ಹಿಂದುಗಳ ಭಾವನಾಕೇಂದ್ರ ಅಯೋಧ್ಯೆಯ ನೂತನ ಮಂದಿರದಲ್ಲಿ ಶ್ರೀ ರಾಮದೇವರ ಪ್ರತಿಷ್ಠೆ ನೀಲ ಮೈಬಣ್ಣದ ಅಮೃತಶಿಲೆಯ ಶ್ರೀರಾಮದೇವರ ಪ್ರತಿಮೆಗೆ ಸಿದ್ಧತೆ
ಮುಂಬಯಿ: ಜನವರಿ ೨೦೨೪ರ ಮಕರ ಸಂಕ್ರಾಂತಿ ಮುಗಿಸಿ ಉತ್ತರಾಯಣದ ಪರ್ವಕಾಲದಲ್ಲಿ ಎಲ್ಲಾ ಹಿಂದುಗಳ ಭಾವನೆಯ ಕ್ಷೇತ್ರವಾಗಿರುವ ಅಯೋಧ್ಯೆಯಲ್ಲಿನ ನೂತನ ಮಂದಿರದಲ್ಲಿ ಶ್ರೀರಾಮಚಂದ್ರ ದೇವರ ಪ್ರತಿಷ್ಠಾ ಕಾರ್ಯಕ್ರಮ ನಡೆಯಲಿದೆ.
ಈಗಾಗಲೇ ಭೂಮಟ್ಟದಿಂದ ತಳಮಟ್ಟದ ವರೇಗೆ ಸುಮಾರು ೧೬ ಅಡಿ ಎತ್ತರ ತನಕ ಮಂದಿರ ಪೀಠದ ರಚನೆ ನಡೆದಾಗಿದೆ. ಇನ್ನು ಗೋಡೆ, ಕಂಬ ಮೇಲೇರಿ ಮಂದಿರದ ನಿರ್ಮಾಣ ಆಗಬೇಕಾಗಿದ್ದು ಅದರ ಕಾರ್ಯವೂ ಭರದಿಂದ ಕಾರ್ಯದ ಪ್ರಗತಿ ಉತ್ತಮವಾಗಿ ಸಾಗುತ್ತಿದೆ. ರಾಮದೇವರ ಪ್ರತಿಮೆ ಪ್ರತಿಷ್ಠಾಪನಾ ವಿಚಾರವಾಗಿ ಅದು ಹೇಗೆ ಇರಬೇಕೆಂದು ಇತ್ತೀಚಿನ ಸಭೆಯಲ್ಲಿ ಯೋಚಿಸಲಾಗಿದ್ದು ಜನವರಿಯಲ್ಲಿ ಮೂರ್ತಿ ಪ್ರತಿಷ್ಠೆ ನಡೆಯಲಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನ ಟ್ರಸ್ಟಿ ಹಾಗೂ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಧೀಶ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ತಿಳಿಸಿದರು.
ಕಳೆದ ಭಾನುವಾರ ಮುಂಬಯಿ ಸಾಂತಾಕ್ರೂಜ್ ಪೂರ್ವದಲ್ಲಿನ ಪೇಜಾವರ ಮಠದಲ್ಲಿ ಪತ್ರಕರ್ತರನ್ನುದ್ದೇಶಿಸಿ ಮಾತನಾಡಿದ ಶ್ರೀಗಳ ಸಾಮಾನ್ಯವಾಗಿ ಉತ್ತರ ಭಾರತದಲ್ಲಿ ಬಿಳಿಯದ್ದಾಗಿರತಕ್ಕಂತಹ ಶಿಲೆಯಿಂದ ದೇವರ ಪ್ರತಿಮೆ ನಿರ್ಮಾಣ ಮಾಡುತ್ತ್ತಾರೆ. ಆದರೆ ದಕ್ಷಿಣ ಭಾರತದಲ್ಲಿ ಕರಿಶಿಲೆಯಿಂದ ಪ್ರತಿಮೆ ಮಾಡುತ್ತಾರೆ. ಆದರೆ ಅಯೋಧ್ಯೆಯ ರಾಮದೇವರ ಪ್ರತಿಮೆ ಯಾವತರಹ ಇರಬೇಕು ಅನ್ನುವ ಮಾತು ಬಂದಾಗ ಕೊನೆಗೂ ತೀರ್ಮಾನಿಸಿದಂತೆ ರಾಮನ ಮೈಬಣ್ಣ ನೀಲ ಮೈಬಣ್ಣ.
ಹಾಗಾಗಿ ನೀಲಹೊತ್ತಿರುವ ಅಮೃತಶಿಲೆಯಿಂದ ರಾಮದೇವರ ಪ್ರತಿಮೆ ಮಾಡಬೇಕು ಅನ್ನುವ ನಿರ್ಧಾರವಾಗಿದೆ. ಸುಮಾರು ಎಂಟು ತಿಂಗಳುಗಳ ಕಾಲ ಆ ಪುಸ್ಥಳಿಯ ರಚನೆಯ ಕಾರ್ಯವಿದೆ. ಹಾಗಾಗಿ ತತ್ಪೂರ್ವದಲ್ಲಿ ಅಂದರೆ ಈಗ ಹೆಚ್ಚು ಕಾಲ ತಡವಿಲ್ಲದೆ ಆ ಪ್ರತಿಮೆಗೆ ಬೇಕಾಗಿರತಕ್ಕಂತಹ ಶಿಲೆಯ ಹುಡುಕಾಟದ ಕಾರ್ಯ ನಡೆಯುತ್ತಿದೆ. ಅದು ಪ್ರತಿಷ್ಠಾಕಾಲಕ್ಕಿಂತ ಎರಡು ತಿಂಗಳ ಮುನ್ನವೇ ಸಿದ್ಧವಾಗಲಿದೆ. ದೇವರ ಪ್ರತಿಮೆ ಮಾತ್ರವಲ್ಲ ಪರಿಪೂರ್ಣ ಮಂದಿರವೇ ಭಕ್ತರ ದೇಣಿಗೆ, ಸೇವೆಯ ಕೊಡುಗೆಯಾಗಿದೆ. ಈ ಭವ್ಯ ಧಾರ್ಮಿಕ ಸಡಗರದಲ್ಲಿ ಮುಂಬಯಿವಾಸಿ ಎಲ್ಲರೂ ಭಕ್ತಿಪೂರ್ವಕವಾಗಿ ಭಾಗವಹಿಸಬೇಕು. ಅದಕ್ಕಾಗಿ ಈಗಲೇ ಪೂರ್ವ ಸಿದ್ಧತೆ ನಡೆಸಿ ಸಜ್ಜಾಗಬೇಕು ಎಂದರು.
ಉತ್ತರ ಭಾರತದಲ್ಲಿನ ಪ್ರಾದೇಶಿಕ ಸಂಪ್ರದಾಯಗಳಂತೆಯೇ ಪೂಜಾ ವಿಧಿವಿಧಾನಗಳು ನೆರವೇರಿಸಲ್ಪಡಲಿದ್ದು ಎಲ್ಲಾ ಬ್ರಾಹ್ಮಣ ಪುರೋಹಿತರಿಗೂ ಅವಕಾಶಗಳು ಪ್ರಾಪ್ತಿಸಲಿದೆ ಎಂದೂ ಶ್ರೀಗಳು ತಿಳಿಸಿದರು.
ಸಮಾಜದಲ್ಲಿ ಅನೇಕ ಬಗೆಯ ಆಶಾಂತಿಯ ಕಾರಣವಾಗುವ ಘಟನೆಗಳು ಅಲ್ಲಲ್ಲಿ ನಡೆಯುತ್ತಿರುತ್ತವೆ. ಹಿಂದು ಸಮಾಜ ಯಾವೊತ್ತೂ ಕೂಡಾ ಸವಿಂಧಾನಕ್ಕೆ ವಿರುದ್ಧವಾಗಿ ನಡೆದುಕೊಂಡದ್ದಿಲ್ಲ. ರಾಮ ಮಂದಿರದ ಬೇಡಿಕೆ ಅದು ಅನಾದಿ ಕಾಲದಿಂದ ಇದ್ದರೂ ಕೂಡಾ ಅದನ್ನು ಈಡೇರಿಸಿ ಕೊಂಡದ್ದು ಸವಿಂಧಾನದ ಮೂಲಕವೇ. ಸರ್ವೋಚ್ಛ ನ್ಯಾಯಲಯದ ತೀರ್ಪಿನ ಮೂಲಕವೇ ಅಯೋಧ್ಯೆಯ ಮಂದಿರಕ್ಕೆ ನ್ಯಾಯ ಒದಗಿದೆ. ಹಾಗಾಗಿ ನಾವು ಯಾವೊತ್ತೂ ಸವಿಂಧಾನಕ್ಕೆ ತಲೆಭಾಗಿ ಸಮಾಜವನ್ನು ಕಟ್ಟುವ ಕಾರ್ಯ ಮಾಡುತ್ತೇವೆ. ಇದೇ ರೀತಿಯಲ್ಲಿ ಮುಂದೆಯೂ ಎಲ್ಲರೂ ಕೂಡಾ ಕೈಜೋಡಿಸಬೇಕು. ಯಾರೂ ಕೂಡಾ ದುಡುಕಿನ ಹೆಜ್ಜೆಯನ್ನೀಡಬಾರದು ಎಂದು ಅಪೇಕ್ಷಿಸುತ್ತೇವೆ ಎಂದರು.
ಅಯೋಧ್ಯ ರಾಮಮಂದಿರದ ಹೋರಾಟಗಾರರಾಗಿದ್ದ ಯತಿಕುಲ ಚಕ್ರವರ್ತಿ ಕೃಷ್ಣೈಕ್ಯ ಪೇಜಾವರಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರಿಗೆ ಇಲ್ಲಿ ವಿಶೇಷ ಸ್ಥಾನಮಾನ ಪ್ರಾಪ್ತಿಸಲಿದೆಯೇ ಎಂದು ಕೇಳಿದ ಪ್ರೆಶ್ನೆಗೆ, ಸದ್ಯ ವ್ಯಕ್ತಿಗತವಾಗಿರತಕ್ಕಂತಹ ಯಾವುದೇ ಪ್ರೆಶ್ನೆ ಇಲ್ಲಿಲ್ಲ. ಬದಲಾಗಿ ರಾಮದೇವರ ಮಂದಿರ, ರಾಮಾಭಕ್ತರ ಆಶಯಗಳ ಈಡೇರಿಕೆಗಳಷ್ಟೇ ಸಮಿತಿ ಮುಂದಿವೆ. ಶ್ರೀರಾಮಚಂದ್ರರಿಗೆ ನೇರವಾಗಿ ಸಂಬಂಧ ಪಟ್ಟಂತಹ ವ್ಯತಿಗಳ ಪ್ರತಿಮಾಧಿಗಳ ನಿರ್ಮಾಣವಾಗುತ್ತದೆ. ರಾಮಮಂದಿರದ ಹೋರಾಟದಲ್ಲಿ ಶತಶತಮಾನಗಳಿಂದ ಯಾರೆಲ್ಲಾ ಹೋರಾಡಿದ್ದರೋ ಮುಂದೆಅವರನ್ನೆಲ್ಲಾ ಗುರುತಿಸಿ ನೆನಪಿಸುವಂತಹ ಕಾರ್ಯ ನಡೆಯಲಿದೆ ಎಂದೂ ಪೇಜಾವರ ಶ್ರೀಗಳು ತಿಳಿಸಿದರು.
ಈ ಸಂದರ್ಭದಲ್ಲಿ ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನ ಮುಂಬಯಿ ಗೌರವಾಧ್ಯಕ್ಷ ಡಾ| ಎ.ಎಸ್ ರಾವ್, ಕಾರ್ಯದರ್ಶಿ ಬಿ.ಆರ್ ಗುರುಮೂರ್ತಿ, ಡಾ| ಎಂ.ಸೀತರಾಮ ಆಳ್ವ, ವಿಷ್ಣು ಆಚಾರ್ಯ ಉಡುಪಿ, ಕೃಷ್ಣ ಭಟ್, ಶ್ರೀ ಪೇಜಾವರ ಮಠದ ವ್ಯವಸ್ಥಾಪಕರಾದ ಪ್ರಕಾಶ ಆಚಾರ್ಯ ರಾಮಕುಂಜ, ಡಾ| ರಾಮದಾಸ ಉಪಾಧ್ಯಾಯ ರೆಂಜಾಳ, ವಿದ್ವಾನ್ ಹರಿ ಭಟ್ ಪುತ್ತಿಗೆ, ನಿರಂಜನ್ ಗೋಗ್ಟೆ ಮತ್ತಿತರರು ಉಪಸ್ಥಿತರಿದ್ದರು.