ಬಂಟ್ವಾಳ: ಎಲ್ಲೈಸಿ ಪ್ರತಿನಿಧಿಗಳ ೨೩ನೇ ವಾರ್ಷಿಕೋತ್ಸವ ‘ದೇಶದ ಪ್ರಗತಿಗೆ ಎಲ್ಲೈಸಿ ಕೊಡುಗೆ ಅನನ್ಯ’
ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡಿನಲ್ಲಿ ಶುಕ್ರವಾರ ನಡೆದ ಭಾರತೀಯ ಜೀವ ವಿಮಾ ನಿಗಮ ಶಾಖೆಯ ಅಭಿವೃದ್ಧಿ ಅಧಿಕಾರಿ ಮಧ್ವರಾಜ್ ಕಲ್ಮಾಡಿ ನೇತೃತ್ವದ ಪ್ರತಿನಿಧಿಗಳ ತಂಡದ ೨೩ನೇ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಉಡುಪಿ ಹಿರಿಯ ವಿಭಾಗೀಯ ಮೆನೇಜರ್ ರಾಜೇಶ ಮುಧೋಳ್ ಚಾಲನೆ ನೀಡಿದರು. ಮುಖ್ಯ ಶಾಖಾಧಿಕಾರಿ ನಾರಾಯಣ ಗೌಡ ಮತ್ತಿತರರು ಇದ್ದಾರೆ.
ಕಳೆದ ೬೬ ವರ್ಷಗಳಲ್ಲಿ ದೇಶದ ಅತಿ ದೊಡ್ಡ ಆರ್ಥಿಕ ಸಂಸ್ಥೆಯಾಗಿ ರೂಪುಗೊಂಡಿರುವ ಭಾರತೀಯ ಜೀವ ವಿಮಾ ನಿಗಮವು ಜನರಲ್ಲಿ ಉಳಿತಾಯ ಮನೋಭಾವ ಮೂಡಿಸಿ ಅವರ ಬದುಕಿಗೆ ರಕ್ಷಣೆ ಒದಗಿಸುವುದರ ಜೊತೆಗೆ ವಿವಿಧ ಮೂಲಭೂತ ಸೌಕರ್ಯಗಳಿಗೆ ನೆರವು ನೀಡುವ ಮೂಲಕ ದೇಶದ ಪ್ರಗತಿಗೆ ಅನನ್ಯ ಕೊಡುಗೆ ನೀಡುತ್ತಿದೆ ಎಂದು ಎಲ್ಲೈಸಿ ಉಡುಪಿ ಹಿರಿಯ ವಿಭಾಗೀಯ ಮೆನೇಜರ್ ರಾಜೇಶ ಮುಧೋಳ್ ಹೇಳಿದ್ದಾರೆ.
ಇಲ್ಲಿನ ಬಿ.ಸಿ.ರೋಡು ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ ಶುಕ್ರವಾರ ನಡೆದ ಭಾರತೀಯ ಜೀವ ವಿಮಾ ನಿಗಮ ಶಾಖೆಯ ಅಭಿವೃದ್ಧಿ ಅಧಿಕಾರಿ ಮಧ್ವರಾಜ್ ಕಲ್ಮಾಡಿ ನೇತೃತ್ವದ ಪ್ರತಿನಿಧಿಗಳ ತಂಡದ ೨೩ನೇ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬಂಟ್ವಾಳ ಮುಖ್ಯ ಶಾಖಾಧಿಕಾರಿ ನಾರಾಯಣ ಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಡುಪಿ ವಿಭಾಗೀಯ ವ್ಯವಸ್ಥಾಪಕಿ ಶಶಿಕಲಾ ಕೋಟ್ಯಾನ್, ಬಂಟ್ವಾಳ ಸಹಾಯಕ ಶಾಖಾಧಿಕಾರಿ ಕೃಪಾಲ್ ಎಚ್. ಶುಭ ಹಾರೈಸಿದರು. ತಂಡದ ಸಂಚಾಲಕ ಗುಣಪಾಲ್ ಪರಾಡ್ಕರ್ ಮತ್ತಿತರರು ಇದ್ದರು.
ಇದೇ ವೇಳೆ ವಿಮಾ ಕ್ಷೇತ್ರದ ಸಾಧಕರು ಮತ್ತು ಹಿರಿಯ ಪ್ರತಿನಿಧಿಗಳಿಗೆ ಸನ್ಮಾನ, ರಸಪ್ರಶ್ನೆ ಮತ್ತು ವಿವಿಧ ಸಾಂಸ್ಕೃತಿಕ ಸ್ಪರ್ಧೆ ನಡೆಯಿತು.
ಅಭಿವೃದ್ಧಿ ಅಧಿಕಾರಿ ಮಧ್ವರಾಜ್ ಕಲ್ಮಾಡಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಹಿರಿಯ ಪ್ರತಿನಿಧಿ ಯಶೊಧರ ಗೌಡ ವಂದಿಸಿದರು. ಶಿಕ್ಷಕಿ ಸಬಿತಾ ಲವಿನಾ ಪಿಂಟೋ ಮತ್ತು ಪತ್ರಕರ್ತ ಮೋಹನ್ ಕೆ.ಶ್ರೀಯಾನ್ ರಾಯಿ ಕಾರ್ಯಕ್ರಮ ನಿರೂಪಿಸಿದರು.