ಶ್ರೀ ಶ್ರೀ ವಿಖ್ಯಾತಾನಂದ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಸಮಿತಿ ರಚನಾ ಸಭೆ
ಕೈಕಂಬ: ಕುಪ್ಪೆಪದವು ಶ್ರೀದುರ್ಗೇಶ್ವರಿ ದೇವಿ ದೇವಸ್ಥಾನದ ಜೀರ್ಣೋದ್ದಾರ ಕಾರ್ಯ ನಡೆಯುತ್ತಿದ್ದು, ಮುಂದಿನ ಫೆಬ್ರವರಿ 7ರಿಂದ 13 ರವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವ ಪ್ರಯುಕ್ತ ಸಮಿತಿ ರಚನಾ ಸಭೆಯು ಸೋಲೂರು ಮಠದ ಶ್ರೀ ಶ್ರೀ ವಿಖ್ಯಾತಾನಂದ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ದೇವಸ್ಥಾನದ ಮ್ಯಾನೇಜಿಂಗ್ ಟ್ರಸ್ಟಿ ಪ್ರವೀಣ್ ಕುಮಾರ್ ಜೈನ್ ಅಗರಿ ಅವರ ಅಧ್ಯಕ್ಷತೆಯಲ್ಲಿ ದೇವಸ್ಥಾನದ ವಠಾರದಲ್ಲಿ ಭಾನುವಾರ ನಡೆಯಿತು.
ಜೀರ್ಣೋದ್ದಾರ ಸಮಿತಿಯ ಉಪಾಧ್ಯಕ್ಷ ರಾಮಚಂದ್ರ ಸಾಲ್ಯಾನ್ ತಾಳಿಪಾಡಿ ಪ್ರಾಸ್ತಾವಿಕವಾಗಿ ಮಾತನಾಡಿ 42 ವರ್ಷಗಳ ಹಿಂದೆ ನಿರ್ಮಾಣವಾದ ದೇವಸ್ಥಾನದ ಕುರಿತು ವಿವರಿಸಿದರು.
ಬ್ರಹ್ಮ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರನ್ನಾಗಿ ಜಗದೀಶ್ ಕುಲಾಲ್ ಪಾಕಜೆ, ಪ್ರಧಾನ ಕಾರ್ಯದರ್ಶಿಯಾಗಿ ಮಹಾಬಲ ಸಾಲ್ಯಾನ್ ಕೊಂದರಪ್ಪು, ಕೋಶಾಧಿಕಾರಿಯಾಗಿ ವಿನಯ ಕಾರಂತ ಅವರನ್ನು ಆಯ್ಕೆ ಮಾಡಲಾಯಿತು. ಹಾಗೂ ನಾಲ್ವರು ಉಪಾಧ್ಯಕ್ಷರು, ಹತ್ತು ಗೌರವ ಸಲಹೆಗಾರರು ಹಾಗೂ ನಾಲ್ವರು ಮಹಿಳಾ ಸದಸ್ಯರಿರುವ ಸಮಿತಿಯನ್ನು ರಚಿಸಲಾಯಿತು.
ಬ್ರಹ್ಮ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದ ಜಗದೀಶ್ ಕುಲಾಲ್ ಪಾಕಜೆ ಮಾತನಾಡಿ ಬ್ರಹ್ಮ ಬ್ರಹ್ಮಕಲಶೋತ್ಸವದಂತಹ ಪುಣ್ಯ ಕಾರ್ಯದಲ್ಲಿ ಭಾಗವಹಿಸುವುದು ನಮ್ಮ ಪುಣ್ಯದ ಫಲ ನಮಗೆ ಇದು ಒಂದು ಅಪೂರ್ವ ಅವಕಾಶ, ಕಾರ್ಯಕ್ರಮಕ್ಕೆ ಬರುವ ಭಕ್ತಾದಿಗಳಿಗೆ ಯಾವುದು ಕುಂದು ಉಂಟಾಗದಂತೆ ಕಾರ್ಯಕ್ರಮ ನಡೆಯಲು ಸಹಕಾರ ಕೋರಿದರು.
ಪ್ರಧಾನ ಅರ್ಚಕ ಸದಾಶಿವ ಕಾರಂತ ಅವರು ಎಡಪದವು ವೇದಮೂರ್ತಿ ರಾಧಾಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ನಡೆಯುವ ಬ್ರಹ್ಮ ಬ್ರಹ್ಮಕಲಶೋತ್ಸವದ ಧಾರ್ಮಿಕ ವಿಧಿವಿಧಾನಗಳ ವಿವರ ನೀಡಿದರು.
ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಅಜಿತ್ ಕುಮಾರ್ ಜೈನ್,ವಿನೋದ್ ಕುಮಾರ್ ಅಂಬೆಲೊಟ್ಟು, ಮುತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಪೂಜಾರಿ ಬಳ್ಳಾಜೆ, ವಿನಯ ಕಾರಂತ,ಸತೀಶ್ ಪೂಜಾರಿ ಚಂದ್ರ ಮಜಲು ಮತ್ತು ಭೋಜರಾಜ್ ಜೈನ್ ಸಭೆಯಲ್ಲಿ ಮಾತನಾಡಿದರು.
ಸಂಜೀವ ಶೆಟ್ಟಿ,ವಿಕ್ರಮ್ ಭಟ್, ರಾಮಣ್ಣ ನಾಯ್ಕ್ ಕಿಲೆಂಜಾರು, ಅಜಯ್ ಅಮೀನ್ ನಾಗಂದಡಿ ದುರ್ಗೆಶ್ವರಿ ಸೇವಾ ಸಮಿತಿಯ ಕಾರ್ಯದರ್ಶಿ ಶಿವರಾಮ ಕಾರಂತ ಉಪಸ್ಥಿತರಿದ್ದರು.
ಸ್ಥಳೀಯ ಪ್ರಮುಖರು ಹಾಗೂ ಕಿಲೆಂಜಾರು, ಕುಲವೂರು ಮತ್ತು ಮುತ್ತೂರು ಗ್ರಾಮದ ಭಕ್ತಾದಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಉದಯಕುಮಾರ್ ನಿರೂಪಿಸಿ ವಂದಿಸಿದರು.