ಗುರುಪುರ ಪಂಚಾಯತ್‌ನಲ್ಲಿ ಕಾನೂನು ಮಾಹಿತಿ ಅಭಿಯಾನ
ಕೈಕಂಬ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ, ಜಿಲ್ಲಾಡಳಿತ, ವಿವಿಧ ಇಲಾಖೆಗಳು ಹಾಗೂ ವಕೀಲರ ಸಂಘ ಮಂಗಳೂರು ಸಹಯೋಗದಲ್ಲಿ ನ.೭ರಂದು ಸೋಮವಾರ ಗುರುಪುರ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಪಂಚಾಯತ್ ಅಧ್ಯಕ್ಷ ಯಶವಂತ ಕುಮಾರ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ‘ಕಾನೂನು ಅರಿವು ಮತ್ತು ಪ್ರಚಾರ ಅಭಿಯಾನದ ಮೂಲಕ ನಾಗರಿಕರ ಸಬಲೀಕರಣ’ ಕಾರ್ಯಕ್ರಮ ನಡೆಯಿತು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವಕೀಲರ ಪ್ಯಾನೆಲ್‌ನ ಸದಸ್ಯರಾದ ಪ್ರತಿಮಾ ಅವರು ಮಾತನಾಡಿ, ವಾರ್ಷಿಕ ಒಂದು ಲಕ್ಷಕ್ಕಿಂತ ಕಡಿಮೆ ಆದಾಯವುಳ್ಳ ಮಂದಿಯ ಕಾನೂನು ರೀತ್ಯಾ ಬಹುತೇಕ ಎಲ್ಲ ಸಮಸ್ಯೆಗಳು ಮತ್ತು ಕಷ್ಟಗಳಿಗೆ ಪ್ರಾಧಿಕಾರ ಉಚಿತ ಕಾನೂನು ಸೇವೆ ನೀಡಲಿದೆ. ಪ್ರಾಧಿಕಾರದಿಂದ ಮಹಿಳೆಯರು, ಮಕ್ಕಳು, ಎಸ್‌ಸಿ/ಎಸ್ಟಿಗಳು…ಹೀಗೆ ಎಲ್ಲ ವರ್ಗದವರು ಜಾತಿ, ಮತ, ಅಂತಸ್ತು ಬೇಧವಿಲ್ಲದೆ ಕಾನೂನಿನ ನೆರವು ಪಡೆದುಕೊಳ್ಳಬಹುದು. ಕೆಲವು ಪ್ರಕರಣಗಳನ್ನು ‘ಲೋಕ ಅದಾಲತ್’ ನಿರ್ವಹಿಸಲಿದೆ. ಲೋಕ್ ಅದಾಲತ್ ನಿರಂತರ ನೂರಾರು ಪ್ರಕರಣ ಇತ್ಯರ್ಥಗೊಳಿಸುತ್ತಿದೆ. ಪಂಚಾಯತ್ ಸದಸ್ಯರು ಅಥವಾ ಸುಶಿಕ್ಷಿತರು ಉಚಿತ ಕಾನೂನು ನೆರವಿನ ಬಗ್ಗೆ ಗ್ರಾಮೀಣರಿಗೆ ತಿಳಿಸಿ ಹೇಳುವ ಅಗತ್ಯವಿದೆ ಎಂದರು.

ಗುAಡದಲ್ಲಿ ನೆಡಲಾಡ ಗಿಡಕ್ಕೆ ನೀರೆರೆದು ಕಾರ್ಯಕ್ರಮ ಉದ್ಘಾಟಿಸಲಾಯಿತು. ಪಂಚಾಯತ್ ಸದಸ್ಯರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಪಂಚಾಯತ್ ಕಾರ್ಯದರ್ಶಿ ಅಶೋಕ್ ಉಪಸ್ಥಿತರಿದ್ದರು. ಪಿಡಿಒ ಅಬೂಬಕ್ಕರ್ ಸ್ವಾಗತಿಸಿ, ನಿರೂಪಿಸಿದರು. ಬಳಿಕ ಪಂಚಾಯತ್ ಸುತ್ತಮುತ್ತಲ ಕೆಲವು ಮನೆಗಳಿಗೆ ತೆರಳಿದ ವಕೀಲೆ ಪ್ರತಿಮಾ ಹಾಗೂ ಇತರರು `ಕಾನೂನು ನಿಮ್ಮ ಬಳಿಗೆ’ ಬಗ್ಗೆ ಸ್ಪಷ್ಟ ಮಾಹಿತಿ ನೀಡಿದರು.
