ವರ್ಕಾಡಿ: ಧರ್ಮನಗರದಲ್ಲಿ ಭಾನುವಾರ ನಡೆದ ಮುಕ್ತ ವಾಲಿಬಾಲ್ ಪಂದ್ಯಾಟದಲ್ಲಿ ತೌಡುಗೋಳಿಯ ಯುವಕ ಮಂಡಲ ನರಿಂಗಾನ ತಂಡ ಪ್ರಥಮ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದು ಸಿಎಫ್ ಸಿ ಒಕ್ಕೆತ್ತೂರು ತಂಡ ದ್ವಿತೀಯ ಪ್ರಶಸ್ತಿ ಪಡೆಯಿತು.

ಮಜೀರುಪಳ್ಳದ ಆರೋಗ್ಯ ಕೇಂದ್ರದ ಸಮೀಪದ ಪಂಚಾಯಿತಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದ ಫೈನಲ್ ನಲ್ಲಿ ನರಿಂಗಾನ ಯುವಕ ಮಂಡಲ ಒಕ್ಕೆತ್ತೂರು ತಂಡವನ್ನು 25-17ರಲ್ಲಿ ಸೋಲಿಸಿತು.

ಇದಕ್ಕೂ ಮುನ್ನ ನಡೆದ ಸೆಮಿಫೈನಲ್ ನಲ್ಲಿ ನರಿಂಗಾನ ಯುವಕ ಮಂಡಲ ಧರ್ಮನಗರ ಅಣೆ ತಂಡವನ್ನು 25- 14ರಲ್ಲಿ ಹಾಗೂ ಒಕ್ಕೆತ್ತೂರು ತಂಡ ಸ್ನೇಹ ಫ್ರೆಂಡ್ಸ್ ಕ್ಲಬ್ ನ್ನು 25-12ರಲ್ಲಿ ಮಣಿಸಿತು.

ಯುವಕ ಮಂಡಲ ನರಿಂಗಾನ ತಂಡದ ಸೋನು ಅತ್ಯುತ್ತಮ ಹೊಡೆತಗಾರ ಹಾಗೂ ಸುಹೈಲ್ ಅತ್ಯುತ್ತಮ ಎತ್ತುಗೆಗಾರ ಪ್ರಶಸ್ತಿ ಪಡೆದರೆ ಒಕ್ಕೆತ್ತೂರು ತಂಡದ ನೌಫಲ್ ಆಲ್ ರೌಂಡರ್ ಪ್ರಶಸ್ತಿ ಪಡೆದರು. ಕೂಟದಲ್ಲಿ 20ತಂಡಗಳು ಭಾಗವಹಿಸಿತ್ತು.

ನರಿಂಗಾನ ತಂಡ ಪ್ರಥಮ ನಗದು 5000 ರೂ. ಹಾಗೂ ಶಾಶ್ವತ ಫಲಕ, ಒಕ್ಕೆತ್ತೂರು ತಂಡ ದ್ವಿತೀಯ ನಗದು ರೂ. 3000 ಹಾಗೂ ಶಾಶ್ವತ ಫಲಕ ಪಡೆಯಿತು.
ಸಮಾರೋಪದಲ್ಲಿ ಪತ್ರಕರ್ತ ಸತೀಶ್ ಕುಮಾರ್ ಪುಂಡಿಕಾಯಿ, ನರಿಂಗಾನ ಯುವಕ ಮಂಡಲದ ಅಧ್ಯಕ್ಷ ಜೀತೇಶ್ ಶೆಟ್ಟಿ ಪೂಂಜರ ಮನೆ, ಪ್ರಧಾನ ಕಾರ್ಯದರ್ಶಿ ಪುನೀತ್ ಶೆಟ್ಟಿ ಪುಳಿಂಕೆತ್ತಡಿ, ಸಾಂಸ್ಕೃತಿಕ ಕಾರ್ಯದರ್ಶಿ ಪ್ರಜ್ವಲ್ ಕುಮಾರ್ ಬೆರ್ಮದೆ, ಅವಿನಾಶ್ ಸರ್ಕುಡೇಲು, ನಿಖಿಲ್ ಆಳ್ವ ಗರೋಡಿ, ನಿತಿನ್ ನಿಡ್ಮಾಡ್, ವಿಜಯ್ ಎಲ್. ಸರ್ಕುಡೇಲು, ರಾಜೀವ ಎಸ್. ಶಾಂತಿಪಳಿಕೆ, ಸತೀಶ್ ಮಲಿ, ಮುರಲೀಧರ ಶೆಟ್ಟಿ ತಿಮರಕೋಡಿ, ಇಬ್ರಾಹಿಂ ಶಾಂತಿಪಳಿಕೆ, ಶ್ರವಣ್ ಸರ್ಕುಡೇಲು, ಹಿತೇಶ್ ಸೇರಿದಂತೆ ಪದಾಧಿಕಾರಿಗಳು ಸದಸ್ಯರು ಪಾಲ್ಗೊಂಡಿದ್ದರು.
ವಿಜಯೋತ್ಸವ: ಪ್ರಥಮ ಪ್ರಶಸ್ತಿ ಪಡೆದ ಪ್ರಯುಕ್ತ ನರಿಂಗಾನ ಯುವಕ ಮಂಡಲದ ಸದಸ್ಯರು ಹಾಗೂ ಅಭಿಮಾನಿಗಳು ಮಜೀರುಪಲ್ಲದಿಂದ ಬೇಕರಿ ವರ್ಕಾಡಿ ದೇವಸ್ಥಾನ ರಸ್ತೆಯಾಗಿ ತೌಡುಗೋಳಿ ಯುವಕ ಮಂಡಲ ಕಚೇರಿ ತನಕ ಬೈಕ್ ರ್‍ಯಾಲಿ ನಡೆಸಿ ಯುವಕ ಮಂಡಲ ನರಿಂಗಾನಕ್ಕೆ ಜೈಕಾರ ಕೂಗಿ ಸಂಭ್ರಮಿಸಿದರು.
