ಬಂಟ್ವಾಳ: ೧೧ರಂದು ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಕಾಂಗ್ರೆಸ್ಸಿಗರಿಂದ ಅನಗತ್ಯ ವಿವಾದ ಸೃಷ್ಟಿ: ಹರಿಕೃಷ್ಣ ಬಂಟ್ವಾಳ ಆರೋಪ
ಬಂಟ್ವಾಳ: ತಾಲ್ಲೂಕಿನ ಬಿಲ್ಲವ ಸಮಾಜ ಸೇವಾ ಸಂಘದ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರು ೧೬೮ ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಇದೇ ೧೧ರಂದು ಬೆಳಿಗ್ಗೆ ಬಿ.ಸಿ.ರೋಡು ಗಾಣದಪಡ್ಪು ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂಘದ ಮಾಜಿ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ್ ಅವರು ತಿಳಿಸಿದ್ದಾರೆ.
ಇಲ್ಲಿನ ಬಿ.ಸಿ.ರೋಡು ಗಾಣದಪಡ್ಪು ಸಭಾಂಗಣದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಅಂದು ಬೆಳಿಗ್ಗೆ ಭಜನೆ ಸಹಿತ ಗುರುಪೂಜೆ ನಡೆಯಲಿದೆ. ಸಂಘದ ಅಧ್ಯಕ್ಷ ಕೆ. ಸೇಸಪ್ಪ ಕೋಟ್ಯಾನ್ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕನ್ಯಾಡಿ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡುವರು.
ಸಂಸದ ನಳಿನ್ ಕುಮಾರ್ ಕಟೀಲು, ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್ ಕುಮಾರ್ ಮತ್ತಿತರ ಗಣ್ಯರು ಭಾಗವಹಿಸಲಿದ್ದು, ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಎಂ.ತುಂಗಪ್ಪ ಬಂಗೇರ, ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ವಿಜೇತೆ ಶೈಲಜಾ ರಾಜೇಶ್, ಬಿ.ಸಿ.ರೋಡ್ ಶ್ರೀ ರಕ್ತೇಶ್ವರಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ವಿಶ್ವನಾಥ ಪೂಜಾರಿ ಇವರಿಗೆ ಸನ್ಮಾನ ಮತ್ತು ವಿದೂಷಿ ಡಾ. ದಾಕ್ಷಾಯಿಣಿ ಕಂದೂರು, ಎಂ.ಕಾಂ. ವಿಭಾಗದಲ್ಲಿ ರ‍್ಯಾಂಕ್ ವಿಜೇತೆ ಸ್ವಾತಿ ಕುದ್ಕೊಳಿ ಇವರನ್ನು ಅಭಿನಂದಿಸಲಾಗುವುದು ಎಂದರು.
‘ಬ್ರಹ್ಮಶ್ರಿ ನಾರಾಯಣ ಗುರು ಕೇವಲ ಒಂದು ಜಾತಿಗೆ ಸೀಮಿತರಾಗದೆ ಅವರು ಸಮಸ್ತ ಮಾನವ ಕುಲಕ್ಕೆ ಸೇರಿದವರು’. ಈ ಬಗ್ಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿಯೇ ಉಲ್ಲೇಖಿಸಿದ್ದಾರೆ. ಕಳೆದ ಬಾರಿ ಗಣರಾಜ್ಯೊತ್ಸವ ಪರೇಡ್, ಪಠ್ಯಪುಸ್ತಕ ವಿಚಾರದಲ್ಲಿ ಕೇವಲ ಕಾಂಗ್ರೆಸಿಗರು ಮಾತ್ರ ರಾಜಕೀಯ ಪ್ರೇರಿತ ವಿವಾದ ಎಬ್ಬಿಸಿದ್ದರು ಎಂದು ಆರೋಪಿಸಿದರು.
ಇದೇ ಪ್ರಥಮ ಬಾರಿಗೆ ರಾಜ್ಯಮಟ್ಟದ ಬ್ರಹ್ಮಶ್ರೀ ನಾರಾಯಣಗುರು ಜನ್ಮದಿನಾಚರಣೆ ಇದೇ ೧೦ರಂದು ಮಂಗಳೂರಿನಲ್ಲಿ ನಡೆಯುತ್ತಿದೆ. ಬಿಲ್ಲವರು ಎಂದಿಗೂ ಜಾತಿವಾದಿಗಳಲ್ಲ, ಅವರು ರಾಷ್ಟ್ರವಾದಿಗಳಾಗಿದ್ದಾರೆ. ಅದೇ ರೀತಿ ಅವರು ಯಾರ ಗುಲಾಮರೂ ಅಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಕೆ.ಸೇಸಪ್ಪ ಕೋಟ್ಯಾನ್, ಕೋಶಾಧಿಕಾರಿ ಉಮೇಶ್ ಸುವರ್ಣ, ಪ್ರಧಾನ ಕಾರ್ಯದರ್ಶಿ ರಮೇಶ್ ತುಂಬೆ, ಉಪಾಧ್ಯಕ್ಷ ಮಹಾಬಲ ಬಂಗೇರ, ಲೆಕ್ಕಪರಿಶೋಧಕ ಸತೀಶ್ ಬಿ., ಜತೆ ಕಾರ್ಯದರ್ಶಿ ಆನಂದ ಸಾಲಿಯಾನ್ ಇದ್ದರು.