Published On: Thu, Oct 13th, 2022

ತೆಂಕಪಡಪವು ಎಂಆರ್‌ಎಫ್ ಘಟಕದ ವಿರುದ್ಧ ಧ್ವನಿ ಎತ್ತಿದವರ ಅಹವಾಲು ಸ್ವೀಕರಿಸಿದ ಜಿಲ್ಲಾಧಿಕಾರಿ ಜನರ ಭೀತಿ ನಿವಾರಣೆ, ಪರಿಸರ ಸಂರಕ್ಷಣೆಗೆ ಸೂಕ್ತ ಕ್ರಮ : ಡೀಸಿ ಭರವಸೆ


ಕೈಕಂಬ : ರಾಜ್ಯ ಹೈಕೋರ್ಟ್ ನಿರ್ದೇಶನದನ್ವಯ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ. ವಿ ಅವರು ಅ.12ರಂದು ಬುಧವಾರ ಎಡಪದವು ಪಂಚಾಯತ್ ವ್ಯಾಪ್ತಿಯ ತೆಂಕ ಎಡಪದವು ಗ್ರಾಮದ ಬ್ರಿಂಡೇಲ್ ಎಂಬಲ್ಲಿ ಸುಮಾರು ೪ ಎಕ್ರೆ ಜಾಗದಲ್ಲಿ ೨.೫ ಕೋಟಿ ರೂ ವೆಚ್ಚದಲ್ಲಿ ನಿಮಾಣಗೊಳ್ಳುತ್ತಿರುವ ಒಣ ಕಸ ವಿಲೇವಾರಿ ಘಟಕ(ಅಥವಾ ಎಂಆರ್‌ಎಫ್-ಮೆಟೀರಿಯಲ್ ರಿಕವರಿಂಗ್ ಫೆಸಿಲಿಟಿ) ಪ್ರದೇಶಕ್ಕೆ ಭೇಟಿ ನೀಡಿ ಸ್ಥಳೀಯ ನಿವಾಸಿಗರು ಹಾಗೂ ರೈತರ ಅಹವಾಲು ಸ್ವೀಕರಿಸಿ, ಘಟಕ ನಿರ್ಮಾಣ ಹಿನ್ನೆಲೆಯಲ್ಲಿ ಸ್ಥಳೀಯರಲ್ಲಿ ಉಂಟಾಗಿರುವ ಭೀತಿ ಮತ್ತು ಗೊಂದಲ ನಿವಾರಿಸುವುದಾಗಿ ಭರವಸೆ ನೀಡಿದರು.

ಸ್ಥಳೀಯ ನಿವಾಸಿ ಜಯಚಂದ್ರ ಅವರು ಮಾತನಾಡಿ, ಕಡಿದಾದ ಇಳಿಜಾರು ಪ್ರದೇಶವಾದ ಇಲ್ಲಿ ಎಂಆರ್‌ಎಫ್ ಘಟಕ ನಿರ್ಮಿಸುವುದರಿಂದ ಕೆಳ ಪ್ರದೇಶದ ನಿವಾಸಿಗರಿಗೆ ತೀವ್ರ ತೊಂದರೆ ಉಂಟಾಗಲಿದೆ. ಮಳೆಗಾಲದಲ್ಲಿ ಘಟಕ ನಿರ್ವಹಣೆಯಲ್ಲಿ ಉಂಟಾಗಬಹುದಾದ ನ್ಯೂನತೆಗಳಿಂದ ಕೊಳಚೆ ನೀರು ಹರಿದು ಸುತ್ತಲ ಪ್ರದೇಶದ ಅಂತರ್ಜಲ ಕಲುಷಿತಗೊಳ್ಳಲಿದೆ. ಹಾಗಾಗಿ ಈ ಘಟಕ ಬೇರೆಡೆಗೆ ಸ್ಥಳಾಂತರಿಸಿದರೆ ಉತ್ತಮ ಎಂದರು.

ಸ್ಥಳೀಯ ಮಹಿಳೆ ಮತ್ತು ರೈತ ಮುಖಂಡರಾದ ಮನೋಹರ ಶೆಟ್ಟಿ, ದಯಾನಂದ ಶೆಟ್ಟಿ ಹಾಗೂ ಶೇಖ್ ಅಬ್ದುಲ್ಲ ಮಾತನಾಡಿ, ಘಟಕಕ್ಕೆ ಹತ್ತಿರ ಅವೈಜ್ಞಾನಿಕ ರೀತಿಯಲ್ಲಿ ಕಾರ್ಯಾಚರಿಸುತ್ತಿರುವ ಜಲ್ಲಿ ಕಲ್ಲಿನ ಕೋರೆಯೊಂದಿದ್ದು, ಘಟಕದ ಎದುರಿಂದ ಹಾದು ಹೋಗುವ ರಸ್ತೆಯಲ್ಲಿ ಕೋರೆಯಿಂದ ಬೃಹತ್ ಲಾರಿಗಳಲ್ಲಿ ಭಾರೀ ಪ್ರಮಾಣದಲ್ಲಿ ಜಲ್ಲಿ ಸಾಗಾಟವಾಗುತ್ತಿದೆ. ಇದರಿಂದ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಕೋರೆಯಲ್ಲಿ ಭಾರೀ ಪ್ರಮಾಣದ ಸ್ಫೋಟ ನಡೆಸಲಾಗುತ್ತಿದ್ದು, ಇದರಿಂದ ಎಲ್ಲೆಡೆ ಧೂಳು ಮತ್ತು ಶಬ್ದ ಮಾಲಿನ್ಯ ಹೆಚ್ಚಾಗಿದೆ. ಆದ್ದರಿಂದ ಕೋರೆಯ ವಿರುದ್ಧ ಕ್ರಮ ಅತ್ಯಗತ್ಯ ಎಂದರು.

ಸ್ಥಳೀಯರ ದೂರು ಆಲಿಸಿದ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ. ವಿ. ಮಾತನಾಡಿ, ಆಯಾಯ ಊರುಗಳ ಕಸ ಆಯಾಯ ಊರುಗಳಲ್ಲೇ ವ್ಯವಸ್ಥಿತ ಹಾಗೂ ವೈಜ್ಞಾನಿಕವಾಗಿ ವಿಲೇವಾರಿ ಆಗಬೇಕು. ಒಂದು ಊರಿನ ಕಸೆ ಮತ್ತೊಂದು ಊರಿಗೆ ಹೋಗಬಾರದು ಎಂಬ ಸರ್ಕಾರದ ದೂರಾಲೋಚನೆ ಹಿನ್ನೆಲೆಯಲ್ಲಿ ಎಂಆರ್‌ಎಫ್ ಘಟಕ ನಿರ್ಮಾಣಗೊಳ್ಳುತ್ತಿದೆ. ಜನವಸತಿ ಇಲ್ಲದ ಪ್ರದೇಶದಲ್ಲಿ ಘಟಕ ನಿರ್ಮಾಣಗೊಳ್ಳುತ್ತಿರುವುದು ಸಮಾಧಾನಕರ ಸಂಗತಿ ಮತ್ತು ಯಾರೂ ಭೀತಿಗೊಳ್ಳಬೇಕಿಲ್ಲ ಎಂದರು.

ಸ್ಥಳೀಯರಲ್ಲಿ ಘಟಕದ ಬಗ್ಗೆ ವಿನಾ ಕಾರಣ ಭಯ ಆವರಿಸಿದೆ. ಒಂದೊಮ್ಮೆ ಭವಿಷ್ಯದಲ್ಲಿ ಸುತ್ತಲ ಪರಿಸರದಲ್ಲಿ ಅಂತರ್ಜಲ, ಕೃಷಿ, ತೋಟಗಾರಿಕೆಗೆ ಎಂಆರ್‌ಎಫ್ ಘಟಕದಿಂದ ತೊಂದರೆ ಉಂಟಾಗುತ್ತಿದೆ ಅಥವಾ ನೀರು ಕಲುಷಿತಗೊಳ್ಳುತ್ತಿದೆ ಎಂಬ ದೂರುಗಳು ಬಂದಲ್ಲಿ ತಕ್ಷಣವೇ ಸಂಬಂಧಪಟ್ಟ ಇಲಾಖೆಗಳಿಂದ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ಜಿಲ್ಲಾಧಿಕಾರಿಯವರು, ಸುಖಾಸುಮ್ಮನೆ ಘಟಕಕ್ಕೆ ವಿರೋಧ ಬೇಡ ಎಂದರು.

ಬಾಕ್ಸ್ :- ಅವೈಜ್ಞಾನಿಕ ಕೋರೆಗೆ ಅವಕಾಶವಿಲ್ಲ : ಡೀಸಿ
ನಿರ್ದಿಷ್ಟ ಮಾನದಂಡದನ್ವಯ ಕಲ್ಲು ಸ್ಫೋಟ, ಜಲ್ಲಿ ಸಾಗಾಟ, ರಸ್ತೆ ನಿರ್ವಹಣೆ ಮತ್ತು ಶಬ್ದ ಮಾಲಿನ್ಯ ನಿಯಂತ್ರಣದಲ್ಲಿರಬೇಕು. ಆದರೆ ಪ್ರಸಕ್ತ ಎಂಆರ್‌ಎಫ್ ಘಟಕ ಹತ್ತಿರದಲ್ಲಿ ಅವೈಜ್ಞಾನಿಕವಾಗಿ ಕಾರ್ಯಾಚರಿಸುತ್ತಿದೆ ಎನ್ನಲಾದ ಜಲ್ಲಿ ಕಲ್ಲಿನ ಕೋರೆಯ ವಿರುದ್ಧ ಕ್ರಮ ಜರುಗಿಸಲು ಹಿಂದೇಟು ಹಾಕುವುದಿಲ್ಲ. ಕಲ್ಲಿನ ಕೋರೆಯಲ್ಲಿ ನಡೆಯುತ್ತಿರುವ ಸ್ಫೋಟ, ಜಲ್ಲಿ ಧೂಳು, ಶಬ್ದ ಮಾಲಿನ್ಯ ಮತ್ತು ರಸ್ತೆ ನಿರ್ವಹಣೆ ಬಗ್ಗೆ ತಕ್ಷಣ ಪರಿಶೀಲನೆ ನಡೆಸಬೇಕು ಎಂದು ಸ್ಥಳದಲ್ಲಿದ್ದ ಮಂಗಳೂರು ತಾಲೂಕು ತಹಶೀಲ್ದಾರ್ ಪುಟ್ಟರಾಜು ಹಾಗೂ ಅವರ ತಂಡಕ್ಕೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಎಡಪದವು ಗ್ರಾಮ ಪಂಚಾಯತ್ ಅಧ್ಯಕ್ಷ ಸುಕುಮಾರ ದೇವಾಡಿಗ ಮಾತನಾಡಿ, ಎಂಆರ್‌ಎಫ್ ಘಟಕದಲ್ಲಿ ೫೧ ಗ್ರಾಮಗಳ ಒಣ ಕಸ ನಿರ್ವಹಣೆ ಜೊತೆಗೆ ಸ್ಥಳೀಯವಾಗಿ ಶೇ ೮೦ರಷ್ಟು(೩೦ ಮಂದಿಗೆ) ಮಂದಿಗೆ ಕೆಲಸ ಸಿಗಲಿದೆ. ಜನವಸತಿ ಇಲ್ಲದ ಜಾಗದಲ್ಲಿ ಘಟಕ ನಿರ್ಮಾಣಗೊಳ್ಳುತ್ತಿದ್ದು, ಜನರು ಆತಂಕಗೊಳ್ಳುವ ಅಗತ್ಯವಿಲ್ಲ. ಪ್ಲಾಸ್ಟಿಕ್ ಉತ್ಪಾದನೆಗೆ ತಡೆ ಹೇರುವುದು ಕಷ್ಟವಾಗಿರುವ ವರ್ತಮಾನದಲ್ಲಿ, ಎಂಆರ್‌ಎಫ್ ಘಟಕವು ರೀಸೈಕ್ಲಿಂಗ್ ಪರ್ಯಾಯ ಮಾರ್ಗವಾಗಲಿದೆ ಎಂದರು.

ಡೀಸಿ ಜೊತೆಯಲ್ಲಿ ಜಿಪಂ ಸಿಇಒ ಡಾ. ಕುಮಾರ್, ತಾಪಂ ಇಒ ಲೋಕೇಶ್, ಮಂಗಳೂರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯನಿರ್ವಹಣಾ ಇಂಜಿನಿಯರ್ ನರೇಂದ್ರ ಬಾಬು, ಸಹಾಯಕ ಮುಖ್ಯ ಇಂಜಿನಿಯರ್ ನರೇಂದ್ರ, ಉಪ ತಹಶೀಲ್ದಾರ್ ಶಿವಪ್ರಸಾದ್, ಎಡಪದವು ಪಂಚಾಯತ್ ಪಿಡಿಒ ರಾಜೀವಿ ಡಿ. ನಾಯ್ಕ್, ಕಾರ್ಯದರ್ಶಿ ಇಸ್ಮಾಯಿಲ್, ಕಿರಿಯ ಇಂಜಿನಿಯರ್ ಪ್ರದೀಪ್, ಸ್ವಚ್ಛ ಭಾರತ ಮಿಷನ್‌ನ ನವೀನ್, ಪವನ್, ಮೂಡಾದ ಮಾಜಿ ಅಧ್ಯಕ್ಷ ಅಡ್ವಕೇಟ್ ಸುರೇಶ್ ಬಲ್ಲಾಲ್, ಗಣೇಶ್ ಪಾಕಾಜೆ, ಪ್ರಸಾದ್ ಎಡಪದವು, ರೈತ ಮುಖಂಡರು, ಸ್ಥಳೀಯರು ಉಪಸ್ಥಿತರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter