5.47 ಕೋಟಿ ಮೌಲ್ಯದ 2.43 ಲಕ್ಷ ಎಣ್ಣೆ ಬಾಟ್ಲಿಗಳ ಮೇಲೆ ಹರಿಯಿತು ರೋಡ್ ರೋಲರ್!
ಅಮರಾವತಿ: 5.47 ಕೋಟಿ ಮೌಲ್ಯದ ಅಕ್ರಮ ಮದ್ಯವನ್ನು ಆಂಧ್ರಪ್ರದೇಶ(AndhraPradesh) ದ ಪೊಲೀಸರು ನಾಶಪಡಿಸಿದ್ದಾರೆ.
2.43 ಲಕ್ಷ ಮದ್ಯ(Liquor) ದ ಬಾಟ್ಲಿಗಳ ಮೇಲೆ ಪೊಲೀಸರು ರೋಡ್ ರೋಲರ್ (Road Roler) ಹರಿಸಿದ್ದಾರೆ. ಈ ಘಟನೆ ಎನ್‍ಟಿಆರ್ ಜಿಲ್ಲೆಯ ನಂದಿಗಾಮದಲ್ಲಿ ನಡೆದಿದೆ. ಹಿರಿಯ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿಯೇ ಆಲ್ಕೋಹಾಲ್ ತುಂಬಿದ ಬಾಟ್ಲಿಗಳನ್ನು ನಾಶಪಡಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ತೆಲಂಗಾಣ (Telangana) ದಿಂದ ಆಂಧ್ರಪ್ರದೇಶಕ್ಕೆ ಅಕ್ರಮವಾಗಿ ಮದ್ಯದ ಬಾಟ್ಲಿಗಳನ್ನು ಸಾಗಿಸಲಾಗುತ್ತಿತ್ತು. ಈ ವಿಚಾರ ನಮ್ಮ ಗಮನಕ್ಕೆ ಬಂತು. ಹೀಗಾಗಿ ನಾವು ದಾಳಿ ಮಾಡಿ 2 ಸಾವಿರ ಲೀಟರ್ ಅಕ್ರಮ ಮದ್ಯವನ್ನು ನಾಶಪಡಿಸಿದ್ದೇವೆ. ಅಲ್ಲದೆ ಈ ಸಂಬಂಧ 226 ಕೇಸ್ ದಾಖಲಿಸಿದ್ದೇವೆ ಎಂದು ವಿಜಯವಾಡದ ಪೊಲೀಸ್ ಆಯುಕ್ತ ಕಾಂತಿ ರಾಣಾ ಟಾಟಾ ವಿವರಿಸಿದ್ದಾರೆ.
ನಗರದ ಹೊರವಲಯದಲ್ಲಿರುವ ಎಲ್ಲಾ ಚೆಕ್ ಪೋಸ್ಟ್ (Check Post) ಗಳ ಮೇಲೆ ಏಕಾಏಕಿ ದಾಳಿ ಮಾಡುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಇತರ ರಾಜ್ಯಗಳಿಂದ ಆಂಧ್ರಪ್ರದೇಶಕ್ಕೆ ಅಕ್ರಮ ಮದ್ಯ ಸಾಗಣೆಯಾಗಿರುವ ಕುರಿತು ವರದಿಯಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಈ ವರ್ಷದ ಆರಂಭದಲ್ಲಿ ಕರ್ನೂಲ್‍ನಿಂದ 2 ಕೋಟಿ ಮೌಲ್ಯದ 66 ಸಾವಿರ ಮದ್ಯದ ಬಾಟ್ಲಿಗಳನ್ನು ಆಂಧ್ರ ಪ್ರದೇಶದ ವಿಶೇಷ ಜಾರಿ ಬ್ಯೂರೋ (SEB) ಸೀಜ್ ಮಾಡಿತ್ತು.