ಷ ಚಂದ್ರಹಾಸ ಪಲ್ಲಿಪ್ಪಾಡಿ, ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಉಮೇಶ್ ಸಾಲಿಯಾನ್ ಬೆಂಜನಪದವು,ಪ್ರ.ಕಾರ್ಯದರ್ಶಿ ಬಿ.ಜನಾರ್ಧನ ಅಮ್ಮುಂಜೆ,ಮಂಗಳೂರು ಕಸಾಪ ಅಧ್ಯಕ್ಷ ಮಂಜುನಾಥ ರೇವಣ್ಕರ್ ಮಾಜಿ ತಾ.ಪಂ.ಸದಸ್ಯ ದೇವಪ್ಪ ಪೂಜಾರಿ , ಗೌರವ ಕೋಶಾಧ್ಯಕ್ಷ ಡಿ.ಬಿ.ಅಬ್ದುಲ್ ರಹಿಮಾನ್ ,ಪಿಡಿಒಗಳಾದ ನಯನ ,ಮಲ್ಲಿಕಾ ಮೊದಲಾದವರು ವೇದಿಕೆಯಲ್ಲಿದ್ದರು. ಇದೇ ವೇಳೆ ಪತ್ರಕರ್ತ ಗೋಪಾಲ ಅಂಚನ್ ಅವರ “ದೊಡ್ಡವರೆಲ್ಲ ಜಾಣರಲ್ಲ,ಮಕ್ಕಳೆಲ್ಲ ದಡ್ಡರಲ್ಲ” ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.
ಕಸಾಪ ಜಿಲ್ಲಾಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ಆಶಯ ನುಡಿಗಳನ್ನಾಡಿದರು. ತಾಲೂಕು ಕಸಾಪ ಅಧ್ಯಕ್ಷ ವಿಶ್ವನಾಥ ಬಂಟ್ವಾಳ ಅವರ ಪರವಾಗಿ ಪತ್ನಿ ರೇಖಾ ವಿಶ್ವನಾಥ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮ್ಮೇಳನಾಧ್ಯಕ್ಷರ ಪರಿಚಯವನ್ನು ಪತ್ರಕರ್ತ ಇಬ್ರಾಹಿಂ ಅಡ್ಕಸ್ಥಳ ಮಾಡಿದರೆ, ಸ್ವಾಗತ ಸಮಿತಿ ಪ್ರಧಾನ ಸಂಚಾಲಕ ಅಬುಬಕರ್ ಅಮ್ಮುಂಜೆ ಅತಿಥಿಗಳನ್ನು ಪರಿಚಯಿಸಿದರು. ಅಮ್ಮುಂಜೆಯ ಇತಿಹಾಸವನ್ನು ಜನಾರ್ದನ ಅಮ್ಮುಂಜೆ ಪರಿಚಯಿಸಿದರು. ಸುಬ್ಬರಾವ್ ಪೊಳಲಿ ಮತ್ತವರ ತಂಡ ನಾಡಗೀತೆ,ರೈತಗೀತೆ ಹಾಡಿದರು.
ನಿವೃತ್ತ ಮುಖ್ಯೋಪಾಧ್ಯಾಯರಾದ ಬಿ. ಸಂಕಪ್ಪ ಶೆಟ್ಟಿ ಸ್ವಾಗತಿಸಿದರು.ತಾಲೂಕು ಕಸಾಪ ಗೌರವ ಕಾರ್ಯದರ್ಶಿ ವಿ.ಸುಬ್ರಹ್ಮಣ್ಯ ಭಟ್ ವಂದಿಸಿದರು. ಕಸಾಪಗೌರವ ಕಾರ್ಯದರ್ಶಿ ರಮಾನಂದ ನೂಜಿಪ್ಪಾಡಿ,ನ್ಯಾಯವಾದಿ ರವೀಂದ್ರ ಕುಕ್ಕಾಜೆ ಕಾರ್ಯ ಕ್ರಮ ನಿರೂಪಿಸಿದರು.
ಧ್ವಜಾರೋಹಣ:
ಎರಡು ದಿನಗಳ ಬಂಟ್ವಾಳ ತಾಲೂಕು ೨೨ ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬೆಳಿಗ್ಗೆ ಕರುಣಾಕರ ಆಳ್ವ ಅಮುಂಜೆಗುತ್ತು ರಾಷ್ಟ್ರಧ್ವಜಾರೋಹಣ ನಡರವೇರಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ ಎಂ ಪಿ. ಶ್ರೀನಾಥ್ ಪರಿಷತ್ತಿನ ಧ್ವಜಾರೋಹಣ ನೆರವೇರಿಸಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ವಿಶ್ವನಾಥ ಬಂಟ್ವಾಳ ಕನ್ನಡ ಧ್ವಜಾರೋಹಣ ಮಾಡಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಸುಗುಣಾ ಸಂಕಪ್ಪ ಶೆಟ್ಟಿ ಸಹಿತ ಕಸಾಪ,ಸ್ವಾಗತಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸ್ಥಳೀಯ ಶಾಲಾಮಕ್ಕಳು ರಾಷ್ಟ್ರಗೀತೆ ಹಾಡಿದರು. ಮುದಸಿರ್ ಕಣಿಯೂರು ಮತ್ತು ಬಾಲಕೃಷ್ಣ ಕಾರ್ಯಕ್ರಮ ನಿರೂಪಿಸಿದರು.
ಆಕರ್ಷಕ ಮೆರವಣಿಗೆ:
ಸಮ್ಮೇಳನದ ಉದ್ಘಾಟನಾ ಸಮಾರಂಭಕ್ಕು ಮುನ್ನ ಬಡಕಬೈಲು ಪರಮೇಶ್ವರ ರಾವ್ ಮಹಾದ್ವಾರದಿಂದ ಸಮ್ಮೇಳನಾಧ್ಯಕ್ಷರು ಹಾಗು ಅತಿಥಿಗಳನ್ನು ತೆರೆದ ವಾಹನದಲ್ಲಿ ಸಮ್ಮೇಳನ ನಡೆಯುವ ವೀರಯೋಧ ಯಾದವ ಪೂಜಾರಿ ಸಭಾಂಗಣ, ಪೊಳಲಿ ಶೀನಪ್ಪ ಹೆಗ್ಡೆ ಪ್ರಾಂಗಣ ಹಾಗೂ ಅಮ್ಮುಂಜೆಗುತ್ತು ಸಿದ್ಧಣ್ಣ ಶೆಟ್ಟಿ ಮುಖ್ಯದ್ವಾರದವರೆಗೆ ಕನ್ನಡ ಭುವನೇಶ್ವರಿಯ ಆಕರ್ಷಕವಾದ ಮೆರವಣಿಗೆಯಲ್ಲಿ ಕರೆತರಲಾಯಿತು. ಹುಲಿ,ಶಾರ್ದುಲ,ಗೊಂಬೆ ಕುಣಿತ,ಡೊಳ್ಳು ಕುಣಿತ,ಚೆಂಡೆ,ವಿವಿಧ ವಾದ್ಯಗೋಷ್ಠಿ ಮೆರವಣಿಗೆಗೆ ವಿಶೇಷ ಮೆರಗು ನೀಡಿತು.
ಬಡಗಬೆಳ್ಳೂರು ಗ್ರಾಪಂ ಅಧ್ಯಕ್ಷ ಪ್ರಕಾಶ್ ಆಳ್ವ ಪುಷ್ಪಾರ್ಚನೆಗೈದು ಮೆರವಣಿಗೆಗೆ ಚಾಲನೆ ನೀಡಿದರು. ಕಸಾಪ ಮಾರ್ಗದರ್ಶಕ ಸರಪಾಡಿ ಅಶೋಕ ಶೆಟ್ಟಿ ,ಪೊಳಲಿ ರಾಮಕೃಷ್ಣ ತಪೋವನದ ಶ್ರೀ ವಿವೇಕ ಚೈತನ್ಯಾನಂದ ಸ್ವಾಮೀಜಿ, ಅಮ್ಮುಂಜೆ ಸೈಂಟ್ ಮೈಕಲ್ ಚರ್ಚ್ ತೆಂಕಬೆಳ್ಳೂರಿನ ಧರ್ಮಗುರು ವಂ.ಪ್ಯಾಟ್ರಿಕ್ ಸಿಕ್ವೇರ, ಬಡಕಬೈಲು ಬದ್ರಿಯಾ ಜುಮ್ಮಾ ಮಸೀದಿ ಖತೀಬರಾದ ಬಹು.ಕೆ.ಇಲ್ಯಾಸ್ ಸಾದಿ, ಗಣ್ಯರಾದ ಸಂಕಪ್ಪ ಶೇಖ ಮುಳಿಯಗುತ್ತು ಮತ್ತು ಬಟ್ಲಬೆಟ್ಟು ಬಿ.ಮುಹಮ್ಮದ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
ಬಳಿಕ ಅಮ್ಮುಂಜೆ ವಿನಾಯಕ ಜನಾರ್ದನ ಸದಾಶಿವ ದೇವಸ್ಥಾನದ ಆಡಳಿತ ಮೊಕ್ತೇಸರ ಡಿ.ಎ.ನಾಗೇಶ ರಾವ್ ವಸ್ತುಪ್ರದರ್ಶನ ಮಳಿಗೆ ಹಾಗೂ ಸಾಹಿತಿ ರಮೇಶ್ ಅಮ್ಮುಂಜೆ ಪುಸ್ತಕಗಳ ಮಳಿಗೆ ಉದ್ಘಾಟಿಸಿದರು.
ಅಭಿನಂದನೆ :
ಇದೇವೇಳೆ ದ.ಕ.ಜಿಲ್ಲಾ ಕನ್ನಡ ರಾಜ್ಯೋತ್ಸವ ಪುರಸ್ಕೃತರಾದ ಸೇಸಪ್ಪ ಕೋಟ್ಯಾನ್, ಜಯರಾಮ ಆಚಾರ್ಯ, ವೆಂಕಟೇಶ್ ಬಂಟ್ವಾಳ,ವೆಂಕಪ್ಪ ನಲಿಕೆ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಉದ್ಘಾಟನಾ ಸಮಾರಂಭದ ಬಳಿಕ ಪತ್ರಕರ್ತ, ಕವಿ ಗಣೇಶ ಪ್ರಸಾದ ಪಾಂಡೇಲು ಅಧ್ಯಕ್ಷತೆಯಲ್ಲಿ ಬಹುಭಾಷಾ ಕವಿಗೋಷ್ಠಿ ನಡೆಯಿತು, ಕನ್ನಡ, ಬ್ಯಾರಿ, ತುಳು, ಹವ್ಯಕ, ಕೊಂಕಣಿ ಭಾಷೆಯಲ್ಲಿ ಕವಿಗಳು ಕವನವಾಚನ ಮಾಡಿದರು. ಬಳಿಕ ಕೆನರಾ ಇಂಜಿನಿಯರಿಂಗ್ ಕಾಲೇಜು ಮತ್ತು ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈವಿಧ್ಯ ನಡೆಯಿತು.
ಪತ್ರಿಕೆಗಳು ಓದುಗರ ಸಾಹಿತ್ಯಾಸಕ್ತಿಯನ್ನು ವೃದ್ಧಿಸುತ್ತದೆ: ಬಾಲಕೃಷ್ಣ ಗಟ್ಟಿ
ಬಂಟ್ವಾಳ:ಮುದ್ರಣ ಮಾಧ್ಯಮಗಳು ತನ್ನ ಓದುಗರನ್ನು ಹಿಡಿದಿಟ್ಟುಕೊಂಡು ಇಡೀ ಸಾಹಿತ್ಯ ಲೋಕವನ್ನೇ ರಕ್ಷಿಸಿದಲ್ಲದೆ ಪತ್ರಿಕೆಗಳು ಓದುಗರಲ್ಲಿ ಸಾಹಿತ್ಯಾಸಕ್ತಿಯನ್ನು ಜೀವಂತವಾಗಿರಿಸಿ ಕೊಳ್ಳುವುದರೊಂದಿಗೆ ಸಾಹಿತ್ಯ ಕ್ಷೇತ್ರಕ್ಕೂ ಜೀವ ತುಂಬಿದೆ ಎಂದು ವಿಶ್ರಾಂತ ಪ್ರಾಂಶುಪಾಲರು, ಹಿರಿಯ ಪತ್ರಕರ್ತ ಪ್ರೊ.ಕೆ. ಬಾಲಕೃಷ್ಣ ಗಟ್ಟಿ ಹೇಳಿದ್ದಾರೆ.
ಶನಿವಾರ ಸಂಜೆ ಬಂಟ್ವಾಳ ತಾಲೂಕಿನ ಅಮ್ಮುಂಜೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎರಡು ದಿನಗಳ ನಡೆಯಲಿರುವ ಬಂಟ್ವಾಳ ತಾಲೂಕು 22 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪತ್ರಿಕೆಗಳು ಓದುಗರ ಸಾಹಿತ್ಯಾಸಕ್ತಿಯನ್ನು ವೃದ್ಧಿಸುವುದು ಮಾತ್ರವಲ್ಲ ಹೆಚ್ಚು, ಹೆಚ್ಚು ಓದುಗರನ್ನು ಕೂಡ ತನ್ನಡೆಗೆ ಸೆಳೆಯುತ್ತದೆ ಎಂದರು.
ಪತ್ರಿಕೆಗಳಿಗೆ ಲೇಖನ ಬರೆಯುವಂತೆ ಪ್ರೋತ್ಸಾಹಿಸಿದಾಗ ನಮ್ಮ ಸಾಹಿತ್ಯಾಸಕ್ತಿಯನ್ನು ಹೆಚ್ಚಿಸಿ ಉತ್ತಮ ಲೇಖಕ,ಸಾಹಿತಿಗಳಾಗಬಹುದು ಎಂದು ಹೇಳಿದ ಅವರು ಓದುಗರನ್ನು ಆಕರ್ಷಿಸಲು ಅವರ ಅಭಿರುಚಿಗೆ ತಕ್ಕಂತೆ ಹೆಚ್ಚೆಚ್ಚು ಬರಹಗಳನ್ನು ಪತ್ರಿಕೆಗಳು ಪ್ರಕಟಿಸಬೇಕು. ವಿಡಂಬನೆ-ನಗೆಹನಿ,ಚುಟುಕುಗಳಿಗೆ ಹೆಚ್ಚು ಒತ್ತು ನೀಡಬೇಕು ಎಂದು ಹೇಳಿದರು.
ಮಕ್ಕಳಿಗೆ ಓದುವ ಹವ್ಯಾಸ ಬೆಳೆಸುವುದರ ಜತೆಗೆ ಹೆಚ್ಚು ಹೆಚ್ಚು ಭಾಷೆಯನ್ನು ಕಲಿಯಲು ಪ್ರೋತ್ಸಾಹಿಸಬೇಕು ಸಂಗೀತ, ನೃತ್ಯ, ಚಿತ್ರಕಲೆ, ಮೊದಲಾದ ಹವ್ಯಾಸಗಳನ್ನು ಬೆಳೆಸಿಕೊಳ್ಳಲು ಪೋಷಕರು ಮತ್ತು ಶಿಕ್ಷಕರು ಪ್ರೋತ್ಸಾಹಿಸಬೇಕು ಎಂದರು.
ದೇಶಕ್ಕೆ ಮಾದರಿ:
ಸಾಹಿತ್ಯ ಕ್ಷೇತ್ರದ ಒಂದು ಪ್ರಮುಖ ಆಯಾಮ ಜನಪದ ಸಾಹಿತ್ಯ. ಇದು ಕೃಷಿಯ ಕೊಡುಗೆ ಎಂದರೂ ತಪ್ಪಾಗಲಾರದು.ಕೃಷಿ ಕ್ಷೇತ್ರದಲ್ಲಿ ಸಾಮಾನ್ಯ ರೈತ ಅಮೈ ಮಹಾಲಿಂಗ ನಾಯ್ಕ್ ಅವರು ಬೆಟ್ಟ ಅಗೆದು ಸುರಂಗ ತೋಡಿ ತೋಟಕ್ಕೆ ನೀರು ಹಾಯಿಸಿ ಕೃಷಿಯಲ್ಲಿ ಅದ್ಭುತ ಸಾಧನೆ ಮಾಡುವ ಮೂಲಕ ದೇಶಕ್ಕೇ ಮಾದರಿಯಾಗಿದ್ದಾರೆ.ಕೇಂದ್ರ ಸರಕಾರವು ಇವರ ಸಾಧನೆ ಗುರುತಿಸಿ ದೇಶದ ಪ್ರತಿಷ್ಟಿತ ’ಪದ್ಮಶ್ರೀ ಪ್ರಶಸ್ತಿ’ ನೀಡಿರುವುದು ಅವರಿಗೆ ಮಾತ್ರವಲ್ಲ ಬಂಟ್ವಾಳ ತಾಲೂಕಿಗೆ ಅತ್ಯಂತ ಹೆಮ್ಮೆಯ ವಿಷಯ ಎಂದು ಸಂತಸ ಪಟ್ಟರು.
ಕೃಷಿ ಕೇವಲ ಒಂದು ವೃತ್ತಿಯಲ್ಲ ಅದೊಂದು ಸಂಸ್ಕ್ರತಿಯಾಗಿದೆ.ತಾಲೂಕಿನಲ್ಲಿಯು ಪ್ರಗತಿಪರ ಕೃಷಿಕರಾದ ಶಾಸಕ ರಾಜೇಶ್ ನಾಯ್ಕ್ ಅವರ ನೇತೃತ್ವದಲ್ಲಿ ಪಾಡು ಬಿದ್ದ ಗದ್ದೆಯಲ್ಲಿ ಕೃಷಿ ಅಂದೋಲನ ನಡೆಸುತ್ತಿರುವುದು ಶ್ಲಾಘನೀಯವಾಗಿದೆ ಎಂದರು .