ಮೋದಿ ಬರ್ತಾರೆ ಅಂತ ರಾತ್ರೋರಾತ್ರಿ ಆಸ್ಪತ್ರೆ ಕ್ಲೀನ್
ಗಾಂಧೀನಗರ: ಬೃಹತ್ ಸೇತುವೆ ಕುಸಿತದ ದುರಂತದ ವೇಳೆ ಗಾಯಗೊಂಡಿದ್ದವರನ್ನು ಭೇಟಿ ಮಾಡಲು ಪ್ರಧಾನಿ ನರೇಂದ್ರ ಮೋದಿ ಇಂದು ಗುಜರಾತ್‍ನ ಮೋರ್ಬಿಯ ಸಿವಿಲ್ ಆಸ್ಪತ್ರೆಗೆ ಬರುತ್ತಿದ್ದರಿಂದ ನಿನ್ನೆ ರಾತ್ರಿಯಿಡೀ ಅಲ್ಲಿನ ಸಿಬ್ಬಂದಿ ಸ್ವಚ್ಛತೆ ಮಾಡಿದ್ದಾರೆ. ಇದೀಗ ಈ ಘಟನೆ ಪ್ರತಿಪಕ್ಷಗಳ ಟೀಕೆಗೆ ಗುರಿಯಾಗಿದೆ.

ಗುಜರಾತ್‍ನ ಮೊರ್ಬಿಯಲ್ಲಿ ನಡೆದ ತುಗುಸೇತುವೆ ದುರಂತದಲ್ಲಿ 135 ಮಂದಿ ಮೃತಪಟ್ಟಿದ್ದರು. ಜೊತೆಗೆ 100ಕ್ಕೂ ಹೆಚ್ಚು ಗಾಯಾಳುಗಳನ್ನು ರಕ್ಷಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರಲ್ಲಿ ಹಲವರು ಮೋರ್ಬಿ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಗೆ ಸಂಬಂಧಿಸಿ ಪ್ರಧಾನಿ ಮೋದಿ ಸಿವಿಲ್ ಆಸ್ಪತ್ರೆಗೆ ಭೇಟಿ ನೀಡುವ ವಿಷಯವನ್ನು ಅಲ್ಲಿನ ಸಿಬ್ಬಂದಿ ತಿಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ರಾತ್ರೋರಾತ್ರಿ ಆಸ್ಪತ್ರೆ ಪೂರ್ತಿ ಸ್ವಚ್ಛಗೊಳಿಸಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ವೀಡಿಯೋದಲ್ಲಿ ಕೆಲವು ಗೋಡೆಗಳು ಮತ್ತು ಚಾವಣಿಯ ಭಾಗಗಳಿಗೆ ಹೊಸದಾಗಿ ಬಣ್ಣ ಬಳಿಯಲಾಗಿದೆ ಮತ್ತು ಹೊಸ ವಾಟರ್ ಕೂಲರ್‌ಗಳನ್ನು ತರಲಾಯಿತು. ಸೇತುವೆ ದುರಂತದಲ್ಲಿ ಗಾಯಗೊಂಡ ಸುಮಾರು 13 ಮಂದಿ ದಾಖಲಾಗಿರುವ ಎರಡು ವಾರ್ಡ್‍ಗಳಲ್ಲಿನ ಬೆಡ್‍ಶೀಟ್‍ಗಳನ್ನು ಸಹ ತ್ವರಿತವಾಗಿ ಬದಲಿಸಿದ್ದಾರೆ.
ಘಟನೆಗೆ ಸಂಬಂಧಿಸಿ ಪ್ರತಿಪಕ್ಷಗಳು ಬಿಜೆಪಿಯನ್ನು ಟೀಕಿಸಿದೆ. ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಾರ್ಟಿ (ಎಎಪಿ) ಟ್ವೀಟ್ ಮಾಡಿ, ಬಿಜೆಪಿಯು ಪ್ರಧಾನಿಗೆ ಫೋಟೋಶೂಟ್ ಮಾಡಿಸಲು ಈವೆಂಟ್ ಮ್ಯಾನೇಜ್‍ಮೆಂಟ್‍ನಲ್ಲಿ ನಿರತವಾಗಿದೆ ಎಂದು ಆರೋಪಿಸಿದೆ.