ಅ.30ರಂದು ನೇತಾಜಿ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡದ ಲೋಕಾರ್ಪಣೆ
ಬಂಟ್ವಾಳ: ಕಾಟಿಪಳ್ಳ ಜಾನಕಿ ಚಾರಿಟೇಬಲ್ ಸೇವಾ ಟ್ರಸ್ಟ್ ಹಾಗೂ ವಿದ್ಯಾಭಿಮಾನಿಗಳ ಸಹಕಾರದಲ್ಲಿ ಬಂಟ್ವಾಳ ತಾಲೂಕಿನ ಪುಂಚೋಡಿ ಸಮೀಪ ಸುಮಾರು 50 ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣಗೊಂಡ ಬುಡೋಳಿ ನೇತಾಜಿ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡದ ಲೋಕಾರ್ಪಣಾ ಕಾರ್ಯಕ್ರಮವು ಅ.30 ರಂದು ನೆರವೇರಲಿದೆ ಎಂದು ಕಾಟಿಪಳ್ಳ ಜಾನಕಿ ಚಾರಿಟೇಬಲ್ ಸೇವಾ ಟ್ರಸ್ಟ್ ಅಧ್ಯಕ್ಷ ಧರ್ಮೇಂದ್ರ ಗಣೇಶ್ ಪುರ ಅವರು ತಿಳಿಸಿದ್ದಾರೆ.
ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಶುಕ್ರವಾರ ಸಂಜೆ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಸುಮಾರು 50 ವರ್ಷಗಳ ಹಿನ್ನೆಲೆ ಹೊಂದಿರುವ ಶಾಲೆಯ ಹಳೇ ಕಟ್ಟಡವನ್ನು ಹಾಗೆ ಉಳಿಸಿಕೊಂಡು,ಇದೀಗ ಸುಸಜ್ಜಿತವಾದ ಐದು ನೂತನ ಕೊಠಡಿಗಳನ್ನು ನಿರ್ಮಿಸಲಾಗಿದೆ. ಮುಚ್ಚುವ ಹಂತದಲ್ಲಿದ್ದ ಈ ಶಾಲೆ ಈಗ ಸ್ಥಳೀಯರ ಸಹಕಾರದಿಂದಾಗಿ ಅಭಿವೃದ್ಧಿಪಡಿಸಲಾಗಿದ್ದು, ಈ ಹಿಂದೆ 8 ಮಕ್ಕಳಿದ್ದ ಶಾಲೆಯಲ್ಲಿ ಈಗ ಮಕ್ಕಳ ಸಂಖ್ಯೆ 40 ಕ್ಕೇರಿದೆ.ಮುಂದಿನ ಶೈಕ್ಷಣಿಕ ವರ್ಷದಲ್ಲಿ ಮಕ್ಕಳ ಸಂಖ್ಯೆಯನ್ನು 100 ಕ್ಕೇರಿಸುವ ಗುರಿಯನ್ನು ಹೊಂದಲಾಗಿದೆಯಲ್ಲದೆ ಅಂಗ್ಲ ಮಾಧ್ಯಮದಲ್ಲಿ ಎಲ್ ಕೆಜಿ,ಯುಕೆಜಿ ತರಗತಿಯನ್ನು ಆರಂಭಿಸ ಲಾಗುವುದು ಎಂದರು.
ಅ. 30 ರಂದು ಬೆಳಿಗ್ಗೆ 10 ಗಂಟೆಗೆ ಕಟೀಲು ಕ್ಷೇತ್ರದ ಅನಂತ ಪದ್ಮನಾಭ ಅಸ್ರಣ್ಣ ಅವರು ನೂತನ ಶಾಲಾ ಕಟ್ಟಡವನ್ನು ಉದ್ಘಾಟಿಸುವರು. ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ, ಕರಿಮಲೆ ಚರ್ಚಿನ ಧರ್ಮಗುರು ಲಿಯೋ ವೇಗಸ್, ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು, ಮಾಜಿ ಸಚಿವ ಬಿ.ರಮಾನಾಥ ರೈ,ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಕಶೆಕೋಡಿ ಸೂರ್ಯ ನಾರಾಯಣ ರಾವ್ ಸಹಿತ ಮತ್ತಿತರ ಗಣ್ಯರು ಭಾಗವಹಿಸುವರು ಎಂದು ತಿಳಿಸಿದರು. ಶಾಲಾ ಸಂಚಾಲಕ ಶ್ರೀಪತಿ ಭಟ್ ಪುಂಚೋಡಿ ಸಮಿತಿ ಕಾರ್ಯಾಧ್ಯಕ್ಷ ಪ್ರಕಾಶ ಕುಮಾರ್ ಜೈನ್,ಪದಾಧಿಕಾರಿಗಳಾದ ಕೆ.ಎನ್.ಶೇಖರ್,
ದೇವಪ್ಪ ಕುಲಾಲ್ ಪಂಜಿಕಲ್ಲು,ಶಶಿಧರ ಆಚಾರ್ಯ, ಕೇಶವ ಪೂಜಾರಿ , ಮುಖ್ಯಶಿಕ್ಷಕ ದೊಡ್ಡಪ್ಪ ಎಚ್. ಮೊದಲಾದವರು ಸುದ್ದಿಗೋಷ್ಠಿಯಲ್ಲಿದ್ದರು.