ಉಳ್ಳಾಲ: ಸೋಮೇಶ್ವರ ಸಮುದ್ರ ತೀರದ ರುದ್ರ ಪಾದೆಯಿಂದ ಅಚಾನಕಾಗಿ ಸಮುದ್ರಕ್ಕೆ ಬಿದ್ದ ವ್ಯಕ್ತಿಯನ್ನ ಸ್ಥಳದಲ್ಲೇ ಇದ್ದ ವಿದೇಶಿ ಪ್ರವಾಸಿಗನೊಬ್ಬ ರಕ್ಷಿಸಿದ ಘಟನೆ ಅ.12ರಂದು ಬುಧವಾರ ನಡೆದಿದ್ದು, ಘಟನೆಯಲ್ಲಿ ಅಸ್ವಸ್ಥಗೊಂಡ ವ್ಯಕ್ತಿಗೆ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಸೋಮೇಶ್ವರ ರೈಲ್ವೇ ನಿಲ್ದಾಣದ ಬಳಿಯ ಬಾಡಿಗೆ ಮನೆ ನಿವಾಸಿ ಪ್ರವೀಣ್ ಚೆಟ್ಟಿಯಾರ್(41) ರಕ್ಷಿಸಲ್ಪಟ್ಟ ವ್ಯಕ್ತಿ. ಇಂದು ಮದ್ಯಾಹ್ನದ ವೇಳೆ ಪ್ರವೀಣ್ ಅವರು ಸೋಮೇಶ್ವರ ಕಡಲ ತೀರದ ರುದ್ರ ಪಾದೆಯಲ್ಲಿ ವಿಹರಿಸುತ್ತಿದ್ದ ವೇಳೆ ಸಮುದ್ರಕ್ಕೆ ಬಿದ್ದಿದ್ದಾರೆ.ಈ ವೇಳೆ ಅಲ್ಲೇ ಮೀನಿಗೆ ಗಾಳ ಹಾಕುತ್ತಿದ್ದ ಸ್ವೀಡನ್ ದೇಶದ ಪ್ರವಾಸಿಗ ಆಡಮ್ ಎಂಬಾತ ತಕ್ಷಣ ಸಮುದ್ರಕ್ಕೆ ಧುಮುಕಿ ಪ್ರವೀಣನ್ನ ಮೇಲಕ್ಕೆತ್ತಿ ಪ್ರಥಮ ಚಿಕಿತ್ಸೆ ನೀಡಿದ್ದಾರೆ.

ನೀರು ಕುಡಿದು ತೀವ್ರ ಅಸ್ವಸ್ಥಗೊಂಡಿದ್ದ ಪ್ರವೀಣನ್ನು ಸ್ಥಳೀಯರೆಲ್ಲರು ಸೇರಿ ಮಂಗಳೂರಿನ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಿದ್ದಾರೆ. ಪ್ರವೀಣ್ ಅವರು ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ತಿಳಿದು ಬಂದಿದ್ದು ಅವರಿಗೆ ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಪ್ರವೀಣ್ ನ ಪ್ರಾಣ ರಕ್ಷಿಸಿದ ವಿದೇಶಿ ಪ್ರಜೆ ಆಡಮ್ ಅವರ ಕಾರ್ಯದ ಬಗ್ಗೆ ಸ್ಥಳೀಯರು ಮತ್ತು ಪೊಲೀಸರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಂದೂವರೆ ತಿಂಗಳ ಭಾರತ ದೇಶದ ಪ್ರವಾಸದಲ್ಲಿರುವ ಆಡಮ್ ಅವರು ಚೆನ್ನೈ ಇನ್ನಿತರ ಬೀಚ್ ಗಳಿಗೆ ಭೇಟಿ ನೀಡಿದ್ದು ನಿನ್ನೆ ಸೋಮೇಶ್ವರ ಬೀಚ್ಗೆ ಆಗಮಿಸಿದ್ದರಂತೆ.

ಸೋಮೇಶ್ವರ ಬೀಚಲ್ಲಿ ಆತ್ಮಹತ್ಯೆ,ಅವಘಡಗಳು ನಿರಂತರ ನಡೆಯುತ್ತಿರುತ್ತದೆ.ಅನೇಕ ಸಂದರ್ಭಗಳಲ್ಲಿ ಇಲ್ಲಿ ಸಮುದ್ರ ಪಾಲಾಗುತ್ತಿದ್ದವರನ್ನ ಕರಾವಳಿ ಕಾವಲು ಪಡೆಯ ಜೀವ ರಕ್ಷಕ ಸಿಬ್ಬಂದಿಗಳು ರಕ್ಷಿಸಿದ್ದಾರೆ.ಆದರೆ ಇತ್ತೀಚಿನ ದಿನಗಳಲ್ಲಿ ಪ್ರವಾಸೋದ್ಯಮ ಇಲಾಖೆಯು ಈ ಪ್ರದೇಶದಲ್ಲಿ ಖಾಯಂ ಜೀವರಕ್ಷಕ ಸಿಬ್ಬಂದಿಗಳನ್ನ ನೇಮಿಸದೆ ದಿವ್ಯ ನಿರ್ಲಕ್ಷ ವಹಿಸಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

