ರಾಧಾ ಸುರಭಿ ಗೋಶಾಲೆಯಲ್ಲಿ “ಗೋ ನವರಾತ್ರಿ ಉತ್ಸವ”ಕ್ಕೆ ಚಾಲನೆ
ಬಂಟ್ವಾಳ : ಪುದುಗ್ರಾಮದ ಗೋವಿನತೋಟ ರಾಧಾ ಸುರಭಿ ಗೋಶಾಲೆಯಲ್ಲಿ ನ.3 ರವರೆಗೆ ನಡೆಯಲಿರುವ “ಗೋ ನವರಾತ್ರಿ ಉತ್ಸವ” ಕ್ಕೆ ಗೋಪೂಜೆಯ ದಿನವಾದ ಬುಧವಾರ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರಾದ ಡಾ. ಪ್ರಭಾಕರ ಭಟ್ ಕಲ್ಲಡ್ಕ ಅವರು ಚಾಲನೆ ನೀಡಿದರು.

ದೀಪ ಪ್ರಜ್ವಲನಗೈದು ಉದ್ಘಾಟಿಸಿ ಮಾತನಾಡಿದ ಡಾ.ಭಟ್ ಅವರು ದೇಸಿ ಗೋವುಗಳು ಒಂದು ಹಂತದವರೆಗೆ ಹಾಲನ್ನು ನೀಡಿ ನಮಗೆ ಸಹಕಾರಿಯಾದರೆ ಬಳಿಕ ಗೋಮಯ,ಗೋಮೂತ್ರಗಳ ಉತ್ಪನ್ನ ವನ್ನು ತಯಾರಿಸಿ ಜೀವನ ಸಾಗಿಸಬಹುದಾಗಿದೆ. ಪರಕೀಯರ ಆಕ್ರಮಣಕ್ಕೆ ತುತ್ತಾದರೂ ನಮ್ಮ ಸಂಸ್ಕಾರ , ಸಂಸ್ಕೃತಿಯನ್ನು ನಾವೆಂದು ಮರೆತಿಲ್ಲ ಎಂದರು.

ಶ್ರೀ ರಾಮಕೃಷ್ಣ ತಪೋವನದ ಶ್ರೀ ವಿವೇಕ ಚೈತನ್ಯಾನಂದ ಸ್ವಾಮೀಜಿಯವರು ಗೋಪೂಜೆಯನ್ನು ನೆರವೇರಿಸಿ ಆಶೀರ್ವಚನ ನೀಡಿದರು.
ರಾಷ್ಟ್ರೀಯ ಗೋಸೇವಾ ಸಂಸ್ಥಾನಂ ಟ್ರಸ್ಟ್ ನ ಅಧ್ಯಕ್ಷರಾದ ಭಕ್ತಿ ಭೂಷಣ್ ಪ್ರಭುಜಿ ಯವರು ಪ್ರಸ್ತಾವಿಕವಾಗಿ ಮಾತನಾಡಿ ಗೋನವರಾತ್ರಿ ಉತ್ಸವದ ಪ್ರಾಮುಖ್ಯತೆ ಮತ್ತು ಉದ್ದೇಶವನ್ನು ತಿಳಿಸಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘ ದ ಪುತ್ತೂರು ಸಂಘಚಾಲಕರಾದ ಕೊಡ್ಮಣ್ ಕಾಂತಪ್ಪ ಶೆಟ್ಟಿ, ಉದ್ಯಮಿಗಳಾದ ಸುಜೀರು ಗುತ್ತು ಐತಪ್ಪ ಆಳ್ವ, ಜಗನ್ನಾಥ ಚೌಟ, ಧಾರ್ಮಿಕ ಚಿಂತಕರಾದ ಮಾತಾಜಿ ಶೋಭಾ ಮಯ್ಯ, ಮಾಂಡೋವಿ ಮೋಟಾರ್ಸ್ ನ ಅನಿತಾ ರಾವ್, ಕರ್ನಾಟಕ ಗೋ ಗತಿವಿಧಿಯ ಪ್ರತಿನಿಧಿ ಗಂಗಾಧರ ಪೆರ್ಮಂಕಿ ಮತ್ತಿತರರು ಉಪಸ್ಥಿತರಿದ್ದರು
ಸಂಚಾಲಕರಾದ ತೇವು ತಾರಾನಾಥ ಕೊಟ್ಟಾರಿಯವರು ಸ್ವಾಗತಿಸಿದರು, ಕಳ್ಳಿಗೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ದಾಮೋದರ ನೆತ್ತರಕೆರೆ ವಂದಿಸಿದರು. ಕುಮಾರಿ ಮನಿಷಾ ನಿರೂಪಿಸಿದರು.