‘ವೈಟ್‌ಗ್ರೋ ಬಟನ್ ಮಶ್ರೂಮ್ಸ್’ ಫ್ಯಾಕ್ಟರಿಯಿಂದ ಹೊರಸೂಸುವ ದುರ್ವಾಸನೆ ವಿರುದ್ಧ ಸ್ಥಳೀಯ ನಿವಾಸಿಗರ ದೂರು
ಕೈಕಂಬ : ವಾಮಂಜೂರಿನ ಆಶ್ರಯನಗರದಲ್ಲಿರುವ ಖಾಸಗಿ ವ್ಯಕ್ತಿಗಳಿಬ್ಬರ ಪಾಲುಗಾರಿಕೆಯ ‘ವೈಟ್‌ಗ್ರೋ ಬಟನ್ ಮಶ್ರೂಮ್ಸ್’ ಫ್ಯಾಕ್ಟರಿಯಿಂದ ಹೊರಸೂಸುವ ದುರ್ವಾಸನೆ ವಿರುದ್ಧ ಸ್ಥಳೀಯ ನಿವಾಸಿಗರು ಅ.೨೩ರಂದು ಭಾನುವಾರ ಶಾಸಕ ಡಾ. ಭರತ್ ಶೆಟ್ಟಿ ಅವರಿಗೆ ಲಿಖಿತ ದೂರು ನೀಡಿ, ಫ್ಯಾಕ್ಟರಿ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿಸಿದರು.
ನಾಲ್ಕೈದು ತಿಂಗಳ ಹಿಂದೆ ಆಶ್ರಯನಗರ ಕಾಲೊನಿಯಲ್ಲಿ ಸ್ಥಾಪಿಸಲ್ಪಟ್ಟ ಅಣಬೆ ಉತ್ಪಾದನೆಯ ಈ ಫ್ಯಾಕ್ಟರಿಯಿಂದ ಸುತ್ತಲ ಪ್ರದೇಶದಲ್ಲಿ ಪಚ್ಚನಾಡಿಯ ಡಂಪಿಂಗ್ ಯಾರ್ಡ್ಗಿಂತಲೂ ದೊಡ್ಡ ಪ್ರಮಾಣದಲ್ಲಿ ದುರ್ವಾಸನೆ ಬೀರುತ್ತಿದೆ. ಬೆಳಿಗ್ಗೆ ೬ ಗಂಟೆಯಿಂದ ತಡರಾತ್ರಿವರೆಗೆ ಫ್ಯಾಕ್ಟರಿಯಿಂದ ದುರ್ವಾಸನೆ ಬೀರುತ್ತಿದ್ದು, ಗರ್ಭಿಣಿಯರು ಮತ್ತು ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದೆ. ಮಕ್ಕಳಿಗೆ ಓದಲು ಆಗುತ್ತಿಲ್ಲ ಎಂದು ಸ್ಥಳೀಯರು ದೂರಿದರು.
ಮಂಗಳೂರಿನ ಪ್ರಭಾವಿ ರಾಜಕಾರಣಿ ಹಾಗೂ ಸ್ಥಳೀಯ ಉದ್ಯಮಿಯೊಬ್ಬರ ಪಾಲುಗಾರಿಕೆಯಲ್ಲಿ ನಿರ್ವಹಿಸಲ್ಪಡುತ್ತಿರುವ ಫ್ಯಾಕ್ಟರಿ ವಿರುದ್ಧ ಸ್ಥಳೀಯಾಡಳಿತಕ್ಕೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಈ ಬಾರಿ ನೇರವಾಗಿ ಶಾಸಕರಿಗೆ ದೂರು ನೀಡುತ್ತಿದ್ದೇವೆ. ದುರ್ನಾತದಿಂದ ದಿನರಾತ್ರಿ ಮನೆ ಬಾಗಿಲು ಮುಚ್ಚುವಂತಾಗಿದೆ. ಮೂಗು ಮುಚ್ಚಿಕೊಂಡು ನಡೆಯುತ್ತಿದ್ದೇವೆ. ಮನೆಯಲ್ಲಿ ಊಟ ಮಾಡಲು ಕಷ್ಟವಾಗುತ್ತಿದೆ ಎಂದು ಮಹಿಳೆಯರು ಸ್ಥಳೀಯರು ಅನುಭವಿಸುತ್ತಿರುವ ಕಷ್ಟ ನಿವೇದಿಸಿಕೊಂಡರು.
ದೂರು ಸ್ವೀಕರಿಸಿದ ಶಾಸಕ ಡಾ. ಭರತ್ ಶೆಟ್ಟಿ ಮಾತನಾಡಿ, ಈ ಕಾಲೊನಿಯಲ್ಲಿ ನಡೆದುಕೊಂಡು ಬಂದಾಗಲೇ ದುರ್ವಾಸನೆಯ ಅನುಭವವಾಯಿತು. ಫ್ಯಾಕ್ಟರಿಯಿಂದ ಹೊರಸೂಸುವ ದುರ್ನಾತದ ವಿರುದ್ಧ ಮೊದಲಾಗಿ ಜಿಲ್ಲಾ ಪರಿಸರ ಮಾಲಿನ್ಯ ಮಂಡಳಿ, ದ.ಕ. ಜಿಲ್ಲಾಧಿಕಾರಿ ಮತ್ತು ರಾಜ್ಯ ಪರಿಸರ ಮಾಲಿನ್ಯ ಮಂಡಳಿಗೆ ಲಿಖಿತ ದೂರು ನೀಡಬೇಕು. ಬಳಿಕ ಶಾಸಕನ ಮಟ್ಟದಲ್ಲಿ, ಸಂಬಂಧಿತ ಇಲಾಖಾ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಫ್ಯಾಕ್ಟರಿ ವಿರುದ್ಧ ಕ್ರಮಕ್ಕೆ ಪ್ರಯತ್ನಿಸಿ, ಸ್ಥಳೀಯರು ನೆಮ್ಮದಿಯಿಂದ ಉಸಿರಾಡುವಂತೆ ಮಾಡುವೆ” ಎಂದು ಭರವಸೆ ನೀಡಿದರು.
ರಸ್ತೆ, ಚರಂಡಿ, ತಡೆಗೋಡೆ ಅಭಿವೃದ್ಧಿಗೆ ಗುದ್ದಲಿಪೂಜೆ
ಈ ಸಂದರ್ಭದಲ್ಲಿ ಆಶ್ರಯ ನಗರ ಕಾಲೊನಿಯಲ್ಲಿ ೫೮ ಲಕ್ಷ ರೂ ವೆಚ್ಚದಲ್ಲಿ ನಡೆಯಲಿರುವ ರಸ್ತೆ, ಚರಂಡಿ ಮತ್ತು ತಡೆಗೋಡೆ ಅಭಿವೃದ್ಧಿ ಕಾಮಗಾರಿಗೆ ಶಾಸಕರು ಗುದ್ದಲಿ ಪೂಜೆ ನೆರವೇರಿಸಿದರು. ಮನಪಾ ಸ್ಥಳೀಯ ತಿರುವೈಲು ೨೦ನೇ ವಾರ್ಡ್ ಕಾರ್ಪೊರೇಟರ್ ಹೇಮಲತಾ ರಘು ಸಾಲ್ಯಾನ್, ಬಿಜೆಪಿ ಉತ್ತರ ಮಂಡಲ ಪ್ರಧಾನ ಕಾರ್ಯದರ್ಶಿ ರಾಜೇಶ್ ಕೊಟ್ಟಾರಿ, ಬಿಜೆಪಿ ವಕ್ತಾರ ಜಗದೀಶ ಶೇಣವ, ಲಕ್ಷö್ಮಣ್ ಶೆಟ್ಟಿಗಾರ, ಅನಿಲ್ ರೈ ವಾಮಂಜೂರು, ಓಂ ಪ್ರಕಾಶ್ ಶೆಟ್ಟಿ, ಸ್ಥಳೀಯ ಬಿಜೆಪಿ ಪ್ರಮುಖರು, ಪಕ್ಷ ಕಾರ್ಯಕರ್ತರು ಉಪಸ್ಥಿತರಿದ್ದರು. ಸ್ಥಳೀಯರು ಶಾಸಕರು ಹಾಗೂ ಕಾರ್ಪೊರೇಟರ್ ಅವರನ್ನು ಶಾಲು ಹೊದಿಸಿ ಅಭಿನಂದಿಸಿದರು.