ಭಾರತ್ ಜೋಡೋ ಯಾತ್ರೆ – ರಾಹುಲ್ ಗಾಂಧಿ ವಿಶ್ರಾಂತಿಗೆ ವಾಹನದಲ್ಲಿ ಬೆಡ್, ಎಸಿ ವ್ಯವಸ್ಥೆ
ನವದೆಹಲಿ: ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆಯನ್ನು ಈಗಾಗಲೇ ಪ್ರಾರಂಭಿಸಿದೆ. ತಮಿಳುನಾಡಿನ ಕನ್ಯಾಕುಮಾರಿಯಿಂದ ಪ್ರಾರಂಭವಾಗಿರುವ ಯಾತ್ರೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯೊಂದಿಗೆ ಸುಮಾರು 230 ಜನರು ಪಾಲ್ಗೊಂಡಿದ್ದಾರೆ. ಯಾತ್ರೆಯಲ್ಲಿ ರಾಹುಲ್ ಗಾಂಧಿ ವಿಶ್ರಾಂತಿಯನ್ನು ಎಲ್ಲಿ ತೆಗೆದುಕೊಳ್ಳುತ್ತಾರೆ ಎಂಬ ಮಾಹಿತಿ ಇಲ್ಲಿದೆ.
ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆಗೆ ಸುಮಾರು 60 ಟ್ರಕ್‌ಗಳನ್ನು ಗಣ್ಯರ ವಿಶ್ರಾಂತಿಗಾಗಿಯೇ ಸಜ್ಜುಗೊಳಿಸಲಾಗಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯೂ ಕೂಡಾ ಇವುಗಳಲ್ಲೇ ಒಂದು ಟ್ರಕ್‌ನಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಾರೆ ಎನ್ನಲಾಗಿದ್ದು, ಅದರಲ್ಲಿ ಎಲ್ಲಾ ರೀತಿಯ ಅನುಕೂಲಕರ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಮಾಹಿತಿ ನೀಡಿದ ಪಕ್ಷದ ನಾಯಕ ಜೈರಾಮ್ ರಮೇಶ್, ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗಿನ 3,570 ಕಿ.ಮೀ ಸಂಪೂರ್ಣ ದೂರವನ್ನು ರಾಹುಲ್ ಗಾಂಧಿ ಸೇರಿದಂತೆ 119 ಯಾತ್ರಿಗಳು ಕ್ರಮಿಸಲಿದ್ದಾರೆ. ಈ ವೇಳೆ ವಿಶ್ರಾಂತಿಗಾಗಿ ಅತಿಥಿ ಯಾತ್ರಿಗಳು ಸುಸಜ್ಜಿತ ಕಂಟೈನರ್‌ಗಳಲ್ಲಿ ಉಳಿಯಲಿದ್ದಾರೆ ಎಂದಿದ್ದಾರೆ.
ನಾವು ನಿನ್ನೆಯಿಂದ ಕಂಟೈನರ್‌ಗಳಲ್ಲಿ ಉಳಿದುಕೊಂಡಿದ್ದೇವೆ. ಒಟ್ಟು 60 ಕಂಟೈನರ್‌ಗಳಿದ್ದು, ಇದರಲ್ಲಿ ಸುಮಾರು 230 ಜನರು ತಂಗುತ್ತಿದ್ದಾರೆ. ಕೆಲವು 1 ಹಾಸಿಗೆ, ಕೆಲವು 2 ಹಾಸಿಗೆಗಳು, ಕೆಲವು 4 ಹಾಸಿಗೆಗಳು ಮತ್ತು ಕೆಲವು 12 ಹಾಸಿಗೆಯ ಕಂಟೈನರ್‌ಗಳು ಇವೆ ಎಂದು ತಿಳಿಸಿದ್ದಾರೆ.
ವರದಿಗಳ ಪ್ರಕಾರ ರಾಹುಲ್ ಗಾಂಧಿ ತಮ್ಮ ಯಾತ್ರೆಯಲ್ಲಿ ಖಾಸಗಿ ಬಳಕೆಗೆ ಒಂದು ಟ್ರಕ್ ಅನ್ನು ಹೊಂದಿದ್ದಾರೆ. ಅದರಲ್ಲಿ 2 ಹಾಸಿಗೆಯನ್ನು ಇರಿಸಲಾಗಿದ್ದು, ಹವಾನಿಯಂತ್ರಿತ ವ್ಯವಸ್ಥೆಯೂ ಇದೆ ಎನ್ನಲಾಗಿದೆ.
ರಾಹುಲ್ ಗಾಂಧಿಯನ್ನು ಹೊರತುಪಡಿಸಿ ಇತರ ನಾಯಕರುಗಳಿಗೆ 6 ಅಥವಾ 12 ಹಾಸಿಗೆಗಳಿರುವ ಟ್ರಕ್‌ಗಳನ್ನು ನೀಡಲಾಗಿದೆ. ಎಲ್ಲಾ ಟ್ರಕ್‌ಗಳಲ್ಲೂ ಹವಾನಿಯಂತ್ರಿತ ವ್ಯವಸ್ಥೆ ಇಲ್ಲ ಎನ್ನಲಾಗಿದ್ದರೂ ಹೆಚ್ಚಿನವುಗಳಲ್ಲಿ ಶೌಚಾಲಯಗಳನ್ನು ಜೋಡಿಸಲಾಗಿದೆ ಎನ್ನಲಾಗಿದೆ.
ಭಾರತ್ ಜೋಡೋ ಯಾತ್ರೆ ಕನ್ಯಾಕುಮಾರಿಯಿಂದ ಕಾಶ್ಮೀರದ ಕಡೆಗೆ ಸಾಗಲಿದ್ದು, 3,500 ಕಿ.ಮೀ ದೂರವನ್ನು ಕ್ರಮಿಸಲಿದೆ. 150 ದಿನಗಳಲ್ಲಿ ಇದು 12 ರಾಜ್ಯಗಳು ಹಾಗೂ 2 ಕೇಂದ್ರಾಡಳಿತ ಪ್ರದೇಶಗಳನ್ನು ಹಾದುಹೋಗಲಿದೆ.