Published On: Mon, Aug 1st, 2022

ಅಳಿವಿನಂಚಿನಲ್ಲಿ ಉಸಿರಾಡುತ್ತಿದೆ ಮಡಕೆ ಉದ್ಯಮ….! ಶ್ರೀಕೃಷ್ಣಾಷ್ಟಮಿ ಬಂದಾಗ ಕುಲಾಲರ ಕುಡಿಕೆಗೆ ಬೇಡಿಕೆ


ಕೈಕಂಬ : ಅಳಿವಿನಂಚಿನಲ್ಲಿ ಉಸಿರಾಡುತ್ತಿರುವ ಮಡಕೆ ಉದ್ಯಮ ಈಗ ಒಂದೆರಡು ಪ್ರದೇಶಗಳಿಗೆ ಮಾತ್ರ ಸೀಮಿತವಾಗಿದೆ. ಗಂಜಿಮಠ ಪಂಚಾಯತ್ ವ್ಯಾಪ್ತಿಯ ಬಡಗಉಳಿಪಾಡಿ ಗ್ರಾಮದ ಮಳಲಿಯ ಕೆಲವು ಮನೆಗಳಲ್ಲಿ ೬೦ ದಾಟಿದ ಕುಲಾಲರು ಮಡಕೆ ಕುಲಕಸುಬು ಕಂಡು ಬರುತ್ತಿದೆ. ಶ್ರೀಕೃಷ್ಣಾಷ್ಟಮಿಯ ಸಾಂಪ್ರದಾಯಿಕ ಮೊಸರು ಕುಡಿಕೆಯು ‘ಸಾರ್ವಜನಿಕ ಮೊಸರು ಕುಡಿಕೆ’ ಉತ್ಸವವಾಗಿ ಮಾರ್ಪಟ್ಟ ಇಂದಿನ ಸಂದರ್ಭದಲ್ಲಿ ಮಡಕೆಗಳಿಗೆ ಎಲ್ಲಿಲ್ಲದ ಬೇಡಿಕೆ ಬರುತ್ತದೆ. ಈ ಬಾರಿ ಆಗಸ್ಟ್ ೧೮-೧೯ರಂದು ನಡೆಯಲಿರುವ ಶ್ರೀಕೃಷ್ಣಾಷ್ಟಮಿ ಹಾಗೂ ಮೊಸರು ಕುಡಿಕೆ ಉತ್ಸವಕ್ಕೆ ಮಳಲಿಯಲ್ಲಿ ಮಡಕೆ ಸಿದ್ಧಗೊಳ್ಳುತ್ತದೆ.

ಮಳಲಿಯಲ್ಲಿ ಮೂಲ್ಯರು ಅಥವಾ ಕುಲಾಲರು ಅಥವಾ ಕುಂಬಾರರ ಸಾಕಷ್ಟು ಮನೆಗಳಿವೆ. ಹಿಂದೆ ಇಲ್ಲಿ ಮನೆಮನೆಯಲ್ಲಿ ಮಡಕೆ ತಯಾರಿಸಿ ಸುತ್ತಲ ಪ್ರದೇಶ, ಹೊರಗಿನ ಊರುಗಳಿಗೆ ಮಾರಾಟ ಮಾಡುತ್ತಿದ್ದರು. ಇದು ಕುಲಾಲರ ಕುಲಕಸಬಾಗಿದ್ದು, ಜೀವನಕ್ಕೆ ಆಧಾರವಾಗಿತ್ತು. ಸ್ಟೀಲ್ ಯುಗದ ಧಾವಂತದಲ್ಲಿ ಮಡಕೆ ಉದ್ಯಮ ಪುಡಿಪುಡಿಯಾಗಿದೆ. ಹಾಗಾಗಿಯೇ ಇದು ಅಳಿವಿನಂಚಿನಲ್ಲಿದ್ದು, ವರ್ಷಕ್ಕೊಂದು ಬಾರಿ ಉಸಿರಾಡುತ್ತಿರುವ ಉದ್ಯಮವಾಗಿದೆ.

ಪ್ರಸಕ್ತ ಕುಲಾಲರು ಮಡಕೆ ಉದ್ಯಮ ಅವಲಂಬಿಸಿಲ್ಲವಾದರೂ, ಅಷ್ಟಮಿ ಬರುವಾಗ ಇವರಿಗೆ ಬೇಡಿಕೆ ಹೆಚ್ಚು. ಮಳಲಿಯ ಶಿವಪ್ಪ ಕುಲಾಲ್, ಡೊಂಬಯ್ಯ ಕುಲಾಲ್, ನವೀನ ಕುಲಾಲ್, ವಾಸು ಕುಲಾಲ್ ಇವೇ ಬೆರಳೆಣಿಕೆಯ ಕುಲಾಲ ಸಮುದಾಯದ ಮಂದಿ ಮಡಕೆ ಉದ್ಯಮ ನಡೆಸುತ್ತಿದ್ದು, ಇವರಿಗೆ ಮೊಸರು ಕುಡಿಕೆ ಸಂದರ್ಭದಲ್ಲಿ ವಿಭಿನ್ನ ಕಡೆಗಳ ಸಾರ್ವಜನಿಕ ಮೊಸರು ಕುಡಿಕೆ ಸಂಘ-ಸAಸ್ಥೆಗಳು ಮತ್ತು ದೇವಸ್ಥಾನಗಳಿಂದ ಮಡಕೆಗಳಿಗಾಗಿ ಆರ್ಡರ್ ಬರುತ್ತದೆ. ಒಬ್ಬೊಬ್ಬರು ಸುಮಾರು ೨,೦೦೦ ಮಡಕೆ ಮಾಡಿಕೊಡುತ್ತಾರೆ. ಈಗ ಒಂದು ಮಡಕೆಗೆ ಖರೀದಿ ಬೆಲೆ ೫೦ರಿಂದ ೭೫ ರೂ ಆಗಿದೆ.

ಮಡಕೆಗಾಗಿ ಸಿದ್ಧತೆ :
ಹಿಂದಿನ ಕಾಲದಲ್ಲಿ ಎಪ್ರಿಲ್, ಮೇ ತಿಂಗಳಲ್ಲಿ ಹತ್ತಿರದ ಗದ್ದೆಗಳಿಂದ ಆವೆಮಣ್ಣು ಸಂಗ್ರಹಿಸುತ್ತಿದ್ದ ಇವರು, ನಿರಂತರ ಮಡಕೆ ಮಾಡುತ್ತಿದ್ದರು. ಈಗ ಹಾಗಲ್ಲ. ಎಲ್ಲಿಂದಲೋ ಮಣ್ಣು, ಕಟ್ಟಿಗೆ ತರಬೇಕಾಗುತ್ತದೆ. ಎಲ್ಲವೂ ದುಬಾರಿ. ಕುಲಕಸುಬಿನಿಂದ ಯಾವುದೇ ಲಾಭವಿಲ್ಲ ಎಂಬುದನ್ನು ಅರಿತ ಕುಲಾಲ ಸಮಾಜದ ಯುವಜನರು ಅನ್ಯ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಲಾಭವಿಲ್ಲದ ಮಡಕೆ ಉದ್ಯಮ ಇಂದು ಉದ್ಯಮವಾಗಿ ಉಳಿದಿಲ್ಲ. ಕೇವಲ ಅಷ್ಟಮಿಗೆ ಸೀಮಿತವಾಗಿದೆ. ಒಂದು ಮಡಕೆ ತಯಾರಿಸಲು ಕನಿಷ್ಠ ೨೦ ದಿನ ಬೇಕಾಗುತ್ತದೆ. ಹದ ಮಾಡಿದ ಮಣ್ಣಿಂದ ಮೊದಲು ಹಸಿ ಮಡಕೆ ತಯಾರಿಸಲಾಗುತ್ತದೆ. ಬಳಿಕ ಬಿಸಿಲಿಗೆ ಒಣಗಲಿಡಬೇಕು. ಬಿಸಿಲ್ಲದಿದ್ದರೆ ಇದು ಕಷ್ಟ. ಒಣಗಿದ ನೂರಾರು ಮಡಕೆಯನ್ನು ದೊಡ್ಡದಾದ ಮಣ್ಣಿನ ಕುಲುಮೆಯಲ್ಲಿಟ್ಟು ಬೇಯಿಸಲಾಗುತ್ತದೆ. ಒಂದು ಬಾರಿಗೆ ಸುಮಾರು ೫೦೦ ಮಡಕೆ ಕುಲುಮೆಯಲ್ಲಿಡಲಾಗುತ್ತದೆ. ಕಟ್ಟಿಗೆಯಿಂದ ಹಿತಮಿತವಾಗಿ ಬೇಯಿಸಿದ ಬಳಿಕ ಮಡಕೆ ಹೊರ ತೆಗೆಯಲಾಗುತ್ತದೆ. ಕೆಲವೊಮ್ಮೆ ಅದೃಷ್ಟ ಚೆನ್ನಾಗಿಲ್ಲದಿದ್ದರೆ ಎಲ್ಲ ಮಡಕೆಗಳು ಒಡೆದು ಹೋಗುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ.

“ಮಡಕೆ ತಯಾರಿ ವೇಳೆ ಅದೃಷ್ಟ ಕೈಕೊಟ್ಟರೆ ಕುಲುಮೆಯಲ್ಲಿದ್ದ ಎಲ್ಲ ಮಡಕೆ ನಷ್ಟವಾಗುತ್ತದೆ. ಇದು ಹಿಂದಿನಿಂದಲೂ ಕುಂಬಾರರು ಅನುಭವಿಸಿದ ಕಷ್ಟ. ಇವರ ಕಷ್ಟ-ನಷ್ಟಕ್ಕೆ ಅಥವಾ ಉದ್ಯಮಕ್ಕೆ ಸರ್ಕಾರದ ನೆರವು ಸಿಗುತ್ತಿದ್ದರೆ ಖಂಡಿತವಾಗಿಯೂ ಈ ಉದ್ಯಮ ಅಳಿಯುತ್ತಿರಲಿಲ್ಲ. ಸರ್ಕಾರದ ಬೆಂಬಲ ಇದ್ದಲ್ಲಿ ಕುಲಾಲ ಸಮುದಾಯ ಮಡಕೆ ಉದ್ಯದಲ್ಲಿ ಆಸಕ್ತಿ ತೋರಿಸಲಿದೆ” ಎಂದು ಒಂದು ಕಾಲದಲ್ಲಿ ಮಡಕೆ ಉದ್ಯಮವನ್ನೇ ವೃತ್ತಿಯನ್ನಾಗಿಸಿದ್ದ ಕುಟುಂಬದ ವ್ಯಕ್ತಿ, ಮಳಲಿ ಕುಲಾಲ ಸಂಘದ ಅಧ್ಯಕ್ಷ ನಾಗೇಶ್ ಕುಲಾಲ್ ಹೇಳುತ್ತಾರೆ.


ಏನೇ ಇದ್ದಾಗಲೂ ಎಲ್ಲ ಸಮಾಜದ ಕುಲ ಕಸುಬುಗಳಿಗಳಿಗೆ ಮತ್ತೆ ಜೀವ ತುಂಬಬೇಕೆನ್ನುವ ಪ್ರಸಕ್ತ ಸರ್ಕಾರ, ಕುಂಬಾರರ ಮಡಕೆ ಉದ್ಯಮಕ್ಕೆ ಹೇಳಿಕೊಳ್ಳುವಂತಹ ನೆರವಿಗೆ ಬಂದಿಲ್ಲ. ಕೇವಲ ಮೊಸರು ಕುಡಿಕೆಗಾಗಿ ಮಡಕೆ ತಯಾರಿಯಾದರೆ, ಮುಂದೆ ಶಾಶ್ವತವಾಗಿ ಮಡಕೆಗಳನ್ನು ಚಿತ್ರದಲ್ಲಿ ಕಾಣಬೇಕಾಗುತ್ತದೆ.

ಧನಂಜಯ ಗುರುಪುರ

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter