“ಮಕ್ಕಳ ಮಾತು” ನನ್ನ ಚೊಚ್ಚಲ ಪುಸ್ತಕ. ಕಳೆದ ಹತ್ತು ವರ್ಷಗಳಲ್ಲಿ
ಶಾಲಾ-ಕಾಲೇಜುಗಳಲ್ಲಿ ನಡೆಸಿದ ವಿವಿಧ ರಂಗ ಹಾಗೂ ಪತ್ರಿಕಾ ರಂಗದ ಚಟುವಟಿಕೆಗಳಲ್ಲಿ
ನಾನು ಕಂಡುಕೊಂಡಂತಹ ಮಕ್ಕಳ ಮನಸ್ಥಿತಿ ಹಾಗೂ ಮಕ್ಕಳ ಹಕ್ಕುಗಳ ವಿಚಾರಗಳನ್ನು
ಉಲ್ಲೇಖಿಸಿ ಬರೆದ ಮಕ್ಕಳ ಮಾತು ಲೇಖನಗಳನ್ನು ಪೋಣಿಸಿದ ಪುಸ್ತಕವಿದು. ಕನ್ನಡ ಪುಸ್ತಕ
ಪ್ರಾಧಿಕಾರದ ನೆರವಿನೊಂದಿಗೆ ಪುಸ್ತಕ ಪ್ರಕಟಗೊಳ್ಳುತ್ತಿದ್ದು, ಕಾಕತಾಳೀಯ ಎಂಬಂತೆ
ನ.೧೪ ರ ಮಕ್ಕಳ ದಿನಾಚರಣೆಯಂದೇ “ಮಕ್ಕಳ ಮಾತು” ಬಿಡುಗಡೆಗೊಳ್ಳುತ್ತಿದೆ. ಪುಸ್ತಕ
ಬಿಡುಗಡೆಯ ಸುದ್ದಿಯ ಜೊತೆಯಲ್ಲಿ ಮಕ್ಕಳ ಮಾತು ಗಳ ವ್ಯಾಪಕ ಪ್ರಚಾರಕ್ಕೆ ನಿಮ್ಮ
ಪೂರ್ಣ ಸಹಕಾರ ಬೇಕು ಎನ್ನುವುದು ನನ್ನ ಭಿನ್ನಹ.
.ಮೌನೇಶ ವಿಶ್ವಕರ್ಮ
ಪುತ್ತೂರು ; ಪತ್ರಕರ್ತ, ರಂಗನಿರ್ದೇಶಕ ಮೌನೇಶ ವಿಶ್ವಕರ್ಮ ರವರ ಚೊಚ್ಚಲ ಕೃತಿ ಮಕ್ಕಳ ಮಾತು ಇಂದು(ನ.14) ಬೆಂಗಳೂರಿನಲ್ಲಿ ಬಿಡುಗಡೆಗೊಳ್ಳಲಿದೆ.
ಕನ್ನಡ ಪುಸ್ತಕ ಪ್ರಾಧಿಕಾರವು ಬೆಂಗಳೂರಿನ ಕನ್ನಡ ಭವನದ ನಯನ ಸಭಾಂಗಣದಲ್ಲಿ ಆಯೋಜಿಸಿರುವ ಯುವಬರಹಗಾರರ ಚೊಚ್ಚಲ ಕೃತಿ ಬಿಡುಗಡೆ ಸಮಾರಂಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವೆ ಉಮಾಶ್ರೀ ಯವರು ‘ಮಕ್ಕಳ ಮಾತು’ ಬಿಡುಗಡೆಗೊಳಿಸಲಿದ್ದಾರೆ. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಬಂಜಗೆರೆ ಜಯಪ್ರಕಾಶ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಕನ್ನಡ ಸಂಸ್ಕೃತಿ ಹಾಗೂ ವಾರ್ತಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ನಿರ್ದೇಶಕ ಕೆ.ಎ.ದಯಾನಂದ ಮುಖ್ಯ ಅತಿಥಿಯಾಗಿ ಭಾಗವಹಿಸುವರು.
ನಮ್ಮ ಬಂಟ್ವಾಳ ಪತ್ರಿಕೆಯಲ್ಲಿ ಮಕ್ಕಳ ಹಕ್ಕುಗಳು ಹಾಗೂ ಮಕ್ಕಳ ಮನಸ್ಥಿತಿ ಯ ಕುರಿತಾಗಿವಿವಿಧ ಘಟನೆಗಳನ್ನು ಉಲ್ಲೇಖಿಸಿ ಮೌನೇಶ್ ಬರೆದಿರುವ ಮಕ್ಕಳ ಮಾತು ಅಂಕಣದ 27 ಲೇಖನಗಳು ಪ್ರಾಧಿಕಾರದ ನೆರವಿನಿಂದ ಪುಸ್ತಕರೂಪದಲ್ಲಿ ಪ್ರಕಟಗೊಳ್ಳುತ್ತಿದ್ದು, ಬೆಂಗಳೂರು ಚೈಲ್ಡ್ ರೈಟ್ಸ್ ಟ್ರಸ್ಟ್ ನ ನಿರ್ಧೇಶಕ ನಾಗಸಿಂಹ ಜಿ.ರಾವ್ ಮುನ್ನುಡಿ ಬರೆದಿದ್ದಾರೆ, ಪುತ್ತೂರು ಕರ್ನಾಟಕ ಸಂಘದ ಅಧ್ಯಕ್ಷ ಪುರಂದರ ಭಟ್ ನಲ್ನುಡಿ ಬರೆದಿದ್ದು, ರಂಗಕರ್ಮಿ ಐಕೆ ಬೊಳುವಾರು ಬೆನ್ನುಡಿ ಬರೆದಿದ್ದಾರೆ. ಕರ್ನಾಟಕ ಸರ್ಕಾರದ ಕನ್ನಡ ಪುಸ್ತಕ ಪ್ರಾಧಿಕಾರ ನೀಡುವ ಯುವ ಬರಹಗಾರರ ಚೊಚ್ಚಲ ಕೃತಿಯ ಪ್ರೋತ್ಸಾಹಧನಕ್ಕೆ ಆಯ್ಕೆಯಾಗಿರುವ ಮಕ್ಕಳ ಮಾತು ಸಹಿತ ವಿವಿಧ ಬರಹಗಾರರ ಕೃತಿಗಳು ಇದೇ ಸಮಾರಂಭದಲ್ಲಿ ಲೋಕಾರ್ಪಣೆಗೊಳ್ಳಲಿದೆ ಎಂದು ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.

ಕರ್ನಾಟಕ ಬಾಲವಿಕಾಸ ಅಕಾಡೆಮಿ ಧಾರವಾಡ ಇದರ ದ.ಕ.ಜಿಲ್ಲಾ ಸಮಿತಿಯ ಸದಸ್ಯರಾಗಿರುವ ಮೌನೇಶ ವಿಶ್ವಕರ್ಮ ಪುತ್ತೂರಿನ ಸಂಪ್ಯ ನಿವಾಸಿಯಾಗಿದ್ದು ಕಳೆದ ಹನ್ನೆರಡು ವರ್ಷಗಳಿಂದ ಪತ್ರಿಕಾರಂಗ ಹಾಗೂ ಮಕ್ಕಳ ರಂಗಭೂಮಿ ಕಾಯಕದಲ್ಲಿ ತೊಡಗಿಸಿಕೊಂಡಿದ್ದು, ಪ್ರಸ್ತುತ ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿದ್ದಾರೆ.
ಈ ಹಿಂದೆ 2007 ರಲ್ಲಿ ಕೇಂದ್ರ ಸರ್ಕಾರ ನೀಡುವ ಯುವಕಲಾವಿದರ ಸ್ಕಾಲರ್ಶಿಪ್ ಹಾಗೂ 2011 ರಲ್ಲಿ ಯುನಿಸೆಫ್ ಹಾಗೂ ಕರ್ನಾಟಕ ಮಕ್ಕಳ ಹಕ್ಕುಗಳ ನಿಗಾ ಕೇಂದ್ರವು ನೀಡುವ “ಮಾಧ್ಯಮ ಫೆಲೋಷಿಫ್-2011” ಗೆ ಮೌನೇಶ್ ಆಯ್ಕೆಯಾಗಿದ್ದರು. ಪ್ರಸ್ತುತ ವಾರ್ತಾ ಭಾರತಿ, ಕನ್ನಡ ಪ್ರಭ, ಸುದ್ದಿಬಿಡುಗಡೆ ದೈಜಿವರಲ್ಡ್ ನ್ಯೂಸ್ ಕರ್ನಾಟಕ, ಬೆಳ್ಳೆವಿಷನ್, ಕೋಸ್ಟಲ್ ದೈಜೆಸ್ಟ್ ಹಾಗೂ ಡೈಲಿ10 ನ್ಯೂಸ್ ಟಿವಿ ಚಾನೆಲ್ನ ಬಂಟ್ವಾಳ ವರದಿಗಾರರಾಗಿದ್ದಾರೆ.
ಮೌನೇಶ್ ಮಕ್ಕಳ ರಂಗಚಟುವಟಿಕೆಯಲ್ಲೂ ಸಕ್ರೀಯರಾಗಿದ್ದು ಮಕ್ಕಳ ಹಕ್ಕುಗಳ ಕುರಿತಾದ ಹಲವು ಕಿರು ನಾಟಕಗಳನ್ನು ರಚಿಸಿದ್ದು, ನಾಟಕ ರಂಗ ಹಾಗೂ ಮಕ್ಕಳಹಕ್ಕುಗಳ ಕ್ಷೇತ್ರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಾಡಿಯ ನಮತುಳುವೆರ್ ಸಂಘಟನೆ ನೀಡುವ ಬಿ.ವಿ.ಕಾರಂತ ರಂಗ ಪ್ರಶಸ್ತಿಯೂ ಇವರಿಗೆ ದೊರೆತಿದೆ. ನೂರಾರು ಶಾಲಾ ಕಾಲೆಜುಗಳಿಗೆ ನಾಟಕ-ಬೀದಿ ನಾಟಕಗಳನ್ನು ನಿರ್ದೇಶಿಸಿರುವ ಇವರು ಮಕ್ಕಳ ರಂಗಶಿಬಿರಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದಾರೆ.
.


