ಬಂಟ್ವಾಳ: ಗ್ರಾ.ಪಂ.ಅಧಿಕಾರ ಮೊಟಕು ೧೮ರಂದು ಕಾಂಗ್ರೆಸ್ ಪ್ರತಿಭಟನೆ
ಬಂಟ್ವಾಳ: ರಾಜ್ಯದಲ್ಲಿ ಅಧಿಕಾರ ವಿಕೇಂದ್ರೀಕರಣಕ್ಕೆ ಬದಲಾಗಿ ಕೇಂದ್ರೀಕರಣಗೊಳಿಸಿ ಶೇ ೪೦ ಕಮಿಷನ್ ಪಡೆಯಲು ಹೊರಟಿರುವ ಬಿಜೆಪಿ ಸರ್ಕಾರವು ಗ್ರಾಮ ಪಂಚಾಯಿತಿ ಅಧ್ಯಕ್ಷರ ಅಧಿಕಾರ ಮೊಟಕುಗೊಳಿಸಿ ಅಧಿಕಾರಿಗಳ ಮೂಲಕ ಆಡಳಿತ ನಡೆಸಲು ಮುಂದಾಗಿದೆ. ಈ ಷಡ್ಯಂತ್ರ ವಿರುದ್ಧ ಇದೇ ೧೮ರಂದು ಬೆಳಿಗ್ಗೆ ೧೦ ಗಂಟೆಗೆ ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಬಿ.ಸಿ.ರೋಡು ಆಡಳಿತ ಸೌಧ ಎದುರು ಕಾಂಗ್ರೆಸ್ ಬೃಹತ್ ಪ್ರತಿಭಟನೆ ನಡೆಸಲಿದೆ ಎಂದು ರಾಜೀವಗಾಂಧಿ ಪಂಚಾಯತ್ ರಾಜ್ ಸಂಘಟನೆ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಹೇಳಿದ್ದಾರೆ.
ಬಿ.ಸಿ.ರೋಡು ಕಾಂಗ್ರೆಸ್ ಕಚೇರಿಯಲ್ಲಿ ಅ.14ರಂದು ಶುಕ್ರವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಅಧಿಕಾರ ವಿಕೇಂದ್ರೀಕರಣ ವಿರೋಧಿಸುವ ಬಿಜೆಪಿ ಸರ್ಕಾರವು ಗ್ರಾಮ ಪಂಚಾಯಿತಿ ಸದಸ್ಯರನ್ನೇ ವಜಾಗೊಳಿಸಲು ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಳ್ಳಲು ಮುಂದಾಗಿದೆ. ಪ್ರಧಾನಿ ನರೇಂದ್ರ ಮೋದಿ ಭೇಟಿ ಮತ್ತು ಸಚಿವರ ಕಾರ್ಯಕ್ರಮಕ್ಕೆ ಜನರನ್ನು ಕರೆತರಲು ಗ್ರಾ.ಪಂ.ಸಿಬ್ಬಂದಿಗಳನ್ನು ಬಳಸಿಕೊಳ್ಳುತ್ತಿದೆ ಎಂದು ಅವರು ಆರೋಪಿಸಿದರು.
ಈ ನಡುವೆ ರಾಜ್ಯದಲ್ಲಿ ಪಂಚಾಯಿತಿ ರಾಜ್ ಸಚಿವರೇ ಇಲ್ಲದಿರುವುದು ನಾಚಿಕೆಗೇಡು. ಬಂಟ್ವಾಳ ಕ್ಷೇತ್ರದಲ್ಲಿ ಗ್ರಾಮ ಪಂಚಾಯಿತಿ ನೀಡುವ ವಸತಿ ಆದೇಶಪತ್ರ ಬಿ.ಸಿ.ರೋಡಿಗೆ ಕರೆಸಿ ಶಾಸಕರು ವಿತರಿಸುತ್ತಿರುವುದು ವಿಪರ್ಯಾಸ. ಈ ಹಿಂದೆ ನೂರಾರು ವಸತಿ ನೀಡುತ್ತಿದ್ದ ಪ್ರತೀ ಪಂಚಾಯಿತಿಗೆ ಕಳೆದ ಮೂರೂವರೆ ವರ್ಷದಲ್ಲಿ ಕೇವಲ ೨೦ ವಸತಿ ಮಾತ್ರ ಮಂಜೂರಾಗಿದೆ ಎಂದು ಅವರು ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್ ಮತ್ತು ಸುದೀಪ್ ಕುಮಾರ್ ಶೆಟ್ಟಿ, ಅಬ್ಬಾಸ್ ಆಲಿ, ಜಗದೀಶ ಕೊಯಿಲ, ಸಂದೇಶ ಶೆಟ್ಟಿ ಇದ್ದರು.