ವಿವಾಹಿತೆಯೊಂದಿಗಿನ ಅಕ್ರಮ ಸಂಬಂಧ ನಿರಾಕರಿಸಿದ್ದಕ್ಕೆ ತಾಯಿಯನ್ನೇ ಕೊಂದ ಮಗ
ಮುಂಬೈ: ಮದುವೆಯಾಗಿದ್ದ ತನ್ನ ಸೋದರಸಂಬಂಧಿ ಜೊತೆಗೆ ಹೊಂದಿದ್ದ ಅಕ್ರಮ ಸಂಬಂಧವನ್ನು ತಿರಸ್ಕರಿಸಿದ ತಾಯಿಯನ್ನು ಮಗನೇ ಹತ್ಯೆಗೈದಿರುವ ಘಟನೆ ಭಿವಂಡಿಯ ಕಲ್ಹೇರ್ ಪ್ರದೇಶದಲ್ಲಿ ನಡೆದಿದೆ.

ಸೆಪ್ಟೆಂಬರ್ 20ರ ಮಂಗಳವಾರದಂದು ಈ ಘಟನೆ ನಡೆದಿದ್ದು, ಆರೋಪಿಗಳನ್ನು ಕೃಷ್ಣ ಅಂಬಿಕಾಪ್ರಸಾದ್ ಯಾದವ್ (29) ಮತ್ತು ಬಬಿತಾ ಯಾದವ್ ಎಂದು ಗುರುತಿಸಲಾಗಿದೆ. ನಿದ್ದೆ ಮಾಡುತ್ತಿದ್ದಾಗ ವ್ಯಕ್ತಿ ತನ್ನ ತಾಯಿಯ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ನಾರ್ಪೋಲಿ ಪೊಲೀಸ್ ಠಾಣೆಯ (Narpoli police station) ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಭಿವಂಡಿ ಮದನ್ ಬಲ್ಲಾಳ್ ತಿಳಿಸಿದ್ದಾರೆ.

ಅಮರಾವತಿ ಯಾದವ್ (58) (Amravati Yadav) ಮೃತ ಮಹಿಳೆ. ಅಮರಾವತಿ ಯಾದವ್ ಮಲಗಿದ್ದ ವೇಳೆ ರೂಮ್‍ಗೆ ಏಕಾಏಕಿ ನುಗ್ಗಿದ ಆರೋಪಿ ಮತ್ತು ಆತನ ಪ್ರಿಯತಮೆ ಬಬಿತಾ ಬೆಲ್ಟ್‌ನಿಂದ ಕತ್ತು ಹಿಸುಕಿ ಮಹಿಳೆಯ ಹತ್ಯೆಗೈದಿದ್ದಾರೆ. ನಂತರ ಶವವನ್ನು ರೂಮ್‍ನ ಬಾತ್‍ರೂಂನಲ್ಲಿ ಇರಿಸಿದ್ದರು. ಆದರೆ ಕಟ್ಟಡದಿಂದ ಜಿಗಿದು ಶವವನ್ನು ಹೊರಗೆ ಎಸೆಯುವಂತೆ ಪ್ರಿಯತಮೆ ತಿಳಿಸಿದ್ದು, ಆರೋಪಿ ಶವವನ್ನು ಕಟ್ಟಡದಿಂದ ಹೊರಗೆ ಎಸೆಯುತ್ತಿದ್ದಂತೆ ಸ್ಥಳಕ್ಕೆ ಆತನ ತಂದೆ ಆಗಮಿಸಿದ್ದಾರೆ. ಈ ವೇಳೆ ಆರೋಪಿ ಪ್ರಜ್ಞೆ ತಪ್ಪಿದಂತೆ ನಟಿಸಿದ್ದಾನೆ. ನಂತರ ಆತನ ತಂದೆ ಮತ್ತು ಕಿರಿಯ ಸಹೋದರ ಶವವನ್ನು ಮನೆಗೆ ತಂದು, ಈ ಬಗ್ಗೆ ಪ್ರಶ್ನಿಸಿದಾಗ, ಕಳ್ಳರ ಗ್ಯಾಂಗ್ ದರೋಡೆ ಮಾಡಲು ಮನೆಗೆ ನುಗ್ಗಿದ್ದರು. ಈ ವೇಳೆ ಗಲಾಟೆಯಲ್ಲಿ ತಾಯಿಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಕಥೆ ಕಟ್ಟಿದ್ದಾನೆ.

ಬಳಿಕ ಘಟನಾ ಸ್ಥಳಕ್ಕಾಗಮಿಸಿದ ಪೊಲೀಸರು ಶವವನ್ನು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು. ಮರಣೋತ್ತರ ಪರೀಕ್ಷೆ ವರದಿಯಲ್ಲಿ ಮಹಿಳೆಯ ಕುತ್ತಿಗೆಯ ಸುತ್ತಾ ಗಾಯವಾಗಿರುವುದು ಕಂಡು ಬಂದಿದೆ. ಅಲ್ಲದೇ ಹಣೆಯ ಮೇಲೂ ಹೊಡೆದಿರುವ ಗಾಯದ ಗುರುತುಗಳು ಪತ್ತೆಯಾಗಿದೆ. ಇದರಿಂದ ಕೃಷ್ಣ ಯಾದವ್‍ನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ಕಳ್ಳತನ ಮಾಡಲೆಂದು ಮೂರ್ನಾಲ್ಕು ಜನರು ಬಂದಾಗ ಅಡ್ಡಿಪಡಿಸಿದ ತನ್ನ ತಾಯಿಯನ್ನು ಕೊಂದಿದ್ದಾರೆ ಎಂದು ಹೇಳಿದ್ದಾನೆ.
ಇದರಿಂದ ಅನುಮಾನಗೊಂಡ ಪೊಲೀಸರು ಸ್ಥಳೀಯರನ್ನು ವಿಚಾರಿಸಿದಾಗ ಕೃಷ್ಣ ಯಾದವ್ ತನ್ನ ಸಂಬಂಧಿ ಬಬಿತಾ ಪಲ್ತುರಾಮ್ ಯಾದವ್ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದ ವಿಚಾರ ತಿಳಿದು ಬಂದಿದೆ. ನಂತರ ಪೊಲೀಸರು ತಮ್ಮ ಸ್ಟೈಲ್‍ನಲ್ಲಿಯೇ ತನಿಖೆ ಆರಂಭಿಸಿದಾಗ ಕೃಷ್ಣ ಯಾದವ್ ತಾನೇ ತನ್ನ ತಾಯಿಯ ಹತ್ಯೆಗೈದಿರುವ ಸತ್ಯವನ್ನು ಬಾಯ್ಬಿಟ್ಟಿದ್ದಾನೆ