ಭಾರತದ ಉಕ್ಕಿನ ಮನುಷ್ಯ ಎಂದೇ ಖ್ಯಾತಿಯಾಗಿದ್ದ ಟಾಟಾ ಸ್ಟೀಲ್ ಮಾಜಿ ವ್ಯವಸ್ಥಾಪಕ ನಿರ್ದೇಶಕ ಜೆಜೆ ಇರಾನಿ ನಿಧನ
ನವದೆಹಲಿ: ಭಾರತದ ಉಕ್ಕಿನ ಮನುಷ್ಯ ಎಂದೇ ಖ್ಯಾತರಾಗಿದ್ದ ಜಮ್ಶೆಡ್ ಜೆ ಇರಾನ (85) ಸೋಮವಾರ ತಡರಾತ್ರಿ ಜೆಮ್‌ಶೆಡ್‌ಪುರದಲ್ಲಿ ನಿಧನರಾಗಿದ್ದಾರೆ ಎಂದು ಟಾಟಾ ಸ್ಟೀಲ್ (Tata Steel) ಕಂಪನಿ ತಿಳಿಸಿದೆ.

ಇರಾನಿ ಅವರು 4 ದಶಕಗಳ ಕಾಲ ಟಾಟಾ ಸ್ಟೀಲ್‌ನಲ್ಲಿ ಕಾರ್ಯ ನಿರ್ವಹಿಸಿದ್ದರು. ಜೂನ್ 2011 ರಲ್ಲಿ ಟಾಟಾ ಸ್ಟೀಲ್ ಮಂಡಳಿಯಿಂದ ನಿವೃತ್ತರಾದ ಇವರು 43 ವರ್ಷಗಳ ಪರಂಪರೆಯನ್ನು ತೊರೆದರು. ಇದು ಅವರಿಗೆ ಮತ್ತು ಕಂಪನಿಗೆ ವಿವಿಧ ಕ್ಷೇತ್ರಗಳಲ್ಲಿ ಅಂತಾರಾಷ್ಟ್ರೀಯ ಮೆಚ್ಚುಗೆಯನ್ನು ಗಳಿಸಲು ಕಾರಣವಾಯಿತು.
1936ರ ಜೂನ್ 2 ರಂದು ನಾಗ್ಪುರದಲ್ಲಿ ಜಿಜಿ ಇರಾನಿ ಮತ್ತು ಖೋರ್ಶೆಡ್ ಇರಾನಿ ದಂಪತಿಗೆ ಜನಿಸಿದ ಜಮ್ಶೆಡ್ ಜೆ ಇರಾನಿ ಅವರು 1956 ರಲ್ಲಿ ನಾಗ್ಪುರದ ವಿಜ್ಞಾನ ಕಾಲೇಜಿನಲ್ಲಿ ತಮ್ಮ ಬಿಎಸ್‌ಸಿ ಮತ್ತು 1958 ರಲ್ಲಿ ನಾಗ್ಪುರ ವಿಶ್ವವಿದ್ಯಾಲಯದಲ್ಲಿ ಭೂವಿಜ್ಞಾನದಲ್ಲಿ ಎಂಎಸ್‌ಸಿ ಪೂರ್ಣಗೊಳಿಸಿದರು.
ಬಳಿಕ ಅವರು ಜೆಎನ್ ಟಾಟಾ ವಿದ್ವಾಂಸರಾಗಿ ಯುಕೆಯ ಶೆಫೀಲ್ಡ್ ವಿಶ್ವವಿದ್ಯಾಲಯಕ್ಕೆ ತೆರಳಿದರು. ಅಲ್ಲಿ ಅವರು 1960 ರಲ್ಲಿ ಮೆಟಲರ್ಜಿಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು ಹಾಗೂ 1963 ರಲ್ಲಿ ಲೋಹಶಾಸ್ತ್ರದಲ್ಲಿ ಪಿಹೆಚ್‌ಡಿ ಪಡೆದರು.
1963 ರಲ್ಲಿ ಶೆಫೀಲ್ಡ್ನಲ್ಲಿ ಬ್ರಿಟಿಷ್ ಐರನ್ ಮತ್ತು ಸ್ಟೀಲ್ ರಿಸರ್ಚ್ ಅಸೋಸಿಯೇಷನ್‌ನಲ್ಲಿ ತಮ್ಮ ವೃತ್ತಿಪರ ಜೀವನವನ್ನು ಪ್ರಾರಂಭಿಸಿದರು. ಆದರೂ ಅವರು ಯಾವಾಗಲೂ ರಾಷ್ಟ್ರದ ಪ್ರಗತಿಗೆ ಕೊಡುಗೆ ನೀಡಲು ಹಂಬಲಿಸಿದ್ದು, 1968 ರಲ್ಲಿ ಭಾರತಕ್ಕೆ ಮರಳಿ ಟಾಟಾ ಐರನ್ ಮತ್ತು ಸ್ಟೀಲ್ ಕಂಪನಿಗೆ (ಈಗಿನ ಟಾಟಾ ಸ್ಟೀಲ್) ಸಂಶೋಧನೆ ಮತ್ತು ಅಭಿವೃದ್ಧಿಯ ಉಸ್ತುವಾರಿ ನಿರ್ದೇಶಕರ ಸಹಾಯಕರಾಗಿ ಸೇರಿಕೊಂಡರು.
1978 ರಲ್ಲಿ ಜನರಲ್ ಸೂಪರಿಂಟೆಂಡೆಂಟ್, 1979 ರಲ್ಲಿ ಜನರಲ್ ಮ್ಯಾನೇಜರ್ ಮತ್ತು 1985 ರಲ್ಲಿ ಟಾಟಾ ಸ್ಟೀಲ್‌ನ ಅಧ್ಯಕ್ಷರಾದರು. ಅವರು 1988 ರಲ್ಲಿ ಟಾಟಾ ಸ್ಟೀಲ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕರಾಗಿ, 1992 ರಲ್ಲಿ ವ್ಯವಸ್ಥಾಪಕ ನಿರ್ದೇಶಕರಾದರು. 2011 ರಲ್ಲಿ ನಿವೃತ್ತರಾದರು.