ಮಕ್ಕಳ ಕಳ್ಳರೆಂದು ಭಾವಿಸಿ ಸಾಧುಗಳಿಗೆ ಹಿಗ್ಗಾಮುಗ್ಗ ಥಳಿತ
ಮುಂಬೈ: ಮಕ್ಕಳ ಕಳ್ಳರೆಂದು ಶಂಕಿಸಿ ಸಾಧುಗಳನ್ನೇ ಹಿಡಿದು ಥಳಿಸಿರುವ ಘಟನೆ ಮಹಾರಾಷ್ಟ್ರದಲ್ಲಿ (Maharashtra) ನಡೆದಿದೆ.

ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ನಾಲ್ವರು ಸಾಧುಗಳ ಮೇಲೆ ಗುಂಪೊಂದು ಮಕ್ಕಳ ಕಳ್ಳರೆಂದು ಶಂಕಿಸಿ ಹಲ್ಲೆ ನಡೆಸಿರುವ ದೃಶ್ಯದ ವೀಡಿಯೋ ವೈರಲ್ ಆಗಿದೆ. ಜಿಲ್ಲೆಯ ಲವಣ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಸಾಧುಗಳು ಕಿರಾಣಿ ಅಂಗಡಿಯೊಂದರಲ್ಲಿ ಕುಳಿತು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು. ಈ ವೇಳೆ ಕೋಲುಗಳನ್ನು ಹಿಡಿದು ಬಂದ ಗುಂಪೊಂದು ಅಂಗಡಿಯ ಹೊರಗೆ ಸಾಧುಗಳನ್ನು ಥಳಿಸಿದ್ದಾರೆ.
ಮಹಾರಾಷ್ಟ್ರದ ಬಿಜೆಪಿ ಶಾಸಕ ರಾಮ್ ಕದಮ್ ಘಟನೆಯನ್ನು ಖಂಡಿಸಿದ್ದಾರೆ. ಸಾಧುಗಳ ಮೇಲಿನ ಇಂತಹ ದುಷ್ಕೃತ್ಯವನ್ನು ಸಹಿಸಲಾಗುವುದಿಲ್ಲ ಎಂದು ಸರ್ಕಾರ ಕೂಡ ಬೇಸರ ವ್ಯಕ್ತಪಡಿಸಿದೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ವೀಡಿಯೋ ಸಂದೇಶದಲ್ಲಿ ತಿಳಿಸಲಾಗಿದೆ.
ಪಾಲ್ಘರ್‌ನಲ್ಲಿ ನಡೆದ ಸಾಧುಗಳ ಹತ್ಯೆ ಪ್ರಕರಣದಲ್ಲಿ ಅಂದಿನ ಮುಖ್ಯಮಂತ್ರಿ ಉದ್ಧವ್ ಠಾಕ್ರೆ (Uddhav Thackeray) ಅವರ ಸರ್ಕಾರವು ಅವರಿಗೆ ಅನ್ಯಾಯವನ್ನು ಮಾಡಿದೆ. ಆದರೆ ಪ್ರಸ್ತುತ ಮಹಾರಾಷ್ಟ್ರ ಸರ್ಕಾರವು ಯಾವುದೇ ಸಾಧುವಿನ ಮೇಲಿನ ದಾಳಿಯನ್ನು ಸಹಿಸುವುದಿಲ್ಲ ಎಂದು 2020ರ ಘಟನೆಯನ್ನು ಉಲ್ಲೇಖಿಸಿ ಸರ್ಕಾರ ಸ್ಪಷ್ಟನೆ ನೀಡಿದೆ.