ಎಡಪದವಿನಲ್ಲಿ ಮಂಗಳೂರು ತಹಸೀಲ್ದಾರ್ ಗ್ರಾಮ ವಾಸ್ತವ್ಯ.
ಜನರ ಬಳಿ ತೆರಳಿ ಸಮಸ್ಯೆ ಪರಿಹಾರ ವಾಸ್ತವ್ಯದ ಉದ್ದೇಶ : ತಹಸೀಲ್ದಾರ್ ಪುಟ್ಟರಾಜು
ಕೈಕಂಬ: ಮಂಗಳೂರು ತಹಸೀಲ್ದಾರ್ ಅವರ ಗ್ರಾಮ ವಾಸ್ತವ್ಯ ಶನಿವಾರ ಎಡಪದವು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ಗ್ರಾಮ ವಾಸ್ತವ್ಯ ವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ತಹಸೀಲ್ದಾರ್ ಪುಟ್ಟರಾಜು ಅವರು ಮಾತನಾಡಿ ಸರಕಾರದ ಇಲಾಖೆಗಳೇ ಜನರ ಬಳಿ ತೆರಳಿ ದಿನವಿಡೀ ಇದ್ದು ಜನರ ಸಮಸ್ಯೆಗಳಿಗೆ ಸ್ಥಳದಲ್ಲಿಯೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಅಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹಮ್ಮಿಕೊಂಡಿದೆ ಜತೆಯಲ್ಲಿ ಗ್ರಾಮದ ಸಮಸ್ಯೆಗಳಿಗೆ ಪರಿಹಾರ ಕಂದುಕೊಳ್ಳುವುದು ಗ್ರಾಮ ವಾಸ್ತವ್ಯದ ಉದ್ದೇಶ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಂಚಾಯತ್ ಅಧ್ಯಕ್ಷ ಸುಕುಮಾರ್ ದೇವಾಡಿಗ ಮಾತನಾಡಿ ಗ್ರಾಮಸ್ಥರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಸರಕಾರಿ ಕಛೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಿ ಜನರ ಬಳಿ ಅಧಿಕಾರಿಗಳೇ ತೆರಳಿ ಸಮಸ್ಯೆ ಪರಿಹಾರ ಮಾಡುವ ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಸದುಪಯೋಗವನ್ನು ಗ್ರಾಮಸ್ಥರು ಪಡೆದುಕೊಳ್ಳವಂತಾಗಲಿ ಎಂದರು.

ಬೇರೆ ಜಾಗ ಕೊಡಿ:
ಕಳೆದ 40 ವರ್ಷಗಳಿಂದ ಮನೆ ಕಟ್ಟಿಕೊಂಡು ವಾಸವಿದ್ದೇವೆ 6 ವರ್ಷಗಳ ಹಿಂದೆ ಸರಕಾರ ಹಕ್ಕುಪತ್ರ ಕೂಡಾ ಕೊಟ್ಟಿದೆ. ಆದರೆ ಈ ಜಾಗ ಖಾಸಗಿಯವರಿಗೆ ಸೇರಿದೆಂದು ನಮಗೆ ಗೊತ್ತಿರಲಿಲ್ಲ. ಹಕ್ಕುಪತ್ರ ನೀಡುವ ವೇಳೆ ಜಾಗ ಖಾಸಗಿಯವರದು ಎಂದು ಸರಕಾರಕ್ಕೆ ಗೊತ್ತಿರಲಿಲ್ಲವೆ? ಇದೀಗ ಖಾಸಗಿಯವರು ಜಾಗ ನಮ್ಮದು ಎಂದು ಹೇಳಿದ್ದಾರೆ, ಹಕ್ಕುಪತ್ರಕ್ಕಾಗಿ ಸರಕಾರಕ್ಕೆ ಶುಲ್ಕವನ್ನೂ ಪಾವತಿಸಿದ್ದೇವೆ. ಸರಕಾರ ಮಾಡಿದ ಎಡವಟ್ಟಿಗೆ ಇಂದು ನಾವು ನೆಲೆ ಇಲ್ಲದಂತಾಗಿ ಶಿಕ್ಷೆ ಅನುಭವಿಸುತ್ತಿದ್ದೇವೆ ನಮಗೆ ಬೇರೆ ಎಲ್ಲಾದರೂ ಮೂಲಭೂತ ಸೌಕರ್ಯ ಸಹಿತ ಸರಕಾರಿ ಜಾಗ ಕೊಡಿ ಎಂದು ಗ್ರಾಮ ಪಂಚಾಯತ್ ನ ದರ್ಖಾಸು ನಿವಾಸಿಗಳು ತಹಸೀಲ್ದಾರ್ ಪುಟ್ಟರಾಜು ಅವರು ಸ್ಥಳಕ್ಕೆ ಭೇಟಿ ನೀಡಿದ ವೇಳೆ ಬೇಡಿಕೆ ಸಲ್ಲಿಸಿದರು.

ಖಾಸಗಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡಿರುವ, ಮೂಲಭೂತ ಸೌಲಭ್ಯ ವಂಚಿತ ಕೊರಗರ ಕಾಲನಿಗೆ ಭೇಟಿ ನೀಡಿದ ತಹಸೀಲ್ದಾರ್ ಅವರು ಖಾಸಗಿ ಜಾಗದಲ್ಲಿ ರಸ್ತೆ, ಕುಡಿಯುವ ನೀರು ಮೊದಲಾದ ಮೂಲಭೂತ ಸೌಲಭ್ಯ ಒದಗಿಸಲು ಕಷ್ಟ ಸಾಧ್ಯ ಸರಕಾರ ನೀಡುವ ಜಾಗಕ್ಕೆ ಸ್ಥಳಾ0ತರ ವಾಗುವಂತೆ ಸೂಚಿಸಿದಾಗ, ನಾವು ಇಲ್ಲಿಂದ ಬೇರೆ ಎಲ್ಲಿಗೂ ಹೋಗುವುದಿಲ್ಲ ಎಂದ ನಿವಾಸಿಗಳು ನಮಗೆ ಇಲ್ಲಿಗೆ ರಸ್ತೆ ನಿರ್ಮಿಸಿ ಕೊಡಿ ಎಂದು ಒತ್ತಾಸಿದರು. ಈ ಬಗ್ಗೆ ಮಾಧ್ಯಮಗಳ ಜತೆ ಮಾತನಾಡಿದ ತಹಸೀಲ್ದಾರ್ ಅವರು ಕೊರಗರಿಗೆ ಮನೆ ನಿವೇಶನ ಗುರುತಿಸಿ ಸ್ಥಳಾ0ತರಕ್ಕೆ ಪ್ರಯತ್ನಿಸಲಾಗುವುದು ಅಲ್ಲದೇ ಜನಪ್ರತಿನಿಧಿಗಳ ಮೂಲಕ ಖಾಸಗಿಯವರ ಮನವೊಲಿಸಿ ಕಾಲನಿಗೆ ರಸ್ತೆ ನಿರ್ಮಾಣ ಮಾಡಲು ಪ್ರಯತ್ನಿಸಲಾಗುವುದು ಎಂದರು.ಕಾರ್ಯಕ್ರಮದಲ್ಲಿ ಕಂದಾಯ, ರೇಷನ್ ಕಾರ್ಡ್, ಮೆಸ್ಕಾಂ,ಶಿಕ್ಷಕರ ಕೊರತೆ, ಉಡುಪಿ-ಕಾಸರಗೋಡು 440 ಕೆವಿ ವಿದ್ಯುತ್ ತಂತಿ ಹಾದು ಹೋಗುವ ಸಮಸ್ಯೆಯ ಬಗ್ಗೆ ಗ್ರಾಮಸ್ಥರ ಪ್ರಶ್ನೆಗಳಿಗೆ ಅಧಿಕಾರಿಗಳು ಉತ್ತರಿಸಿದರು.

ಗ್ರಾಮ ವಾಸ್ತವ್ಯದಲ್ಲಿ ಮೆಸ್ಕಾಂ ಮತ್ತು ಕಂದಾಯ ಇಲಾಖೆಗೆ ಸಂಬಂಧಪತ್ತು ಒಟ್ಟು 18 ಅರ್ಜಿ ಸಲ್ಲಿಕೆಯಾಗಿದ್ದು,11 ಅರ್ಜಿಗಳನ್ನು ತಹಸೀಲ್ದಾರರು ಸ್ಥಳದಲ್ಲಿಯೇ ಇತ್ಯರ್ಥಗೊಳಿಸಿದರು. ಉಪಾಧ್ಯಕ್ಷೆ ಪ್ರೇಮ ಪಿಡಿಓ ರಾಜೀವಿ ಡಿ. ನಾಯ್ಕ್, ಪಂಚಾಯತ್ ಸದಸ್ಯರು, ಮಂಗಳೂರು ದಕ್ಷಿಣ ಶಿಕ್ಷಣಾಧಿಕಾರಿ ಈಶ್ವರ್, ಕಣ್ಣೋರಿ ಕ್ಲಸ್ಟರ್ ನ ಪುಷ್ಪಾವತಿ, ಪಂಚಾಯತ್ ಕಾರ್ಯದರ್ಶಿ ಇಸ್ಮಾಯಿಲ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗುರುಪುರ ನಾಡ ಕಚೇರಿಯ ಉಪತಹಸೀಲ್ದಾರ್ ಶಿವಪ್ರಸಾದ್ ಸ್ವಾಗತಿಸಿ ನಿರೂಪಿಸಿದರು.
ಮಂಗಳೂರು ತಾಲೂಕು ಕಚೇರಿಯ ಆದರ್ಶ್, ಕುಮಾರ್ ಟಿಸಿ,ಗುರುಪುರ ಕೈಕಂಬ ಮೆಸ್ಕಾಂ ಜೆಇ ಕೆ.ಟಿ. ಲೋಕೇಶ್, ಆಹಾರ ನಿರೀಕ್ಷಕ ಪ್ರಕಾಶ್,ಕೃಷಿ ಅಧಿಕಾರಿ ಕುಲಕರ್ಣಿ,ಅರಣ್ಯ ಇಲಾಖೆಯ ದಿವಾಕರ ಎಂ.ಎಂ.,ಗುರುಪುರ ಕಂದಾಯ ನಿರೀಕ್ಷಕ ಪೂರ್ಣಚಂದ್ರ ಗ್ರಾಮಕರಣಿಕರುಗಳಾದ ಮುತ್ತಪ್ಪ.ಬಿ. ಯಮುನಪ್ಪ ಮತ್ತು ಪವಿತ್ರಾ.ಕೊಂಪದವು ಆರೋಗ್ಯ ಕೇಂದ್ರದ ಡಾ. ಚೈತನ್ಯ, ಮತ್ತು ಆಶಾ ಕಾರ್ಯಕರ್ತೆಯರು, ಕಂದಾಯ ಹಾಗೂ ಪಂಚಾಯತ್ ಸಿಬ್ಬಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.