ಸಿದ್ಧಕಟ್ಟೆ: ‘ಮಗಳ ಹುಟ್ಟು ಹಬ್ಬ’ ವಿನೂತನ ರೀತಿ ಆಚರಿಸಿಕೊಂಡ ರೋಟರಿ ಕ್ಲಬ್ ಸದಸ್ಯ ‘ನಲಿ-ಕಲಿ ತರಗತಿಗೆ ಉಚಿತ ಪೀಠೋಪಕರಣ ಹಸ್ತಾಂತರ’
ಬಂಟ್ವಾಳ: ಸಿದ್ಧಕಟ್ಟೆ ಸಮೀಪದ ಆರಂಬೋಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಕುಡಿಯುವ ನೀರಿನ ಶುದ್ಧೀಕರಣ ಯಂತ್ರ ಹಸ್ತಾಂತರಿಸಿದ ಕಿರಣ್ ಕುಮಾರ್ ಮಂಜಿಲ ದಂಪತಿ.
ಇಲ್ಲಿನ ಸಿದ್ಧಕಟ್ಟೆ ಸಮೀಪದ ಮಂಚಕಲ್ಲು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ‘ನಲಿ-ಕಲಿ’ ತರಗತಿಗೆ ಉಚಿತ ಪೀಠೋಪಕರಣ ಒದಗಿಸುವ ಮೂಲಕ ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ಸದಸ್ಯರೊಬ್ಬರು ತನ್ನ ಮಗಳ ೩ನೇ ವರ್ಷದ ಹುಟ್ಟುಹಬ್ಬ ವಿನೂತನ ರೀತಿಯಲ್ಲಿ ಆಚರಿಸಿ ಗಮನ ಸೆಳೆದಿದ್ದಾರೆ.
ರೋಟರಿ ಕ್ಲಬ್ ಕೋಶಾಧಿಕಾರಿ ಕಿರಣ್ ಕುಮಾರ್ ಮಂಜಿಲ ಮತ್ತು ಬೇಬಿ ಕೆ.ಮಂಜಿಲ ದಂಪತಿ ತನ್ನ ಪುತ್ರಿ ನಿಯಾ ಅವರೊಂದಿಗೆ ಮಂಗಳವಾರ ಬಂದು ‘ನಲಿ-ಕಲಿ ತರಗತಿ’ಗೆ ಮೇಜು, ಕುರ್ಚಿ ಮತ್ತಿತರ ಗುಣಮಟ್ಟದ ಪೀಠೋಪಕರಣ ನೀಡಿದ್ದಾರೆ. ಕಳೆದ ೨೩ ವರ್ಷಗಳ ಹಿಂದೆ ಆರಂಭಗೊಂಡ ಈ ಶಾಲೆಯಲ್ಲಿ ‘ನಲಿ -ಕಲಿ’ ತರಗತಿ ಮಕ್ಕಳಿಗೆ ಸಂತಸ ತಂದಿದ್ದಾರೆ ಎಂದು ಮುಖ್ಯಶಿಕ್ಷಕಿ ವಿನಿತಾ ಹೇಳಿದರು.
ಕಳೆದ ೫ ವರ್ಷಗಳ ಹಿಂದೆಯಷ್ಟೇ ಆರಂಭಗೊಂಡ ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ಈಗಾಗಲೇ ಒಟ್ಟು ರೂ ೧.೨ ಕೋಟಿಗೂ ಮಿಕ್ಕಿ ಮೊತ್ತದ ದೇಣಿಗೆ ವಿವಿಧ ಸಮಾಜಮುಖಿ ಚಟುವಟಿಕೆಗಳಿಗೆ ವಿನಿಯೋಗಿಸಿದೆ. ಈ ಪೈಕಿ ‘ವಿದ್ಯಾಸಿರಿ’ ಯೋಜನೆಯಡಿ ವಿವಿಧ ಸರ್ಕಾರಿ ಕಾಲೇಜುಗಳಿಗೆ ೧೫೦ಕ್ಕೂ ಮಿಕ್ಕಿ ಉಚಿತ ಕಂಪ್ಯೂಟರ್ ವಿತರಿಸಿದೆ ಎಂದು ಕ್ಲಬ್ಬಿನ ವಲಯ ಸೇನಾನಿ ರಾಘವೇಂದ್ರ ಭಟ್ ಹೊಕ್ಕಾಡಿಗೋಳಿ ತಿಳಿಸಿದರು.
ಕ್ಲಬ್ಬಿನ ಅಧ್ಯಕ್ಷೆ ಶೃತಿ ಮಾಡ್ತ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ರೋಟರಿ ಕ್ಲಬ್ ವಿದ್ಯಾಸಿರಿ, ವನಸಿರಿ, ಆರೋಗ್ಯಸಿರಿ ಮತ್ತಿತರ ಯೋಜನೆಗಳನ್ನು ಕೈಗೊಂಡು ಜನತೆಗೆ ಹತ್ತಿರವಾಗಿದೆ ಎಂದರು. ಕಾರ್ಯದರ್ಶಿ ವಿಜಯ ಫೆರ್ನಾಂಡಿಸ್, ಸದಸ್ಯ ಹರಿಪ್ರಸಾದ್ ಶೆಟ್ಟಿ ಕುರುಡಾಡಿ ಶುಭ ಹಾರೈಸಿದರು.
‘ಎಲ್ಲಾ ಮಕ್ಕಳು ದೇವರು ಎಂಬ ನಿಟ್ಟಿನಲ್ಲಿ ಮಂಚಕಲ್ಲು ಶಾಲೆಗೆ ಪೀಠೋಪಕರಣ, ಆರಂಬೋಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕುಡಿಯುವ ನೀರಿನ ಶುದ್ಧೀಕರಣ ಯಂತ್ರ, ಪಿಲ್ಲಂಗೋಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಸುಣ್ಣ-ಬಣ್ಣ ಬಳಿಯಲು ನನಗೆ ರೋಟರಿ ಕ್ಲಬ್ ಪ್ರೇರಣೆ ನೀಡಿದೆ.’- ಕಿರಣ್ ಕುಮಾರ್ ಮಂಜಿಲ
ಕ್ಲಬ್ಬಿನ ಕೋಶಾಧಿಕಾರಿ ಸಿ ಆರ್ ಪಿ ವಿಜಯಲಕ್ಷ್ಮೀ , ಶಿಕ್ಷಕಿ ಭವಾನಿ, ಸುರೇಶ್ ಸಾಲ್ಯಾನ್ ಮತ್ತಿತರರು ಇದ್ದರು. ಪತ್ರಕರ್ತ ಮೋಹನ್ ಕೆ.ಶ್ರೀಯಾನ್ ರಾಯಿ ಕಾರ್ಯಕ್ರಮ ನಿರೂಪಿಸಿದರು.