ಎರ್ಮಾಳ್ : ಕಾಪುವಿನಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಪ್ರತಿಭಟನೆ
ಎರ್ಮಾಳ್ : ಎಲ್ಲೋ ಎರಡು ಗ್ರಾಮ ಪಂಚಾಯಿತಿಗಳಲ್ಲಿ ಭ್ರಷ್ಟಾಚಾರ ನಡೆಯಿತು ಎಂಬ ಕಾರಣಕ್ಕೆ ಎಲ್ಲಾ ಗ್ರಾ.ಪಂ. ಪ್ರತಿನಿಧಿಗಳ ಅಧಿಕಾರ ಕಿತ್ತು ಕೊಳ್ಳುವ ಸರ್ಕಾರ ನಿರ್ಧಾರ ಸರಿಯಲ್ಲ, ಇದು ಸರಿಯಾಗಿದ್ದರೆ ಭ್ರಷ್ಟಾಚಾರವೇ ತಾಂಡವಾಡುತ್ತಿರುವ ಸರ್ಕಾರವನ್ನು ಏನು ಮಾಡುತ್ತೀರಿ ಇದಕ್ಕೆ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂಬುದಾಗಿ ಗ್ರಾ.ಪಂ.ಒಕ್ಕೂಟಗಳ ಅಧ್ಯಕ್ಷ ಬೆಳಪು ದೇವಿ ಪ್ರಸಾದ್ ಶೆಟ್ಟಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಅವರು ಕಾಪುವಿನಲ್ಲಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ್ದಾರೆ. ಯಾವುದೇ ರಾಜಕೀಯ ಪಕ್ಷಗಳ ಚಿನ್ನೆಗಳಿಲ್ಲದೆ ಚುನಾವಣೆ ಎದುರಿಸಿ ರಾಜಕೀಯ ರಹಿತವಾಗಿ ಅಭಿವೃದ್ಧಿ ಕಾರ್ಯಗಳನ್ನು ನಡೆಸುತ್ತಿರುವ ಗ್ರಾ.ಪಂ. ಪ್ರತಿನಿಧಿಗಳ ಅಧಿಕಾರ ಕಸಿದುಕೊಳ್ಳುವ ಮೂಲಕ ಸ್ಥಳೀಯ ಶಾಸಕರುಗಳನ್ನು ಗ್ರಾ.ಪಂ.ಆಡಳಿತದಲ್ಲಿ ಕೈಯಾಡಿಸುವಂತೆ ಮಾಡುವ ಕುತಂತ್ರ ಇದಾಗಿದೆ.
ಈ ಹಿಂದಿನಂತೆ ಗ್ರಾ.ಪಂ. ಪ್ರತಿನಿಧಿಗಳಿಗೆ ಅಧಿಕಾರ ನೀಡದಿದ್ದಲ್ಲಿ ಮುಂದಿನ ದಿನದಲ್ಲಿ ಉಗ್ರ ಪ್ರತಿಭಟನೆ ಅನಿವಾರ್ಯವಾದೀತು ಎಂಬುದಾಗಿ ಎಚ್ಚರಿಸಿದ್ದಾರೆ.ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಬಿಜೆಪಿ ಪಕ್ಷದ ನಡೆಯನ್ನು ಉಗ್ರವಾದ ಮಾತುಗಳಿಂದ ಖಂಡಿಸಿದರು.
ರಾಜೀವ ಭವನದಿಂದ ತಾಲೂಕು ಕಛೇರಿವರಗೆ ಜಾಥ ನಡೆಸಿ, ಬಿಜೆಪಿ ಸರ್ಕಾರ ಹಾಗೂ ಸ್ಥಳೀಯ ಶಾಸಕರ ವಿರುದ್ಧ ಘೋಷಣೆಗಳನ್ನು ಕೂಗಿ ಕಂದಾಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಬ್ಲಾಕ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ಬಾಲಚಂದ್ರ, ನವೀನ್ ಶೆಟ್ಟಿ, ಯಶವಂತ್ ಪಲಿಮಾರ್, ಕರುಣಾಕರ್ ಪೂಜಾರಿ, ರಮೀಜ್, ವೈ.ಸುಕುಮಾರ್ ಸಹಿತ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.