Published On: Mon, Aug 1st, 2022

ಬಂಟರ ಸಂಘ ಮುಂಬಯಿ, ಜೋಗೇಶ್ವರಿ – ದಹಿಸರ್ ಪ್ರಾದೇಶಿಕ ಸಮಿತಿ -‘ಮರಿಯಾಲದ ನೆಂಪುಲು’ ಕಾರ್ಯಕ್ರಮ

ಮುಂಬಯಿ : ಮಳೆಗಾಲವು ಊರಿನಲ್ಲಿ ಎಲ್ಲರನ್ನೂ ಕಾರ್ಯನಿರತರಾಗಿರಿಸುವ ಸಮಯ. ಬಾಲ್ಯದಲ್ಲಿ ಮಳೆಗಾಲದಲ್ಲಿ ನನಗಾದ  ಘಟನೆ ನೆನಪಾಗುತ್ತಿದೆ. ದೇವರ ದಯೆ ಇದ್ದಲ್ಲಿ ಯಾವ ಕಷ್ಟವಿದ್ದರೂ ನಾವು ಅದರಿಂದ ಪಾರಾಗಬಹುದು. ನಾವು ನಮ್ಮ ಹಿರಿಯರ ಆಶೀರ್ವಾದ ಪಡೆದು ಬಂದ ಕಾರಣ ಇಂದು ನಾವೆಲ್ಲರೂ ಮುಂಬಯಿಯಂತಹ ಮಹಾನಗರದಲ್ಲಿ ಸುಖವಾಗಿದ್ದೇವೆ. ಬಾಲ್ಯದಲ್ಲಿನ ಊರಿನ ಮಳೆಗಾಲದ ದಿನಗಳನ್ನು ಎಂದೂ ಮರೆಯುವಂತಿಲ್ಲ, ನಮ್ಮ ನಾಡಿನ ಮಣ್ಣಿನಲ್ಲಿ ಬೆಳೆದ ಬೆಳೆಯಿಂದ ನಮ್ಮ ಆರೋಗ್ಯ ತಂಪಾಗಿರುತ್ತದೆ ಎಂದು ಬಂಟರ ಸಂಘ ಮುಂಬಯಿಯ ಜೊತೆ ಕೋಶಾಧಿಕಾರಿ ಮುಂಡಪ್ಪ ಪಯ್ಯಡೆಯವರು ನುಡಿದರು.

ಜು. 30ರಂದು ಬಂಟರ ಸಂಘ ಮುಂಬಯಿ, ಜೋಗೇಶ್ವರಿ – ದಹಿಸರ್ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗವು ಕಾಂದಿವಲಿ ಪಶ್ಚಿಮದ ಪವನ್ ಧಾಮ್ ಸಮೀಪದ “ಆಧಾರಿಕಾ ಮಹಿಳಾ ಆಧಾರ್ ಭವನ”ದಲ್ಲಿ ನಡೆದ ‘ಮರಿಯಾಲದ ನೆಂಪುಲು’  (ಮಳೆಗಾಲದ ನೆನಪುಗಳು) ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ಇಂದು ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗವು ಈ ಕಾರ್ಯಕ್ರಮವನ್ನು ಉತ್ಸಾಹದಿಂದ ಆಯೋಜಿಸಿರುತ್ತದೆ. 

ಮಹಿಳಾ ವಿಭಾಗದ ಶೈಲಜಾಳ ಮುಂದಾಳತ್ವದಲ್ಲಿ ಎಲ್ಲಾ ಕಾರ್ಯಕರ್ತರ ಹಾಗೂ ಸಮಿತಿಯ ಸದಸ್ಯರ ಸಹಾಯದಿಂದ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಕಣ್ಣು ಇಲ್ಲದವ ಜೀವನ ನಡೆಸಿಯಾನು ಆದರೆ ಹೆಣ್ಣು ಇಲ್ಲದೆ ಜೀವನ ನಡೆಸಲು ಕಷ್ಟಕರ, ಅದು ಅವನ ಧರ್ಮಪತ್ನಿ, ತಾಯಿ, ಅಕ್ಕ, ತಂಗಿ, ಮಗಳು, ಯಾರೇ ಆಗಿರಬಹುದು. ಮಹಿಳೆಯರನ್ನು ಗೌರವಿಸಬೇಕು. ಕಷ್ಟಕಾಲದಲ್ಲಿ ಸಹಕರಿಸುವವರೇ ನಮ್ಮ ನಿಜವಾದ ಸಂಬಂಧಿಕರು. ಒಂದು ನಿಮಿಷದಲ್ಲಿ  ಜೀವನ ಬದಲಾಗುವುದಿಲ್ಲ, ಆದರೆ ಒಂದು ನಿಮಿಷದಲ್ಲಿನ  ನಿರ್ಧಾರವು ನಮ್ಮ ಜೀವನವನ್ನೇ ಬದಲಾಯಿಸಲು ಸಾಧ್ಯ. ಮಕ್ಕಳಿಗೆ  ಹಿರಿಯರ ಮಾತನ್ನು ಕೇಳುವ ಎಳೆಯದರಲ್ಲೇ ಸಂಸ್ಕಾರವನ್ನು ತಿಳಿಸಿದಲ್ಲಿ ಅವರು ಅದನ್ನು ಮುಂದೆ ಅವರ ಜೀವನದಲ್ಲಿ  ಅನುಸರಿಸಿಯಾರು, ನಾವೆಲ್ಲರೂ ಒಗ್ಗಟ್ಟಿನಿಂದ ಸಂಘಟನೆಯನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ಯೋಣ ಎಂದರು.

ಎಲ್ಲರನ್ನು ಸ್ವಾಗತಿಸುತ್ತಾ ಕಾರ್ಯಾಧ್ಯಕ್ಷ ನಿಟ್ಟೆ ಎಂ. ಜಿ. ಶೆಟ್ಟಿಯವರು ಮಳೆಗಾಲದ ತಿಂಗಳುಗಳೆಲ್ಲವೂ ಕಷ್ಟದ ತಿಂಗಳುಗಳು. ಅದರಲ್ಲೂ  ಆಟಿ ತಿಂಗಳು ಕಡು ಬಡತನದ ಜೀವನ ನಡೆಸುವ ತಿಂಗಳು. ಇಂತಹ ಕಾರ್ಯಕ್ರಮದ ಮೂಲಕ ನಮ್ಮ ಯುವ ಪೀಳಿಗೆಗೆ ನಮ್ಮ ಊರಿನ ಕಟ್ಟು ಕಟ್ಟಳೆ, ಆಚಾರ ವಿಚಾರ, ಸಂಸ್ಕೃತಿ – ಸಂಸ್ಕಾರಗಳನ್ನು ತಿಳಿಸಬೇಕು ಎಂದರು.

ಬಂಟರ ಸಂಘ ಮುಂಬಯಿಯ ಎಸ್ ಎಮ್ ಶೆಟ್ಟಿ ಶಿಕ್ಷಣ ಸಂಸ್ಥೆಯ ಉಪ ಕಾರ್ಯಾಧ್ಯಕ್ಷ, ರತ್ನಾಕರ ಶೆಟ್ಟಿ ಮುಂಡ್ಕೂರು ಅವರು ಮಾತನಾಡುತ್ತಾ ಬಂಟರ ಸಂಘದ 9 ಪ್ರಾದೇಶಿಕ ಸಮಿತಿಗಳಲ್ಲಿ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿ ಯಾವಾಗಲೂ ಚಟುವಟಿಕೆಯುಕ್ತವಾಗಿದ್ದುಕೊಂಡು ಅಗ್ರ ಸ್ಥಾನದಲ್ಲಿರುತ್ತದೆ. ಈ ಪ್ರಾದೇಶಿಕ ಸಮಿತಿಯ ಸಕ್ರಿಯ ಕಾರ್ಯಕರ್ತನಾಗಿ ಆರಂಭದ ದಿನಗಳಿಂದಲೂ ದುಡಿದ ಅನುಭವವಿದೆ. ಇಲ್ಲಿ ಯುವಜನಾಂಗವು ಬಹಳ  ಕಡಿಮೆ ಸಂಖ್ಯೆಯಲ್ಲಿ ಇದ್ದಂತೆ ಕಾಣುತ್ತಿದೆ. ಮಹಿಳೆಯರು ಇಂದು ವಿವಿಧ ರೀತಿಯ ಖಾದ್ಯಗಳನ್ನು ತಮ್ಮ ಮನೆಯಲ್ಲಿ ತಯಾರಿಸಿ ತಂದಿದ್ದು ಒಂದು ಶಿಸ್ತು ಬದ್ದ ವಾತಾವರಣವು ಇಲ್ಲಿ ನಿರ್ಮಾಣವಾದಂತಿದೆ ಎಂದರು.

ಬಂಟರ ಸಂಘ ಮುಂಬಯಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಉಮಾ ಕೃಷ್ಣಶೆಟ್ಟಿ ಯವರು ಮಾತನಾಡುತ್ತಾ ಆಟಿ ಮತ್ತು ಸೋಣ ತಿಂಗಳು  ತುಳುನಾಡಿನಲ್ಲಿ ಬಹಳ ವಿಶೇಷವಾದ ತಿಂಗಳುಗಳು.  ಆಟಿಕಳೆಂಜ ಮನೆಗೆ ಬಂದಲ್ಲಿ ರೋಗ ನಿವಾರಣೆಯಾಗುತ್ತದೆ ಎನ್ನುತ್ತಾರೆ.  ನಿಮ್ಮೆಲ್ಲರ ಪ್ರೋತ್ಸಾಹದಿಂದ ಶೈಲಜಾ ಅವರ ನೇತೃತ್ವದಲ್ಲಿ ಇಲ್ಲಿನ ಮಹಿಳಾ ವಿಭಾಗದ ಎಲ್ಲಾ ಕಾರ್ಯಕ್ರಮಗಳು ಸುಸಾಂಗವಾಗಿ ಅಚ್ಚುಕಟ್ಟಾಗಿ ನೆರವೇರುತ್ತಿದೆ ಎನ್ನಲು ಸಂತೋಷವಾಗುತ್ತಿದೆ.

ವೇದಿಕೆಯಲ್ಲಿ ಪ್ರಾದೇಶಿಕ ಸಮಿತಿಯ ಸಂಚಾಲಕ ರವೀಂದ್ರ ಯಸ್ ಶೆಟ್ಟಿ, ಹಿರಿಯ ಸಲಹೆಗಾರ  ಮನೋಹರ ಯನ್ ಶೆಟ್ಟಿ, ಉಪಕಾರ್ಯಾಧ್ಯಕ್ಷ ಕೆ. ಪ್ರೇಮನಾಥ ಶೆಟ್ಟಿ, ಯುವ ವಿಭಾಗದ ಧೀರಜ್ ಡಿ ರೈ, ಮಹಿಳಾ ವಿಭಾಗದ ಸಂಚಾಲಕಿ ವಿನೋದಾ ಅಶೋಕ್ ಶೆಟ್ಟಿ, ಉಪಕಾರ್ಯಾಧ್ಯಕ್ಷೆ ಸುನೀತಾ ಯನ್ ಹೆಗ್ಡೆ, ಕಾರ್ಯದರ್ಶಿ ರೇಖಾ ವೈ ಶೆಟ್ಟಿ, ಕೋಶಾಧಿಕಾರಿ ಯೋಗಿನಿ ಯಸ್ ಶೆಟ್ಟಿ, ಜತೆ ಕಾರ್ಯದರ್ಶಿ ಸರಿತಾ ಯಂ ಶೆಟ್ಟಿ, ಜತೆ ಕೋಶಾಧಿಕಾರಿ ಶುಭಾಂಗಿ ಯಸ್ ಶೆಟ್ಟಿ ಉಪಸ್ಥಿತರಿದ್ದರು. ಪದ್ಮಾವತಿ ಬಿ. ಶೆಟ್ಟಿ, ಜಯ ಶೆಟ್ಟಿ, ಸಂಕೇಶ್ ಯಸ್ ಶೆಟ್ಟಿ, ಪ್ರವೀಣ್ ಜೆ ಶೆಟ್ಟಿ ಚಂದ್ರಶೇಖರ  ಯಸ್ ಶೆಟ್ಟಿ ಬೆಳ್ಮಣ್ ಹಾಗೂ ಮಹಿಳಾ ವಿಭಾಗದ ಹಲವಾರು ಕಾರ್ರ್ಯಕರ್ತೆಯರು ಸಹಕರಿಸಿದರು .

ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶೈಲಜಾ ಅಮರ್ ನಾಥ್ ಶೆಟ್ಟಿಯವರು ಎಲ್ಲರಿಗೂ ಧನ್ಯವಾದ ಸಮರ್ಪಿಸುತ್ತಾ ಸಮಗ್ರ ಮಳೆಗಾಲದ ಎಲ್ಲಾ ತಿಂಗಳುಗಳ ಚಿತ್ರಣವನ್ನು ಪರಿಚಯಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮಕ್ಕೆ ಹೊಸ ಹೆಸರನ್ನು ನೀಡಿದ್ದೇವೆ. ಇಂದು ನಮ್ಮ ಮಹಿಳೆಯರು ವಿವಿಧ ಖಾದ್ಯಗಳನ್ನು ಮನೆಯಲ್ಲಿ ತಯಾರಿಸಿ ತಂದಿದ್ದು ಮಹಿಳಾ ಸದಸ್ಯರೆಲ್ಲರ ಪ್ರೋತ್ಸಾಹಕ್ಕೆ ನಾನು ಅಭಿನಂದನೆ ಸಲ್ಲಿಸುತ್ತಿರುವೆನು. ಅದೇ ರೀತಿ ಕಾರ್ಯಕ್ರಮಕ್ಕೆ ಸಹಕರಿಸಿದ ಸಮಿತಿಯ ಎಲ್ಲರಿಗೂ ಹಾಗೂ ಸದಸ್ಯೆಯರಿಗೂ ನಮನ ಸಲ್ಲಿಸಿದರು.

ಕಾರ್ಯಕ್ರಮವನ್ನು ಬಂಟರ ಸಂಘದ ಮುಂಡಪ್ಪ ಪಯ್ಯಡೆ,  ಉಮಾ ಕೃಷ್ಣ ಶೆಟ್ಟಿ ,  ಶಶಿಕಲಾ ಪೂಂಜ, ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ನಿಟ್ಟೆ ಯಂ ಜಿ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ  ಶೈಲಜಾ ಅಮರನಾಥ ಶೆಟ್ಟಿ ಹಾಗೂ ಎಲ್ಲಾ ಪದಾಧಿಕಾರಿಗಳು, ವಿನೋದಾ ಅಶೋಕ ಶೆಟ್ಟಿ, ಹಿರಿಯ ಸಲಹೆಗಾರ ಮನೋಹರ ಯನ್ ಶೆಟ್ಟಿ, ಮಾಜಿ ಕಾರ್ಯಾಧ್ಯಕ್ಷ ನಿತ್ಯಾನಂದ ಹೆಗ್ಡೆ , ಪ್ರೇಮನಾಥ ಶೆಟ್ಟಿ, ಅಶೋಕ ವಿ ಶೆಟ್ಟಿ, ಗಂಗಾಧರ ಎ ಶೆಟ್ಟಿ , ಧೀರಜ್ ಡಿ ರೈ ಮೊದಲಾದವರು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಚಾಲನೆಯಿತ್ತರು.  ರಜನಿ ರಘುನಾಥ ಶೆಟ್ಟಿಯವರು ಪ್ರಾರ್ಥನೆಯನ್ನು ಹಾಡಿದರು. 

ಬಳಿಕ  ಸದಸ್ಯರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಪ್ರತೀ ಹಾಡುಗಳ ಮಧ್ಯಂತರದಲ್ಲಿ ತುಳು ರಸಪ್ರಶ್ನೆ, ಒಗಟುಗಳನ್ನು ಕೇಳಿ, ಪಾಡ್ದನ ಹಾಗೂ ಪ್ರಾಚೀನ ತುಳುನಾಡಿನ ಹಲವಾರು ಮಾಹಿತಿಗಳನ್ನು ತಿಳಿಯಪಡಿಸಲಾಯಿತು. ನೆರೆದವರೆಲ್ಲರೂ ಉತ್ಸಾಹದಿಂದ ಭಾಗವಹಿಸಿದರು.

ಸಾಮಾಜಿಕ ಕಾರ್ಯಕರ್ತರಾದ ಎರ್ಮಾಳ್ ಹರೀಶ್ ಶೆಟ್ಟಿ, ಡಾ. ಹರೀಶ್ ಶೆಟ್ಟಿ, ಡಾ. ಸತೀಶ್ ಶೆಟ್ಟಿ, ನಿತೇಶ್ ಶೆಟ್ಟಿ, ಗೌತಮ್ ಶೆಟ್ಟಿ, ಅನಿತಾ ಶೆಟ್ಟಿ, ರತ್ನಾ ಶೆಟ್ಟಿ, ಶಿವರಾಮ ಶೆಟ್ಟಿ, ಸುಚಿತ್ರಾ ಶೆಟ್ಟಿ, ಅಮರನಾಥ ಶೆಟ್ಟಿ , ಶಾಲಿನಿ ಶೆಟ್ಟಿ ಮುಂತಾದವರನ್ನು ಗೌರವಿಸಲಾಯಿತು.  ಇತರ ಪ್ರಾದೇಶಿಕ ಸಮಿತಿಯ, ಮಹಿಳಾ ವಿಭಾಗದ ಮತ್ತು ಯುವ ವಿಭಾಗದ  ಪದಾಧಿಕಾರಿಗಳು ಮತ್ತು ಸದಸ್ಯರುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು  ಪ್ರಾದೇಶಿಕ ಸಮಿತಿಯ ಜೊತೆ ಕಾರ್ಯದರ್ಶಿ ರಘುನಾಥ ಎನ್. ಶೆಟ್ಟಿ ಯವರು ನಿರೂಪಿಸಿ,  ಹಿಂದಿನ ಕಾಲದ ತುಳುನಾಡಿನ ಜನರ ಆಚಾರ ವಿಚಾರ, ಮಳೆಗಾಲದಲ್ಲಿ ರೈತಾಪಿ ಜನರ ಕಷ್ಟದ ಬದುಕು, ಬಡತನದ ದಿನಗಳ ತಿಂಡಿ ತಿನಸುಗಳು, ಮನರಂಜನೆಯ ಸಾಧನಗಳು ಮುಂತಾದವುಗಳ ಸಮಗ್ರ ಚಿತ್ರಣವನ್ನು ಪರಿಚಯಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter