ಗ್ರಾಮ ಸಹಾಯಕರನ್ನು ಸರಕಾರಿ ನೌಕರರನ್ನಾಗಿ ಪರಿಗಣಿಸುವಂತೆ ಬಂಟ್ವಾಳ ತಾಲೂಕು ಗ್ರಾ.ಪಂ ಸದಸ್ಯರ ಒಕ್ಕೂಟದ ಪ್ರಧಾನ ಕಾರ್ಯದ ರ್ಶಿ ಪ್ರಭಾಕರ ಪ್ರಭು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮನವಿ ಮೂಲಕ ಒತ್ತಾಯಿಸಿದ್ದಾರೆ.ಕರ್ನಟಕ ರಾಜ್ಯದಾದ್ಯಂತ ಕಳೆದ 40-50 ವರ್ಷಗಳಿಂದಲೂ ಸುಮಾರು 11 ಸಾವಿರಕ್ಕೂ ಹೆಚ್ಚು ಗ್ರಾಮ ಸಹಾಯಕರು ಗ್ರಾಮಾಂತರ ಪ್ರದೇಶಗಳಲ್ಲಿ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುತ್ತ ಬಂದಿದ್ದು ಇವತ್ತಲ್ಲ ನಾಳೆ ಸೇವೆ ಖಾಯಂ ಆಗಬಹುದೆಂಬ ಆಸೆಯಿಂದ ಸರಕಾರ ಕೊಡುವ ಕಿಂಚಿತ್ತು ಗೌರವಧನಕ್ಕೆ ಮಿಗಿಲಾಗಿ ವೃತ್ತಿ ಮಾಡುತ್ತಿದ್ದಾರೆ.
ಗ್ರಾಮಾಂತರ ಪ್ರದೇಶಗಳಲ್ಲಿ ಜನಸಾಮಾನ್ಯರ ಕಷ್ಟ-ಸುಖ, ಆಶೋತ್ತರ ಹಾಗೂ ಬೇರೆ ಬೇರೆ ಕೆಲಸ ಕಾರ್ಯಗಳಿಗೆ ಯಾವುದೇ ಪ್ರತಿಫಲಾಪೇಕ್ಷೆ ಪಡೆಯದೆ ಸರಕಾರದ ಯೋಜನೆಗಳ ಪ್ರಯೋಜನವನ್ನು ಫಲಾನುಭವಿಗಳ ಮನೆ ಬಾಗಿಲಿಗೆ ತಲುಪಿಸಿ ಜನಸಾಮಾನ್ಯರಿಗೆ ಹತ್ತಿರದ ವ್ಯಕ್ತಿಯಾಗಿ ಕಂಡುಕೊಂಡಿದ್ದಾರೆ. ಹಲವಾರು ಗ್ರಾಮ ಸಹಾಯಕರು ಈಗಾಗಲೇ ನಿವೃತ್ತಿಗೊಂಡಿದ್ದು ಕೆಲವರು ನಿವೃತ್ತಿಯ ಅಂಚಿನಲ್ಲಿದ್ದಾರೆ. ಪ್ರಸ್ತುತ ಕಂದಾಯ ಇಲಾಖೆಯ ಅಧೀನದಡಿ ಜಿಲ್ಲಾಧಿಕಾರಿ ಕಛೇರಿ ತಾಲೂಕು ಕಛೇರಿಗಳಲ್ಲಿನ ತ್ವರಿತ ಕೆಲಸ ಕಾರ್ಯಗಳಲ್ಲಿ ಗ್ರಾಮ ಸಹಾಯಕರೇ ಹೆಚ್ಚಿನ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.
ಕಾಲಕಾಲಕ್ಕೆ ತಕ್ಕಂತೆ ರಾಜ್ಯ ಸರ್ಕಾರದ ವಿವಿಧ ಇಲಾಖಾ ಮಾಹಿತಿ, ನೋಟೀಸು ನೀಡುವರೇ ಚುನಾವಣಾ ಸಂದರ್ಭ ರಾತ್ರಿ-ಹಗಲು ದುಡಿದು ಸೇವೆ ಸಲ್ಲಿಸುತ್ತಿರುವುದನ್ನು ಮನಗಂಡ ಸರ್ವೊಚ್ಚ ನ್ಯಾಯಾಲಯವು ಇವರ ಮನವಿಗೆ ಸ್ಪಂದಿಸಿ 2001ರಲ್ಲಿ ಗ್ರಾಮ ಸಹಾಯಕರನ್ನು ಡಿ’ಗ್ರೂಫ್ ನೌಕರರಾಗಿ ಪರಿಗಣಿಸಬೇಕೆಂದು ನಿರ್ದೇಶನ ನೀಡಿದ್ದು, ಗ್ರಾಮ ಸಹಾಯಕರ ವಿಧ್ಯಾರ್ಹತೆಗೆ ತಕ್ಕಂತೆ ಸರಕಾರಿ ನೌಕರರನ್ನಾಗಿ ಪರಿಗಣಿಸಿ ಗ್ರಾಮಕ್ಕೆ ಒಬ್ಬರಂತೆ ಗ್ರಾಮ ಸಹಾಯಕರನ್ನಾಗಿ ನೇಮಿಸಬೇಕೆಂದು ಅವರು ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಿಗೆ ಸಲ್ಲಿಸಿರುವ ಮನವಿಯಲ್ಲಿ ಒತ್ತಾಯಿಸಿದ್ದಾರೆ
