ತಿರುವೈಲಿನ ಶ್ರೀಅಮೃತೇಶ್ವರ ಯಕ್ಷಗಾನ ಪ್ರತಿಷ್ಠಾನ(ರಿ) ಇದರ ನವವರ್ಷೋತ್ಸವ
ಕೈಕಂಬ: ವಾಮಂಜೂರು ತಿರುವೈಲಿನ ಶ್ರೀ ಅಮೃತೇಶ್ವರ ಯಕ್ಷಗಾನ ಪ್ರತಿಷ್ಠಾನ(ರಿ) ಇದರ ನವವರ್ಷೋತ್ಸವ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ವಾಮಂಜೂರಿನ ಶ್ರೀ ಅಮೃತೇಶ್ವರ ದೇವಸ್ಥಾನದ
ರಜತಾದ್ರಿ ಸಭಾಭವನ’ದಲ್ಲಿ ಅ. ೩೦ರಂದು ಪ್ರತಿಷ್ಠಾನದ ಅಧ್ಯಕ್ಷ ದೀಪಕ್ ಶೆಟ್ಟಿ ಲಿಂಗಮಾರುಗುತ್ತು ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಅಮೃತೇಶ್ವರ ದೇವಸ್ಥಾನದ ಅರ್ಚಕ ಬಾಲಕೃಷ್ಣ ಭಟ್ ದೀಪ ಬೆಳಗಿಸಿ ಸಮಾರಂಭ ಉದ್ಘಾಟಿಸಿದರು. ಸಂಘಟಕ ಕಿರಣ್ ಪಕ್ಕಳ ಮಾತನಾಡಿ, ರಾಜೇಶ್ ಶೆಟ್ಟಿ ಅಡ್ಕ ಅವರಂತಹ ಅನುಭವಿ ಯಕ್ಷಗಾನ ಕಲಾವಿದರ ಗರಡಿಯಲ್ಲಿ ಯಕ್ಷಾಭ್ಯಾಸ ನಡೆಸುತ್ತಿರುವ ಇಲ್ಲಿನ ಮಕ್ಕಳ ಸಹಿತ ಹಿರಿಯರು ಈಗಾಗಲೇ ಉತ್ತಮ ಸಾಧನೆಗೈದಿದ್ದಾರೆ. ಯಕ್ಷ ಪ್ರತಿಭೆಗಳ ಅನಾವರಣಕ್ಕೆ ಈ ಪ್ರತಿಷ್ಠಾನ ರಂಗವಾಗಲಿ ಎಂದರು.
ಕಾರ್ಪೊರೇಟರ್ ಭಾಸ್ಕರ್ ಮೊÊಲಿ ಮಾತನಾಡಿ, ಶಾಲಾ ಶಿಕ್ಷಣದೊಂದಿಗೆ ಮಕ್ಕಳು ಯಕ್ಷಗಾನದಂತಹ ಪಠ್ಯೇತರ ಚಟುವಟಿಕೆಗಳಲ್ಲೂ ಆಸಕ್ತಿ ತೋರಿಸಬೇಕು. ಮಕ್ಕಳು ಮತ್ತು ಇತರರ ಸಾಧನೆ ಮೂಲಕ ಈ ಪ್ರತಿಷ್ಠಾನ ಉನ್ನತ ಮಟ್ಟಕ್ಕೇರಲಿ ಎಂದರು.
ಉದ್ಯಮಿ ಸತೀಶ್ ಶೆಟ್ಟಿ ಮೂಡುಜಪ್ಪುಗುತ್ತು, ಉಳಾಯಿಬೆಟ್ಟು ಪಂಚಾಯತ್ ಅಧ್ಯಕ್ಷ ಹರಿಕೇಶ ಶೆಟ್ಟಿ ನಡಿಗುತ್ತು, ಉದ್ಯಮಿ ಜಯರಾಮ ಶೆಟ್ಟಿ ಮಾತನಾಡಿ ಪ್ರತಿಷ್ಠಾನಕ್ಕೆ ಶುಭ ಹಾರೈಸಿದರು. ಚಿತ್ತರಂಜನ್‌ದಾಸ್ ಶೆಟ್ಟಿ, ನಾಗರಾಜ ರೈ ತಿಮಿರಿಗುತ್ತು, ಸುಭಾಷ್ ಬಾಲಕಟ್ಟ, ವಿಜಯಾ ಎನ್, ಜಯಪ್ರಕಾಶ್(ಜೆಪಿ) ಉಪಸ್ಥಿತರಿದ್ದರು. ಅನನ್ಯಾ ಮತ್ತು ಮನಸ್ವಿನಿ ರಾವ್ ಭಾಗವತಿಕೆ ಮೂಲಕ ಗಣಪತಿ ಸ್ತುತಿಗೈದರು. ಶರತ್ ಶೆಟ್ಟಿ ಪಡುಪಳ್ಳಿ ನಿರೂಪಿಸಿ ವಂದಿಸಿದರು. ಬಳಿಕ ಯಕ್ಷಗಾನಕ್ಕೆ ಸಂಬಂಧಿಸಿದ ವಿವಿಧ ಕಾರ್ಯಕ್ರಮ ನಡೆಯಿತು.