ಮುತ್ತೂರು ಪಂಚಾಯತ್ ಗ್ರಾಮಸಭೆ. ಎಸ್ ಸಿ, ಎಸ್ ಟಿ ಅನುದಾನ ದುರ್ಬಳಕೆ ತಡೆಯಲು ಅಗ್ರಹ
ಕೈಕಂಬ: ಪ್ರಮುಖ ಇಲಾಖೆಗಳ ಗೈರು ಹಾಜರಿಯಿಂದಾಗಿ ಗ್ರಾಮಸ್ಥರ ಅಗ್ರಹದ ಹಿನ್ನೆಲೆಯಲ್ಲಿ ಕಳೆದ ತಿಂಗಳಲ್ಲಿ ರದ್ದಾಗಿದ್ದ ಮುತ್ತೂರು ಗ್ರಾಮ ಪಂಚಾಯತ್ ನ 2022-23 ನೇ ಸಾಲಿನ ಗ್ರಾಮಸಭೆಯು ಪಂಚಾಯತ್ ಅಧ್ಯಕ್ಷ ಸತೀಶ್ ಪೂಜಾರಿ ಬಳ್ಳಾಜೆ ಅವರ ಅಧ್ಯಕ್ಷತೆಯಲ್ಲಿ ಸೆ.19ರಂದು ಸೋಮವಾರ ಇಲ್ಲಿನ ಚರ್ಚ್ ಹಾಲ್ ನಲ್ಲಿ ನಡೆಯಿತು.
ಸಣ್ಣ ನೀರಾವರಿ ಇಲಾಖೆ ಕುಲವೂರು ಗ್ರಾಮದ ಸನ್ನಿ ಕಾಯಿ ಎಂಬಲ್ಲಿ ಪಲ್ಗುಣಿ ನದಿಗೆ 15 ಕೋಟಿ ರೂಪಾಯಿ ವೆಚ್ಚದಲ್ಲಿ ಆಣೆಕಟ್ಟು ನಿರ್ಮಿಸಲಾಗಿದೆ ಎಂದು ದಾಖಲೆಯಲ್ಲಿದೆ ಆದರೆ ಆಣೆಕಟ್ಟು ಮಾತ್ರ ಅಲ್ಲಿ ಇಲ್ಲ ಏನಾಯಿತು 15 ಕೋಟಿ ಎಲ್ಲಿ ಹೋಯಿತು ಅಲ್ಲದೇ ಕದ್ರಾಡಿ ಎಂಬಲ್ಲಿ ನಿರ್ಮಿಸಲಾಗಿದ್ದ ತಡೆಗೋಡೆ ವಾಳಿದ್ದು ಅಲ್ಲಿರುವ ಕಿರು ಸೇತುವೆ ಅಪಾಯದಲ್ಲಿದೆ ಇಲಾಖೆ ಏನು ಕ್ರಮ ಕೈಗೊಂಡಿದೆ ಎಂದು ದಯಾನಂದ ಶೆಟ್ಟಿ ಕುಲವೂರು ಪ್ರಶ್ನಿಸಿದರು ಇದಕ್ಕೆ ಉತ್ತರಿಸಲು ತಡವರಿಸಿದ ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್ ಸನ್ನಿಕಾಯಿಯ ಆಣೆಕಟ್ಟನ್ನು ಬಳ್ಳಾಜೆ ಎಂಬಲ್ಲಿ ನಿರ್ಮಿಸಲಾಗಿದೆ ಎಂದಾಗ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಗ್ರಾಮಸ್ಥರು ಕೆಲವೇ ವ್ಯಕ್ತಿಗಳ ಅನುಕೂಲಕ್ಕಾಗಿ 15 ಕೋಟಿಯ ಆಣೆಕಟ್ಟಿನ ಜಾಗವನ್ನೇ ಬದಲಾಯಿಸಿದ್ದೀರಿ ಸನ್ನಿಕಾಯಿ ಎಂಬಲ್ಲಿ ಆಣೆಕಟ್ಟು ನಿರ್ಮಾಣವಾಗದಿರುವ ಬಗ್ಗೆ ನಿರ್ಣಯ ಕೈಗೊಳ್ಳಬೇಕು ಪ್ರಬಾವಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ದೊಡ್ಡಳಿಕೆ ಎಂಬಲ್ಲಿ ಇರುವ ಆಣೆಕಟ್ಟಿಗೆ ಕೆಲವೇ ಮೀಟರ್ ಕೆಳಗೆ ಇನ್ನೊಂದು ಆಣೆಕಟ್ಟು ನಿರ್ಮಿಸಿದ್ದೀರಿ ಎಂದು ಆರೋಪಿಸಿದರು.
ಮುತ್ತೂರಿನಲ್ಲಿ ನಾಲ್ಕು ವರ್ಷಗಳ ಹಿಂದೆ ಹಕ್ಕುಪತ್ರ ನೀಡಿದ್ದರೂ ಇದುವರೆಗೂ ನಿವೇಶನ ನೀಡಿಲ್ಲ ಇಲ್ಲಿ ಹೆಚ್ಚಾಗಿ ದಲಿತರೇ ವಾಸವಾಗಿದ್ದಾರೆ ಅಲ್ಲದೇ ಡಿಸಿ ಮನ್ನಾ ಜಾಗವನ್ನು ಅತಿಕ್ರಮ ಮಾಡಲಾಗಿದ್ದು ಅದನ್ನು ದಲಿತರಿಗೆ ದೊರೆಯುವಂತೆ ಕ್ರಮ ಕೈಗೊಳ್ಳುವಂತೆ ಹರಿಯಪ್ಪ ಮುತ್ತೂರು ಮತ್ತು ಗೋಪಾಲ್ಮತ್ತು ಹೊನ್ನಯ ಅಟ್ಟೆಪದವು ಒತ್ತಾಯಿಸಿದರು . ಎಸ್ ಸಿ ಮತ್ತು ಎಸ್ ಟಿ ಅನುದಾನದ ದುರುಪಯೋಗವಾಗುತ್ತಿದೆ ಈ ಅನುದಾನವನ್ನು ಬೇರೆ ಯಾವುದೇ ಯೋಜನೆಗಳಿಗೆ ಬಳಕೆ ಮಾಡದಂತೆ ಕ್ರಮ ಕೈಗೊಳ್ಳಬೇಕು ಎಂದು ರವಿ ಅಟ್ಟೆಪದವು ಅಗ್ರಹಿಸಿದರು.
ಪೆನ್ಷನ್ ಪಡೆಯುವ ಒಂಟಿ ಮಹಿಳೆಯರು ಮತ್ತು ಆರ್ಥಿಕವಾಗಿ ಸಬಲರಲ್ಲದ ಮಹಿಳೆಯರೇ ಇರುವ ಮನೆಗಳ ವಿದ್ಯುತ್ ಬಿಲ್ ಪಾವತಿ ತಡವಾದರೆ ವಿದ್ಯುತ್ ಸಂಪರ್ಕ ಕಡಿತ ಮಾಡುವುದು ಸರಿ ಅಲ್ಲ ಅಂತಹವರಿಗೆ ಬಿಲ್ ಪಾವತಿಗೆ ಸಮಯಾವಕಾಶ ನೀಡಬೇಕು ಅಲ್ಲದೇ ಕುಪ್ಪೆಪದವು ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಲೈನ್ ಮ್ಯಾನ್ ಒಬ್ಬರನ್ನು ವರ್ಗಾವಣೆ ಮಾಡಲಾಗಿದೆ ಯಾಕೆ ಎಂದು ಶೇಖರ್ ನೇಲ್ಲಚ್ಚಿಲ್ ಪ್ರಶ್ನಿಸಿದಾಗ ಉತ್ತರಿಸಿದ ಎಡಪದವು ಸೆಕ್ಷನ್ ಆಫೀಸರ್ ವೀರಭದ್ರಪ್ಪ ಬಿಲ್ ಪಾವತಿಗೆ ಸಾಕಷ್ಟು ಸಮಯ ನೀಡಲಾಗುತ್ತಿದೆ ಇಲಾಖೆಯ ನಿಯಮದಂತೆ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗುತ್ತದೆಯೇ ಹೊರತು ಉದ್ದೇಶಪೂರ್ವಕ ಅಲ್ಲ ಎಡಪದವಿನ ಮಾನವ ಹಕ್ಕು ಹೋರಾಟ ಸಮಿತಿ 2018 ರಲ್ಲಿ ಹಲವು ಲೈನ್ ಮ್ಯಾನ್ ಗಳ ವಿರುದ್ದ ಕೆಲವು ಆರೋಪಗಳನ್ನು ಮಾಡಿ ಅವರನ್ನು ವರ್ಗಾವಣೆ ಮಾಡುವಂತೆ ಅಧೀಕ್ಷಕ ಇಂಜಿನಿಯರ್ ರಿಗೆ ದೂರು ನೀಡಿತ್ತು ಅದರಂತೆ ಲೈನ್ ಮ್ಯಾನ್ ಗಳನ್ನು ಸೆಕ್ಷನ್ ಆಫೀಸಿನ ವ್ಯಾಪ್ತಿಯ ಒಳಗಡೆ ವರ್ಗಾವಣೆ ಮಾಡಲಾಗಿದೆ ಎಂದರು.
ಕುಪ್ಪೆಪದವು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶವಪರೀಕ್ಷೆ ಕೊಠಡಿ ಇದ್ದು ಸಿಬ್ಬಂದಿ ಮತ್ತು ಅವಶ್ಯಕ ವ್ಯವಸ್ಥೆ ಮಾಡುವಂತೆ ಗ್ರಾಮಸ್ಥರು ಅಗ್ರಹಿಸಿದ್ದು ಈ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು. ಸಾಂಕ್ರಾಮಿಕ ರೋಗಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಜಾಗೃತಿ ಶಿಬಿರಗಳನ್ನು ನಡೆಸಬೇಕು ಅಲ್ಲದೇ ಪಂಚಾಯತ್ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ಕಸ ಎಸೆಯಲಾಗುತ್ತಿದೆ ಹಾಗೂ ಕೊಳಚೆ ನೀರನ್ನು ಚರಂಡಿಗೆ ಬಿಡಲಾಗುತ್ತಿದೆ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಜೆರಾಲ್ಡ್ ವೇಗಸ್ ಅಗ್ರಹಿಸಿದರು. ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಾಜೇಶ್ ನೋಡಲ್ ಅಧಿಕಾರಿಯಾಗಿದ್ದರು.
ಪಂಚಾಯತ್ ಉಪಾಧ್ಯಕ್ಷೆ ಮಾಲತಿ,ಪಂಚಾಯತ್ ಸದಸ್ಯರು, ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್ ಲವೀಶ್, ಸಮಾಜ ಕಲ್ಯಾಣ ಇಲಾಖೆಯ ಪ್ರಭಾವತಿ, ಶಿಶು ಅಭಿವೃದ್ಧಿ ಇಲಾಖೆಯ ಮಾಲಿನಿ, ಬಜಪೆ ಪೊಲೀಸ್ ಠಾಣೆಯ ಕೆಂಚಪ್ಪ, ಪಶು ವೈದ್ಯಾಧಿಕಾರಿ ಡಾ. ಪ್ರಸಾದ್, ಕುಪ್ಪೆಪದವು ಆರೋಗ್ಯ ಕೇಂದ್ರದ ಡಾ. ಕಿರಣ್ ರಾಜ್,ಸಮುದಾಯದ ಆರೋಗ್ಯಾಧಿಕಾರಿ ತಯಬಭಾನು, ಜಿಪಂ ಇಂಜಿನಿಯರ್ ವಿಶ್ವನಾಥ್, ತೋಟಗಾರಿಕಾ ಇಲಾಖೆಯ ಮಹೇಶ್, ಕಂದಾಯ ಇಲಾಖೆಯ ಮುತ್ತಪ್ಪ,ತಾಲೂಕು ಪಂಚಾಯತ್ ನ (ಟಿಐಇಸಿ) ನಿಶ್ಚತ, ಕೃಷಿ ಕೇಂದ್ರದ ಚಿದಂಬರಮೂರ್ತಿ ಮೊದಲಾದವರು ಉಪಸ್ಥಿತರಿದ್ದರು. ಪಿಡಿಓ ಪ್ರಮೋದ್ ಸಭೆಯನ್ನು ನಡೆಸಿಕೊಟ್ಟರು, ಕಾರ್ಯದರ್ಶಿ ವಸಂತಿ ಲೆಕ್ಕಪತ್ರ ಮಂಡಿಸಿದರು. ಸಿಬ್ಬಂದಿ ಸಹಕರಿಸಿದರು.
ಮುಖ್ಯ ಅಂಶಗಳು:
ಪಶು ಆಸ್ಪತ್ರೆಗೆ ಖಾಯಂ ವೈದ್ಯರನ್ನು ನೇಮಿಸಿ.
ಮುತ್ತೂರಿನಲ್ಲಿ ಆಶಾ ಕಾರ್ಯಕರ್ತೆಯರು ಮನೆಗೆ ಭೇಟಿ ಕೊಡುತ್ತಿಲ್ಲ.
ಮೊಗರು ಗ್ರಾಮದ ಉಪ ಆರೋಗ್ಯ ಕೇಂದ್ರವನ್ನು ಮುತ್ತೂರಿನಲ್ಲಿ ಸ್ಥಾಪಿಸಲಾಗಿದೆ ಅದನ್ನು ಮುತ್ತೂರು ಪಂಚಾಯತ್ ವ್ಯಾಪ್ತಿಗೆ ಸೇರಿಸಿ.
ದೊಡ್ಡಳಿಕೆ-ನೊಣಲು ಕೃಷಿ ನೀರಿನ ನಾಲೆಯ ಸರ್ವೇ ನಡೆಸಿ ನಂತರವೇ ನಾಲೆಯ ಹೂಲೆತ್ತಲು ಅನುಮತಿ ನೀಡುವಂತೆ ಅಗ್ರಹ.