ಕೊಂಡೆವೂರು ಮಠದಲ್ಲಿ ಉಚಿತ ಕನ್ನಡಕ ವಿತರಣೆ
ಮುಂಬಯಿ : ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠದ ವಿಂಶತಿ ವರ್ಷದ ಅಂಗವಾಗಿ ಇತ್ತೀಚಿಗೆ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಗಳೂರು ಇವರ ಸಹಯೋಗದಲ್ಲಿ ಆಯೋಜಿಸಿದ ಉಚಿತ ನೇತ್ರ ತಪಾಸಣಾ ಶಿಬಿರ ನಡೆಸಲಾಗಿತ್ತು.
ಭಾಗವಹಿಸಿದ್ದ 306 ಮಂದಿಯಲ್ಲಿ 206 ಜನರಿಗೆ ಅ.12ರಂದು ಬುಧವಾರ “ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮ” ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ದಿವ್ಯಸಾನ್ನಿಧ್ಯ ವಹಿಸಿದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಅವರು ತಮ್ಮ ಆಶೀರ್ವಚನದಲ್ಲಿ “ಬಾಹ್ಯ ಕಣ್ಣು ಮಾತ್ರವಲ್ಲದೆ ಹೃದಯದ ಕಣ್ಣನ್ನೂ ತೆರೆದು ಜನರ ಸೇವೆ ಮಾಡಬೇಕು” ಎನ್ನುತ್ತ, ಪ್ರಸಾದ್ ನೇತ್ರಾಲಯದ ಸೇವಾಕಾರ್ಯವನ್ನು ಪ್ರಶಂಸಿದರು.
ಮುಖ್ಯ ಅತಿಥಿಗಳಾಗಿ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಗಳೂರು ಇದರ ವೈದ್ಯಕೀಯ ನಿರ್ದೇಶಕ ನಾಡೋಜ ಡಾ.ಕೃಷ್ಣಪ್ರಸಾದ್ ಕೂಡ್ಲು ಅವರು ಮುಖ್ಯ ಅತಿಥಿಯಾಗಿದ್ದು ಜನರ ಕಣ್ಣಿನ ಆರೋಗ್ಯ ಕುರಿತು ಶ್ರೀಮಠದ ಕಾಳಜಿ ಬಗ್ಗೆ ಸಂತಸ ವ್ಯಕ್ತಪಡಿಸಿದರರು. ನೇತ್ರಾಲಯದ ಸಾರ್ವಜನಿಕ ಸಂಪರ್ಕಾಧಿಕಾರಿ ಸೈಯದ್ ಮಕ್ಬುಲ್ ಉಪಸ್ಥಿತರಿದ್ದು ನೇತ್ರಶಿಬಿರದಲ್ಲಿ 56 ಮಂದಿಗೆ ಕಣ್ನಿನ ಪೊರೆ ಶಸ್ತ್ರಚಿಕಿತ್ಸೆಗೆ ಸಲಹೆ ನೀಡಿದ್ದು, ಈಗಾಗಲೇ ಅವರಲ್ಲಿ 23 ಮಂದಿಗೆ ಶಸ್ತ್ರಚಿಕಿತ್ಸೆ ನಡೆಸಿದರು.
ಜಗದ್ಗುರು ಶ್ರೀ ನಿತ್ಯಾನಂದ ಮಹಾಪೀಠಮ್ ಚಾರಿಟೇಬಲ್ ಟ್ರಸ್ಟ್ ನ ವಿಶ್ವಸ್ಥ ಶ್ರೀ ಶಶಿಧರ ಶೆಟ್ಟಿ ಗ್ರಾಮಚಾವಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸದ್ಗುರು ಶ್ರೀ ನಿತ್ಯಾನಂದ ವಿದ್ಯಾಪೀಠದ ವಿದ್ಯಾರ್ಥಿನಿಯರು ಪ್ರಾರ್ಥನೆಯನ್ನಾಡಿದರು. ರಾಮಚಂದ್ರ ಚೆರುಗೋಳಿ ಸ್ವಾಗತಿಸಿ ಪ್ರಸ್ತಾವನೆಗೈದರು. ಸದಾಶಿವ ಮೋಂತಿಮಾರು ನಿರೂಪಿಸಿದರು. ಡಾ.ಗೋಪಿನಾಥ್ ವಂದಿಸಿದರು.