ಗೂಳಿಗೆ ಡಿಕ್ಕಿ ಹೊಡೆದು ವಂದೇ ಭಾರತ್ ಎಕ್ಸ್‌ಪ್ರೆಸ್ ಜಖಂ – ತಿಂಗಳಲ್ಲಿ 3ನೇ ದುರ್ಘಟನೆ
ಗಾಂಧೀನಗರ: ರೈಲು ಹಳಿ ಮೇಲೆ ಹಾದು ಹೋಗುವ ವೇಳೆ ಗೂಳಿಗೆ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ರೈಲು ಡಿಕ್ಕಿ ಹೊಡೆದು ಜಖಂಗೊಂಡಿರುವ ಘಟನೆ ಮುಂಬೈ ಸೆಂಟ್ರಲ್ ವಿಭಾಗದ ಅತುಲ್ ಬಳಿ ನಡೆದಿದೆ. ಈ ತಿಂಗಳಲ್ಲಿ ಸಂಭವಿಸಿದ ಮೂರನೇ ಘಟನೆ ಇದಾಗಿದೆ.
ಇಂದು ಬೆಳಗ್ಗೆ 8:17ಕ್ಕೆ ಮುಂಬೈ ಸೆಂಟ್ರಲ್ ವಿಭಾಗದ ಅತುಲ್ ಬಳಿ ವಂದೇ ಭಾರತ್ ರೈಲು ಹಾದುಹೋಗುವ ವೇಳೆ ಜಾನುವಾರುಗಳು ಅಡ್ಡ ಬಂದಿದ್ದು, ಈ ವೇಳೆ ಗೂಳಿಗೆ ಡಿಕ್ಕಿಯಾಗಿ ದುರ್ಘಟನೆ ಸಂಭವಿಸಿದೆ ಎಂದು ಭಾರತೀಯ ರೈಲ್ವೆ ತಿಳಿಸಿದೆ. ರೈಲು ಮುಂಬೈ ಸೆಂಟ್ರಲ್‌ನಿಂದ ಗಾಂಧಿನಗರಕ್ಕೆ ಪ್ರಯಾಣಿಸುತ್ತಿತ್ತು. ಘಟನೆಯ ನಂತರ ರೈಲನ್ನು ಸುಮಾರು 15 ನಿಮಿಷಗಳ ಕಾಲ ತಡೆಹಿಡಿಯಲಾಯಿತು.
ಮುಂಬೈ-ಗಾಂಧಿನಗರ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಗುಜರಾತ್‌ನ ಅತುಲ್ ನಿಲ್ದಾಣದ ಬಳಿ ಜಾನುವಾರುಗಳಿಗೆ ಡಿಕ್ಕಿ ಹೊಡೆದಿದೆ. ಕಾರ್ಯಾಚರಣೆಗೆ ಯಾವುದೇ ಹಾನಿಯಾಗಿಲ್ಲ ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮುಂಬೈ ಸೆಂಟ್ರಲ್-ಗಾಂಧೀನಗರ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಜಾನುವಾರಕ್ಕೆ ಡಿಕ್ಕಿ ಹೊಡೆದ ಪರಿಣಾಮ ರೈಲಿನ ಮುಂಭಾಗ ಹಾನಿಯಾಗಿದೆ.
ವಂದೇ ಭಾರತ್ ಸರಣಿಯ ಮೂರನೇ ಸೇವೆಯಾದ ಸ್ವದೇಶಿ ವಿನ್ಯಾಸದ ಸೆಮಿ-ಹೈಸ್ಪೀಡ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 30 ರಂದು ಗಾಂಧೀನಗರ ಕ್ಯಾಪಿಟಲ್‌ನಿಂದ ಚಾಲನೆ ನೀಡಿದ್ದರು.
ಅಕ್ಟೋಬರ್ 6 ರಂದು ಗುಜರಾತ್‌ನ ವತ್ವಾ ಮತ್ತು ಮಣಿನಗರ ರೈಲು ನಿಲ್ದಾಣಗಳ ನಡುವೆ ಮುಂಬೈನಿಂದ ಗಾಂಧೀನಗರಕ್ಕೆ ತೆರಳುತ್ತಿದ್ದ ರೈಲಿಗೆ ಡಿಕ್ಕಿ ಹೊಡೆದು ನಾಲ್ಕು ಎಮ್ಮೆಗಳು ಸಾವನ್ನಪ್ಪಿದ್ದವು. ಹಾನಿಯಾಗಿದ್ದ ರೈಲಿನ ಮುಂಭಾಗವನ್ನು ಬದಲಿಸಲಾಗಿತ್ತು. ಮರುದಿನ ಕೂಡ ಮುಂಬೈಗೆ ತೆರಳುತ್ತಿದ್ದಾಗ ಗುಜರಾತ್‌ನ ಆನಂದ್ ಬಳಿ ರೈಲು ಹಸುವಿಗೆ ಡಿಕ್ಕಿ ಹೊಡೆದಿತ್ತು.