ಗೋಳ್ತಮಜಲು: ಸರ್ಕಾರಿ ಪ್ರೌಢಶಾಲೆ ದಾನಿ ಮತ್ತು ನಿವೃತ್ತ ಶಿಕ್ಷಕರಿಗೆ ಸನ್ಮಾನ
ಬಂಟ್ವಾಳ: ತಾಲ್ಲೂಕಿನ ಗೋಳ್ತಮಜಲು ಸರ್ಕಾರಿ ಪ್ರೌಢಶಾಲೆಯಲ್ಲಿ ನಿವೃತ್ತಿಗೊಂಡ ಶಿಕ್ಷಕ ನಾರಾಯಣ ಗೌಡ ದಂಪತಿಯನ್ನು ಶಾಸಕ ರಾಜೇಶ ನಾಯ್ಕ್ ಸೋಮವಾರ ಸನ್ಮಾನಿಸಿದರು. ದಾನಿ ಕೃಷ್ಣಪ್ಪ ಪೂಜಾರಿ ಮತ್ತಿತರರು ಇದ್ದಾರೆ.
ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಸರ್ಕಾರದ ಜೊತೆಗೆ ಶಿಕ್ಷಕರು ಮತ್ತು ಮಕ್ಕಳ ಪೋಷಕರು ಕೈ ಜೋಡಿಸಿದಾಗ ಶಾಲೆಯ ಸಮಗ್ರ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಹೇಳಿದ್ದಾರೆ.
ಗೋಳ್ತಮಜಲು ಸರ್ಕಾರಿ ಪ್ರೌಢಶಾಲೆಯಲ್ಲಿ ನೂತನವಾಗಿ ಅಳವಡಿಸಿದ ಗೇಟು ಉದ್ಘಾಟಿಸಿ ಅವರು ಮಾತನಾಡಿದರು. ಇದೇ ವೇಳೆ ದಾನಿ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಕೃಷ್ಣಪ್ಪ ಪೂಜಾರಿ ಮತ್ತು ನಿವೃತ್ತಿಗೊಂಡ ಶಿಕ್ಷಕ ನಾರಾಯಣ ಗೌಡ ಇವರನ್ನು ಶಾಸಕರು ಸನ್ಮಾನಿಸಿದರು.
ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ಪ್ರಮುಖರಾದ ಸಚ್ಚಿದಾನಂದ ಶೆಟ್ಟಿ ಬೊಂಡಾಲ, ಪ್ರಾಂಶುಪಾಲ ರಾಮಕೃಷ್ಣ ಮಡಿಕೇರಿ, ಶಿಕ್ಷಣ ಸಂಯೋಜಕಿ ನಳಿನಿ ಕೆ.ಸುಳ್ಯ ಶುಭ ಹಾರೈಸಿದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮೋನಪ್ಪ ದೇವಸ್ಯ, ಸದಸ್ಯರಾದ ಪುರುಷೋತ್ತಮ, ನಳಿನಾಕ್ಷಿ, ಸರೋಜಿನಿ, ಜಯಂತಿ ವೀರಕಂಭ ಇದ್ದರು. ಮುಖ್ಯಶಿಕ್ಷಕ ಕಮಲಾಕ್ಷ ಶಂಭೂರು, ಸುಜಾತ ಎಂ., ಚಿದಾನಂದ ಕೆ., ಸದಾಶಿವ ನಾಯ್ಕ್ ವಿಟ್ಲ, ಗಿರೀಶ ಮಡಿಕೇರಿ ಅನಿಸಿಕೆ ವ್ಯಕ್ತಪಡಿಸಿದರು.
ಶಾಲಾಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಚಂದ್ರಶೇಖರ ಟೈಲರ್ ಸ್ವಾಗತಿಸಿ, ಪ್ರಭಾರ ಮುಖ್ಯಶಿಕ್ಷಕಿ ವಿದ್ಯಾಲತಾ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ಸತ್ಯಶಂಕರ್ ವಂದಿಸಿ, ಶಂಕರ ಪಾವಸ್ಕರ್ ಕಾರ್ಯಕ್ರಮ ನಿರೂಪಿಸಿದರು.