ಕಂದಾವರ ಗುರುವರ್ಯರ 168ನೇ ಜಯಂತಿಯ ಸಂಭ್ರಮ
ಕೈಕಂಬ: ಬ್ರಹ್ಮಶ್ರೀ ನಾರಾಯಣ ಗುರುವರ್ಯರ 168ನೇ ಜಯಂತಿಯ ಪ್ರಯುಕ್ತ ಕಂದಾವರ ಗುರುನಗರ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ಬೆಳಿಗ್ಗೆ ಗುರುಗಳಿಗೆ ಪಂಚಾಮೃತ ಅಭಿಷೇಕ, ಪಾಂಚಜನ್ಯ ಬಾಲಗೋಕುಲ ತಂಡದ ಮಕ್ಕಳಿಂದ ಮತ್ತು ಸಂಘದ ಸದಸ್ಯರಿಂದ ಭಜನೆ ಸಂಕೀರ್ತನೆ, ಮಧ್ಯಾಹ್ನ ಗುರುಪೂಜೆ, ಅನ್ನಸಂತರ್ಪಣೆಯು ಬಹಳ ವಿಜೃಂಭಣೆಯಿಂದ ಜರಗಿತು.

ಈ ಸಂದರ್ಭದಲ್ಲಿ ಕರಂಬಾರ್ ನಿವಾಸಿ ಧನಂಜಯ್ ಮತ್ತು ಶ್ರೀಮತಿ ರೇವತಿರವರ ಎಳೆಯ ಪುತ್ರಿ ತಸ್ವಿ ಗೆ ಆಕಸ್ಮಿಕವಾಗಿ ಬಿಸಿ ನೀರು ಬಿದ್ದು ಕಂಕನಾಡಿ ಫಾದರ್ ಮುಲ್ಲರ್ಸ್ ಆಸ್ಪತ್ರೆ ಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿರುವ ಕಾರಣ, ಗುರುಗಳಲ್ಲಿ ಪ್ರಾರ್ಥಿಸಿ, ಸೇರಿದ ಗುರು ಭಕ್ತರಿಂದ ಧನ ಸಂಗ್ರಹಿಸಲಾಯಿತು.

ಈ ಪುಣ್ಯ ಧಾರ್ಮಿಕ ಕಾರ್ಯಕ್ರಮದಲ್ಲಿ ಒಂದೇ ಜಾತಿ ಒಂದೇ ಮತ ಒಬ್ಬನೇ ದೇವರು ಮಾನವನಿಗೆ ಅನ್ನುವ ಗುರುಗಳ ತತ್ವದೊಂದಿಗೆ ಊರಿನ ಎಲ್ಲಾ ಸಮಾಜ ಭಾಂದವರಿದ್ದು, ಗುರುಗಳ ಕೃಪೆಗೆ ಪಾತ್ರರಾದರು. ಬ್ರಹ್ಮಶ್ರೀ ನಾರಾಯಣ ಗುರು ಮಂದಿರ, ಬಿಲ್ಲವ ಸಮಾಜ ಸೇವಾ ಸಂಘ (ರಿ ) ಮತ್ತು ಬಿಲ್ಲವ ಮಹಿಳಾ ಮಂಡಳಿ ಗುರುನಗರ ಕಂದಾವರ ಇದ್ದರು.
